ಕೋವಿಡ್ ಎದುರಿಸಲು ಬಲಿಷ್ಠ ಆರೋಗ್ಯ ವ್ಯವಸ್ಥೆ ಅಗತ್ಯ : ರಾಜ್ಯ ನರ್ಸಿಂಗ್ ಕೌನ್ಸಿಲ್‌ನ ರಿಜಿಸ್ಟ್ರಾರ್ ಪ್ರಸನ್ನ ಕುಮಾರ್

jss nursing college mysore
Published on

ಮೈಸೂರು: ಕೋವಿಡ್‌ನಂತಹ ಸಾಂಕ್ರಾಮಿಕ ಕಾಯಿಲೆಗಳನ್ನು ಎದುರಿಸಲು ಬಲಿಷ್ಠವಾದ ಆರೋಗ್ಯ ವ್ಯವಸ್ಥೆ ಸೃಷ್ಟಿಸುವ ಅವಶ್ಯಕತೆ ಇದೆ ಎಂದು ರಾಜ್ಯ ನರ್ಸಿಂಗ್ ಕೌನ್ಸಿಲ್‌ನ ರಿಜಿಸ್ಟ್ರಾರ್ ಪ್ರಸನ್ನ ಕುಮಾರ್ ಅಭಿಪ್ರಾಯಪಟ್ಟರು.

ಜೆಎಸ್‌ಎಸ್ ಆಸ್ಪತ್ರೆಯ ಶಿಶ್ರ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡ ಜೆಎಸ್‌ಎಸ್ ನರ್ಸಿಂಗ್ ಕಾಲೇ ಜಿನ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಇದೀಗ ಮತ್ತೆ ಕೋವಿಡ್ ಸೋಂಕಿನ ಆತಂಕ ಕಾಣಿಸಿಕೊಳ್ಳಲು ಪ್ರಾರಂಭಿಸಿದ್ದು, ಕೋವಿಡ್ ಸೋಂಕನ್ನು ಎದುರಿಸಬೇಕಾಗಿದೆ ಎಂದರು.

ಆರೋಗ್ಯ ಕ್ಷೇತ್ರದಲ್ಲಿ ತಂತ್ರಜ್ಞಾನ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಶಸ್ತ್ರಚಿಕಿತ್ಸೆಗೆ ರೋಬೊಟ್‌ಗಳನ್ನು ಬಳಕೆ ಮಾಡಲಾಗುತ್ತಿದೆ. ಆದರೆ, ಎಷ್ಟೇ ತಂತ್ರಜ್ಞಾನ ಬಳಕೆಯಾದರೂ ವೈದ್ಯರು, ನರ್ಸ್‌ಗಳು ತೋರುವ ಪ್ರೀತಿಯಿಂದ ರೋಗಿಗಳು ಬೇಗನೆ ಗುಣವಾಗುತ್ತಾರೆ. ಈ ರೀತಿಯ ಪ್ರೀತಿ, ವಿಶ್ವಾಸವನ್ನು ರೋಬೊಟ್‌ಗಳಿಂದ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಎಲ್ಲ ಸಂದರ್ಭಗಳಲ್ಲೂ ರೋಗಿಯ ಬಳಿಯಲ್ಲಿ ವೈದ್ಯರು ಇರಲು ಸಾಧ್ಯವಿಲ್ಲ. ಆದರೆ, ನರ್ಸ್‌ಗಳು ಎಲ್ಲ ಸಂದರ್ಭದಲ್ಲೂ ರೋಗಿಗಳ ಬಳಿ ಇದ್ದು ಅವರ ಆರೋಗ್ಯವನ್ನು ವಿಚಾರಿಸಿಕೊಳ್ಳುತ್ತಾರೆ. ಹೀಗಾಗಿ ರೋಗಿಗಳು ಗುಣಮುಖವಾಗುವಲ್ಲಿ ನರ್ಸ್‌ಗಳು ಪ್ರಮುಖ ಪಾತ್ರ ನಿರ್ವಹಿಸುತ್ತಾರೆ ಎಂದು ಹೇಳಿದರು.

ಜೆಎಸ್‌ಎಸ್ ನರ್ಸಿಂಗ್ ಕಾಲೇಜಿನಂತಹ ಪ್ರತಿಷ್ಠಿತ ಸಂಸ್ಥೆಯಲ್ಲಿ ನೀವು ಪದವಿ ಪಡೆದುಕೊಂಡಿದ್ದೀರ. ಜಗತ್ತಿನ ಯಾವುದೇ ಭಾಗದಲ್ಲಾದರೂ ನೀವು ಸೇವೆ ಸಲ್ಲಿಸುವ ರೀತಿಯಲ್ಲಿ ನಿಮ್ಮನ್ನು ಸಂಸ್ಥೆ ಸಜ್ಜುಗೊಳಿಸಿದೆ. ನೀವು ಎಲ್ಲಾದರು ಕೆಲಸ ನಿರ್ವಹಿಸಿ, ಆದರೆ ಕರ್ತವ್ಯ ಸಂದರ್ಭ ವೃತ್ತಿ ಗೌರವವನ್ನು ಕಾಪಾಡಬೇಕು. ರೋಗಿಗಳಿಗೆ ಪ್ರೀತಿ, ವಾತ್ಸಲ್ಯ ತೋರಿ ಅವರು ಗುಣಮುಖರಾಗುವಂತೆ ಮಾಡಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭ ಒಟ್ಟು 92 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಮೆರಿಟೋರಿಯಸ್ ಪ್ರಶಸ್ತಿಯನ್ನು ಅಮಯಾ ಶಾಜಿ, ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿಯನ್ನು ನವಾಂಗ್, ಅತ್ಯುತ್ತಮ ಕ್ಲಿನಿಕಲ್ ಸ್ಟೂಡೆಂಟ್ ನರ್ಸ್ ಪ್ರಶಸ್ತಿಯನ್ನು ಕೇಸಿಯಾ, ಅತ್ಯುತ್ತಮ ಎಸ್‌ಎನ್‌ಎ ಎಗ್ಸಿಕ್ಯೂಟಿವ್ ಪ್ರಶಸ್ತಿಯನ್ನು ಮಂಜುನಾಥ್ ಹಾಗೂ ನವಾಂಗ್, ಅತ್ಯುತ್ತಮ ಎನ್‌ಎಸ್‌ಎಸ್ ಸ್ವಯಂಸೇವಕರು ಪ್ರಶಸ್ತಿಯನ್ನು ಎಂ.ಆರ್. ದರ್ಶನ್, ಬಿ.ಕೆ. ಮಂಜುನಾಥ್ ಪಡೆದುಕೊಂಡರು.

ವೇದಿಕೆಯಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ, ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್. ಮಹೇಶ್, ಪ್ರಾಂಶುಪಾಲರಾದ ಪ್ರೊ.ಎಂ.ಕೆ. ಅಶ್ವತಿದೇವಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net