ಕೋಳಿಫಾರಂಗೆ ಕೊಟ್ಟಿರುವ ಅನುಮತಿ ರದ್ದು ಪಡಿಸಿ

CTD RITA-J.N.KOTE.......
Published on

ಚಿತ್ರದುರ್ಗ: ಕೃಷಿ ಜಮೀನು ಖರೀದಿ ಕಾಯ್ದೆಗೆ ರಾಜ್ಯಸರ್ಕಾರ ತಂದಿರುವ ತಿದ್ದುಪಡಿಯಿಂದಾಗಿ ಆಂಧ್ರದ ಉದ್ಯಮಿಯೊಬ್ಬರು ಚಿತ್ರದುರ್ಗ ತಾಲೂಕು ಜೆಎನ್ ಕೋಟೆ ಸಮೀಪದ 40 ಎಕರೆ ಪ್ರದೇಶದಲ್ಲಿ ಕೋಳಿಫಾರಂ ಸ್ಥಾಪಿಸಲು ಅನುಮತಿ ಸಿಕ್ಕಿದೆ. ಇದರಿಂದ ರೈತರಿಗೆ ಆಗುವ ದ್ರೋಹ ಸಹಿಸಲಾಗದು ಎಂದು ರಾಜ್ಯರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.

ಜೆಎನ್‌ಕೋಟೆ ಬಳಿ ಶುಕ್ರವಾರ ರಾಜ್ಯರೈತ ಸಂಘ ಹಮ್ಮಿಕೊಂಡಿದ್ದ ರೈತರ ಹಕ್ಕೋತ್ತಾಯ ಸಮಾವೇಶದಲ್ಲಿ ಮಾತನಾಡಿ, ಉದ್ದೇಶಿತ ಕೋಳಿಫಾರಂಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಈಗಾಗಲೇ ಅನುಮತಿ ನೀಡಿರುವ ಗ್ರಾಪಂ ಪಿಡಿಒ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಜಿಲ್ಲಾಧಿಕಾರಿ, ಜಿಪಂ, ಜಿಲ್ಲಾ ಉಸ್ತು ವಾರಿ ಸಚಿವರ ನಿವಾಸದ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ರೈತರ ಬದುಕು ಮತ್ತು ಪರಿಸರ ಉಳಿವಿನ ಪ್ರಶ್ನೆಯಾಗಿದೆ. ಜೆಎನ್‌ಕೋಟೆ ಹಾಗೂ ಸುತ್ತಮುತ್ತಲಿನ ಎಂಟು ಹಳ್ಳಿಗಳ ರೈತರು, ಗ್ರಾ ಮಸ್ಥರಿಗೆ ಹಾಗೂ ಪರಿಸರಕ್ಕೆ ಹಾನಿಯಾಗುತ್ತದೆ. ನೊಣಗಳ ಹಾವಳಿ ಜಾಸ್ತಿಯಾಗಿ ದುರ್ವಾಸನೆ ಬೀರುತ್ತದೆ. ಆದ್ದರಿಂದ ಕೊಟ್ಟಿರುವ ಅನುಮತಿಯನ್ನು ರದ್ದುಪಡಿಸಬೇಕೆಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು.

ಜಿಲ್ಲಾಧಿಕಾರಿಯಿಂದ ಪ್ರಧಾನಿವರೆಗೆ ಎಲ್ಲರೂ ಜನ ಸೇವಕರೇ ವಿನಾ ಅವರು ದೊರೆಗಳಲ್ಲ. ಇಲ್ಲಿ ಕೈಗೊಳ್ಳುವ ನಿರ್ಣಯಕ್ಕೆ ಎಲ್ಲ ರೈತ ರು ಬದ್ಧ್ದರಾಗಿರಬೇಕು. ಚಳವಳಿಯಲ್ಲಿ ಶಿಸ್ತು ಕಡಿಮೆಯಾಗುತ್ತಿದೆ. ದಯನೀಯ ಸ್ಥಿತಿಯಲ್ಲಿ ಅಧಿಕಾರಿಗಳ ಮುಂದೆ ಕೈಮುಗಿದು ನಿಂತರೆ ಇಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವಿಧಾನಸೌಧದಲ್ಲಿ ಕುಳಿತು ಆಡಳಿತ ನಡೆಸುತ್ತಿರುವ ರಾಜಕಾರಣಿಗಳು ರೈತರನ್ನು ಹಗು ರವಾಗಿ ಕಾಣುತ್ತಿರುವುದರ ವಿರುದ್ಧ ಬೀದಿಗಿಳಿದು ಹೋರಾಟ ಮಾಡಬೇಕಿದೆ ಎಂದರು.

ತ್ಯಾಗ ಬಲಿದಾನದ ಇತಿಹಾಸವಿರುವ ಹಸಿರು ಟವಲ್ ಹೆಗಲ ಮೇಲೆ ಇದ್ದರೆ ಶಕ್ತಿ ಬರುತ್ತದೆ. ಕೃಷಿ ಪಂಪ್‌ಸೆಟ್‌ಗಳಿಗೆ ಸ್ಮಾರ್ಟ್ ಮೀ ಟರ್ ಅಳವಡಿಕೆ ವಿರೋಧಿಸಿ ಬೃಹತ್ ಚಳವಳಿ ನಡೆಸಲು ರೈತರು ಸಿದ್ಧರಾಗಬೇಕಿದೆ ಎಂದು ನಾಗೇಂದ್ರ ಹೇಳಿದರು.

ರಾಜ್ಯರೈತ ಸಂಘದ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಮಾತನಾಡಿ, ಕೋಳಿ ಫಾರಂಗೆ ಯಾವುದೇ ಕಾರಣಕ್ಕೂ ನಾವು ಅವಕಾಶ ಕೊಡುವುದಿಲ್ಲ ಎಂದರು.

ರಾಜ್ಯರೈತ ಸಂಘದ ಉಪಾಧ್ಯಕ್ಷ ಬಸ್ತಿಹಳ್ಳಿ ಜಿ.ಸುರೇಶ್‌ಬಾಬು ಮಾತನಾಡಿ, ಕುಕ್ಕಟೋದ್ಯಮಕ್ಕೆ ನಾವು ವಿರೋಧಿಗಳಲ್ಲ. ಮಳೆಗಾಲದಲ್ಲಿ ಕೋಳಿಫಾರಂ ತ್ಯಾಜ್ಯ ಕೆರೆ ಸೇರುವುದರಿಂದ ನೀರು ಕಲುಷಿತಗೊಳ್ಳುತ್ತದೆ. ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದರು.

ಪ್ರಧಾನ ಕಾರ್ಯದರ್ಶಿ ಎನ್.ಡಿ. ವಸಂತ್‌ಕುಮಾರ್, ವಲಯ ಉಪಾಧ್ಯಕ್ಷ ಹೊರಕೇರಪ್ಪ, ಜಿಲ್ಲಾಧ್ಯಕ್ಷ ಧನಂಜಯ ಹಂಪಯ್ಯನ ಮಾಳಿಗೆ, ಗೌರವಾಧ್ಯಕ್ಷ ತಿಪ್ಪೇಸ್ವಾಮಿ ಮಲ್ಲಾಪುರ, ಉಪಾಧ್ಯಕ್ಷ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಡಿಎಸ್‌ಹಳ್ಳಿ ಗ್ರಾಪಂ ಉಪಾಧ್ಯಕ್ಷೆ ಸುಧಾ, ಜೆಎನ್‌ಕೋಟೆ ಗ್ರಾಪಂ ಉಪಾಧ್ಯಕ್ಷೆ ನಾಗಮ್ಮ ಇತರರು ಇದ್ದರು. ಜೆಎನ್‌ಕೋಟೆ,ನರೇನಹಾಳ್,ಕಸವನಹಳ್ಳಿ,ಸಜ್ಜನಕೆರೆ, ಕಳ್ಳಿರೊಪ್ಪ,ಗೊಲ್ಲನಕಟ್ಟೆ,ಪಲ್ಲವ ಗೆರೆ,ಜೋಡಿಚಿಕ್ಕೇನಹಳ್ಳಿ,ಗೊಲ್ಲರಹಟ್ಟಿ,ಲಂಬಾಣಿಹಟ್ಟಿ, ಎಣ್ಣೆಗೆರೆ,ಓರಗುಂಟರಮಾಳಿಗೆ,ದೊಡ್ಡಸಿದ್ದವ್ವನಹಳ್ಳಿ ರೈತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net