ಕೋವಿಡ್ ಜಾಗೃತಿ ಜಾಥಾ

Sunrise college covid awareness jatha photo
Published on

ಬೀದರ್: ಸನ್‍ರೈಸ್ ಶಿಕ್ಷಣ ಸಮೂಹ ಸಂಸ್ಥೆ ವಿದ್ಯಾರ್ಥಿಗಳು ನಗರದಲ್ಲಿ ಮಂಗಳವಾರ ಕೋವಿಡ್ ಜಾಗೃತಿ ಜಾಥಾ ನಡೆಸುವ ಮೂಲಕ ಗಮನ ಸೆಳೆದರು.

ಅಂಬೇಡ್ಕರ್ ವೃತ್ತದಿಂದ ಜಾಥಾ ಆರಂಭಿಸಿ, ಕ್ರಾಂತಿ ಗಣೇಶ, ಶಹಾಗಂಜ್ ಕಮಾನ್, ಮುಖ್ಯ ರಸ್ತೆ, ಗವಾನ್ ಚೌಕ್, ಚೌಬಾರಾ ಮೂಲಕ ಹಾಯ್ದು ನಯಾ ಕಮಾನ್‍ಗೆ ಬಂದು ಮುಕ್ತಾಯಗೊಳಿಸಿದರು.

ಕೈಯಲ್ಲಿ ಕೋವಿಡ್ ಸುರಕ್ಷತಾ ನಿಯಮಗಳ ಬರಹ ಹೊಂದಿದ್ದ ಪೋಸ್ಟರ್‍ಗಳನ್ನು ಹಿಡಿದುಕೊಂಡಿದ್ದ ವಿದ್ಯಾರ್ಥಿಗಳು ಘೋಷಣೆಗಳನ್ನು ಕೂಗಿದರು. ದಾರಿ ಉದ್ದಕ್ಕೂ ಸಾರ್ವಜನಿಕರಿಗೆ ಸಾವಿರಕ್ಕೂ ಅಧಿಕ ಉಚಿತ ಮಾಸ್ಕ್ ಹಾಗೂ ನೀರಿನ ಬಾಟಲಿಗಳನ್ನು ವಿತರಿಸಿದರು.

ಸನ್‍ರೈಸ್ ಶಿಕ್ಷಣ ಸಮೂಹ ಸಂಸ್ಥೆಯ ಕಾರ್ಯದರ್ಶಿ ಮಹಮ್ಮದ್ ಗೌಸ್ ಶೇಕ್ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್ ಎರಡನೇ ಅಲೆ ಶುರುವಾಗಿದೆ. ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಹೀಗಾಗಿ ಸಾರ್ವಜನಿಕರು ಸರ್ಕಾರದ ಮಾರ್ಗಸೂಚಿಗಳನ್ನು ಜಾಚೂತಪ್ಪದೆ ಪಾಲಿಸಬೇಕು ಎಂದು ಹೇಳಿದರು.

ಜನದಟ್ಟಣೆ ಸ್ಥಳಗಳಿಂದ ದೂರ ಇರಬೇಕು. ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಪಾಡಬೇಕು. ಸ್ಯಾನಿಟೈಸರ್ ಬಳಸಬೇಕು. ಕೈಗಳನ್ನು ಆಗಾಗ ಸಾಬೂನಿನಿಂದ ತೊಳೆದುಕೊಳ್ಳಬೇಕು. ನೆಗಡಿ, ಕೆಮ್ಮು, ಜ್ವರ ಕಂಡರೆ ಕೂಡಲೇ ವೈದ್ಯರನ್ನು ಕಾಣಬೇಕು. ಅವರು ಸಲಹೆ ನೀಡಿದ್ದಲ್ಲಿ ತಕ್ಷಣ ಕೋವಿಡ್ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕೋವಿಡ್‍ನಿಂದ ಒಂದು ವರ್ಷದ ಅವಧಿಯಲ್ಲಿ ಜಗತ್ತು ನಲುಗಿ ಹೋಗಿದೆ. ಕಾರಣ, ಸಾರ್ವಜನಿಕರು ಕೋವಿಡ್ ಅನ್ನು ನಿರ್ಲಕ್ಷಿಸಬಾರದು. ಪ್ರತಿಯೊಬ್ಬರೂ ಸುರಕ್ಷತಾ ನಿಯಮಗಳನ್ನು ಪಾಲಿಸಿ, ಸರ್ಕಾರಕ್ಕೆ ಸಹಕಾರ ನೀಡಿದ್ದಲ್ಲಿ ಮಾತ್ರ ಭಾರತವನ್ನು ಕೋವಿಡ್‍ಮುಕ್ತಗೊಳಿಸಲು ಸಾಧ್ಯವಿದೆ ಎಂದು ಹೇಳಿದರು.

ಸಂಸ್ಥೆಯ ಅಧ್ಯಕ್ಷ ಮಹಮ್ಮದ್ ಉಮರ್ ಶೇಕ್, ಮಹಮ್ಮದ್ ಮುದಸ್ಸಿರ್ ಶೇಕ್, ಪ್ರಾಚಾರ್ಯ ಮಹಮ್ಮದ್ ಗಯಾಸ್, ಉಪನ್ಯಾಸಕರಾದ ಆಕಾಶ, ವಿನೀತ್, ಮಹಮ್ಮದ್ ಖಾಲೀದ್, ಮತಿನ್, ಮಹಮ್ಮದ್ ಅಲಿ ಫೈಜನ್ ಪಾಲ್ಗೊಂಡಿದ್ದರು. ಸನ್‍ರೈಸ್ ಬಿ.ಎಸ್ಸಿ ನರ್ಸಿಂಗ್, ಫಾರ್ಮಸಿ ಹಾಗೂ ಫಿಜಿಯೊಥೆರಪಿ ವಿದ್ಯಾರ್ಥಿಗಳು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net