ಕೋವಿಡ್ ಆಸ್ಪತ್ರೆಯಲ್ಲಿ ಹಂದಿಗಳ ಕ್ಯಾಟ್ವಾಕ್

17 KLB Pigs (2)
Published on

ವಿಜಯವಾಣಿ ವಿಶೇಷ ಕಲಬುರಗಿ
ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರ ನಡುವೆಯೇ ಕೋವಿಡ್ ಆಸ್ಪತ್ರೆಯಲ್ಲಿ ಹಂದಿಗಳ ಕ್ಯಾಟ್ವಾಕ್ ಸೇರಿ ಗಲೀಜು ಹೆಚ್ಚಿದೆ. ಕರೊನಾ ಕೇರ್ ಸೆಂಟರ್ಗಳಲ್ಲಿನ ಅವ್ಯವಸ್ಥೆಯೂ ಸದ್ದು ಮಾಡುತ್ತಿದೆ. ಇದರಿಂದಾಗಿ ರೋಗಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದು, ಜಿಲ್ಲಾಡಳಿತದ ದಿವ್ಯ ನಿರ್ಲಕ್ಷೃಕ್ಕೆ ಹಿಡಿದ ಕನ್ನಡಿಯಾಗಿದೆ.
ವೈರಸ್ ಅಂಟಿಸಿಕೊಂಡು ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ಆಸ್ಪತ್ರೆಯಾಗಿರುವ ಜಿಮ್ಸ ಪರಿಸರದಲ್ಲಿ ಹಂದಿಗಳು ಯಾರದ್ದೇ ಭಯವಿಲ್ಲದೆ ಬಿಂದಾಸ್ ವಿಹಾರ ಮಾಡುತ್ತಿರುವುದು ಕಂಡು ಬಂದಿದೆ. ಇದು ಆಸ್ಪತ್ರೆ ಶುಚಿತ್ವ ಹೇಗಿದೆ ಎಂಬುದರ ಸ್ಯಾಂಪಲ್ ಮಾತ್ರ.
ಸೋಂಕಿತರ ಆರೈಕೆ ಮಾಡುತ್ತಿರುವ ಜಿಮ್ಸ್ನಲ್ಲಿ ವೈದ್ಯಕೀಯ ಸಿಬ್ಬಂದಿ, ರೋಗಿಗಳ ಮಧ್ಯೆಯೇ ಹಂದಿಗಳ ಹಿಂಡು ಓಡಾಡುತ್ತಿರುವ ದೃಶ್ಯ ಮತ್ತಷ್ಟು ಆತಂಕ ಸೃಷ್ಟಿಸಿದೆ. ಮೊದಲೇ ಕರೊನಾದಿಂದ ಬೆಚ್ಚಿಬಿದ್ದಿರುವ ಜನತೆ ಇದೀಗ ಚಿಕಿತ್ಸೆ ನೀಡುತ್ತಿರುವ ಸ್ಥಳದಲ್ಲೇ ಹಂದಿಗಳು ಓಡಾಡುತ್ತಿರುವುದನ್ನು ಗಮನಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದೇನು ಆಸ್ಪತ್ರೆಯೋ ಅಥವಾ ಕೊಳೆಗೇರಿಯೋ ಎಂಬುದು ತಿಳಿಯದು. ಸೋಂಕಿತರು ಬೇಗ ಗುಣ ಹೊಂದಿ ಡಿಸ್ಚಾರ್ಜ ಆಗುವ ಬದಲಿಗೆ ಹಂದಿಗಳ ಓಡಾಟದಿಂದ ಎಲ್ಲಿ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಾರೋ ಎಂಬ ಭಯ ಮನೆ ಮಾಡಿದೆ. ಜಿಲ್ಲಾಡಳಿತ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವ ಮೂಲಕ ಶುಚಿತ್ವದ ಜತೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ರೋಗಿಗಳಲ್ಲಿರುವ ಆತಂಕ ದೂರ ಮಾಡಬೇಕು ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.
ಈ ಸಂಬಂಧ ಪ್ರತಿಕ್ರಿಯೆ ಪಡೆಯಲು ಜಿಮ್ಸ ವೈದ್ಯಕೀಯ ಅಧೀಕ್ಷಕ ಡಾ.ಮಹ್ಮದ್ ಶಫಿಯುದ್ದೀನ್ ಅವರಿಗೆ ಕರೆ ಮಾಡಿದರೂ ಸ್ವೀಕರಿಸಲಿಲ್ಲ.

ತೀವ್ರ ಹೊಟ್ಟೆ ನೋವಿನಿಂದ ಸೋಂಕಿತನ ನರಳಾಟ
ಜಿಮ್ಸ್ ಆಸ್ಪತ್ರೆಗೆ ಡಯಾಲಿಸಿಸ್ಗೆ ಬಂದ ಕಲಬುರಗಿ ಕೃಷ್ಣಾ ನಗರದ 45 ವರ್ಷದ ವ್ಯಕ್ತಿಯೊಬ್ಬರಿಗೆ ಮೊದಲು ಕರೊನಾ ಟೆಸ್ಟ್ ಮಾಡಿಸಲು ಹೇಳಿದ್ದಲ್ಲದೆ ಈ ವರದಿ ಬರುವವರೆಗೂ ಡಯಾಲಿಸಿಸ್ ಮಾಡಲ್ಲ ಎಂದಿದ್ದಾರೆ. ನಿಗದಿತ ಸಮಯಕ್ಕೆ ಆಸ್ಪತ್ರೆಗೆ ಬಂದಿದ್ದರೂ ಕೋವಿಡ್ ಟೆಸ್ಟ್ ವರದಿ ವಿಳಂಬವಾಗಿದೆ. ಹೀಗಾಗಿ ಡಯಾಲಿಸಿಸ್ ಮಾಡಿಲ್ಲ, ನಾಲ್ಕೈದು ದಿನ ಬಳಿಕ ಆತನಿಗೆ ಪಾಸಿಟಿವ್ ದೃಢಪಟ್ಟಿದ್ದರಿಂದ ಕೋವಿಡ್ ವಾರ್ಡ್​ ದಾಖಲಿಸಲಾಗಿದೆ. ಕರೊನಾಕ್ಕೆ ಉತ್ತಮ ಚಿಕಿತ್ಸೆಯೂ ಸಿಗದೆ, ಇತ್ತ ಡಯಾಲಿಸಿಸ್ ಇಲ್ಲದೆ ತೀವ್ರ ಹೊಟ್ಟೆ ನೋವಿನಿಂದ ನರಳಾಡುತ್ತಿದ್ದಾನೆ. ವೈದ್ಯರ ಗಮನಕ್ಕೆ ತಂದರೂ ಸ್ಪಂದಿಸುತ್ತಿಲ್ಲ ಎಂದು ಆತನ ಸಂಬಂಧಿಕರಾದ ರಾಜಶೇಖರ ಪಾಟೀಲ್ ಗೋಳು ತೋಡಿಕೊಂಡಿದ್ದಾರೆ. ಆತ ಅಲ್ಲಿ ಒದ್ದಾಡುತ್ತಿದ್ದು, ಹೊಟ್ಟೆ ಸಹ ಉಬ್ಬಿದೆ. ಹೀಗಾದರೆ ನಾವು ಏನು ಮಾಡೋಣ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಡಯಾಲಿಸಿಸ್ ವಿಳಂಬವಾದಷ್ಟು ರೋಗಿಗೆ ಅಪಾಯ ಹೆಚ್ಚು. ಕರೊನಾ ಪಾಸಿಟಿವ್ ಕಾಣಿಸಿದ್ದರಿಂದ ಆತನಿಗೆ ಸುರಕ್ಷತಾ ಕ್ರಮಗಳೊಂದಿಗೆ ಡಯಾಲಿಸಿಸ್ ಮಾಡಬಹುದಾಗಿದೆ. ಆದರೂ ಜಿಮ್ಸ್ ವೈದ್ಯರು ಮುಂದಾಗುತ್ತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net