ಕೋಳಿ ಅಂಗಡಿಗಳ ತೆರವು

22blrp1
ಬೇಲೂರು ಪುರಸಭೆ ವೇಲಾಪುರಿ ಸಭಾಂಗಣದಲ್ಲಿ ತಮ್ಮ ಕರೆಯಲಾಗಿದ್ದ ವಿಶೇಷ ಸಭೆಯಲ್ಲಿ ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ಮಾತನಾಡಿದರು. ಎಸ್.ಡಿ.ಮಂಜುನಾಥ್, ಜಮೀಲಾ ತೌಫಿಕ್ ಇದ್ದರು.
Published on

ಬೇಲೂರು: ಸಾರ್ವಜನಿಕರ ಬಹುದಿನಗಳ ಬೇಡಿಕೆಯಂತೆ ಡಾ.ಅಂಬೇಡ್ಕರ್ ಭವನದ ಸಮೀಪವಿರುವ ಕೋಳಿ ಅಂಗಡಿಗಳನ್ನು ತೆರವುಗೊಳಿಸಿ, ಅವರಿಗೆ ಬೇರೆಡೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಪುರಸಭೆ ಆಡಳಿತ ಮುಂದಾಗಿದೆ ಎಂದು ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ಹೇಳಿದರು.

ಪುರಸಭೆ ವೇಲಾಪುರಿ ಸಭಾಂಗಣದಲ್ಲಿ ಮಂಗಳವಾರ ಕರೆಯಲಾಗಿದ್ದ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಲವಾರು ವರ್ಷಗಳಿಂದ ಕೋಳಿ ಅಂಗಡಿ ತೆರವುಗೊಳಿಸುವಂತೆ ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ಒತ್ತಾಯಿಸುತ್ತಲೇ ಇದ್ದರು. ಆದರೆ ಅದು ನನೆಗುದಿಗೆ ಬಿದ್ದಿತ್ತು. ಈಗ ಎಲ್ಲ ಕೋಳಿ ಅಂಗಡಿಗಳನ್ನು ತೆರವುಗೊಳಿಸಿ, ಅವರಿಗೆ ಪರ್ಯಾಯ ಸ್ಥಳದಲ್ಲಿ ಮಳಿಗೆ ನಿರ್ಮಿಸಿ ಕೊಡಲಾಗುವುದು. ಪಟ್ಟಣದ ಹಳೇ ಮಾರುಕಟ್ಟೆ ಒಳ ಭಾಗದಲ್ಲಿರುವ ಹಳೆಯ ಶೆಡ್‌ಗಳನ್ನು ಮತ್ತು ಹರ್ಡಿಕರ್ ವೃತ್ತದಲ್ಲಿ ಪುರಸಭೆ ಜಾಗದಲ್ಲಿರುವ ಹಳೆಯದಾದ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸಿ ಅಲ್ಲಿರುವವರಿಂದಲೇ ಮುಂಗಡ ಹಣ ಪಡೆದು 17 ಮಳಿಗೆಗಳನ್ನು ನಿರ್ಮಿಸಲಾಗುವುದು. ಜತೆಗೆ ಕಳೆದ 20 ವರ್ಷಗಳಿಂದ ವಿತರಣೆಯಾಗದ ಆಶ್ರಯ ನಿವೇಶನಗಳನ್ನು ಜೂನಿಯರ್ ಕಾಲೇಜು ಹಿಂಭಾಗದ ಗುಡಿಸಲು ವಾಸಿಗಳು ಮತ್ತು ನಗರದ ಬಡವರನ್ನು ಗುರುತಿಸಿ ಅವರಿಗೆ ವಿತರಿಸಲಾಗುವುದು ಎಂದರು.

ಸದಸ್ಯ ಬಿ.ಗಿರೀಶ್ ಮಾತನಾಡಿ, ಡಾ.ಅಂಬೇಡ್ಕರ್ ಭವನದ ಸಮೀಪವಿರುವ ಕೋಳಿ ಅಂಗಡಿಗಳನ್ನು ತೆರವುಗೊಳಿಸಲು ನಮ್ಮ ಅಭ್ಯಂತರವಿಲ್ಲ. ಆದರೆ ಪಟ್ಟಣದಲ್ಲಿರುವ ಎಲ್ಲ ಕೋಳಿ ಅಂಗಡಿಗಳನ್ನು ಒಂದೇ ಕಡೆಗೆ ಹಾಕಲು ಗಮನ ಹರಿಸಬೇಕು. ಆಶ್ರಯ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಪುರಸಭೆಯಲ್ಲಿ ಸರ್ಕಾರ ಆಶ್ರಯ ಸಮಿತಿ ರಚಿಸದ ಕಾರಣ ಶಾಸಕರ ಅಧ್ಯಕ್ಷತೆಯಲ್ಲಿ, ನಗರ ಯೋಜನಾ ಸಹಾಯಕ ಆಯುಕ್ತರು, ತಹಸೀಲ್ದಾರ್, ಪುರಸಭೆ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳ ಸಮಿತಿಯಲ್ಲಿ ನಿರ್ಣಯ ಕೈಗೊಳ್ಳಬೇಕು. ಅದನ್ನು ಹೊರತುಪಡಿಸಿದರೆ ಇದರಲ್ಲಿ ಪುರಸಭೆ ಸದಸ್ಯರಿಗೂ ನಿವೇಶನ ಹಂಚಿಕೆಗೂ ಯಾವುದೇ ಸಂಬಂಧ ಇರುವುದಿಲ್ಲ. ಅಲ್ಲದೆ ಕೇವಲ ಗುಡಿಸಲು ನಿವಾಸಿಗಳಿಗೆ ಮತ್ತು ಪೌರಕಾರ್ಮಿಕರಿಗೆ ಹಂಚಿಕೆ ಮಾಡಲಾಗುತ್ತದೆ ಎಂದು ಪ್ರಸ್ತಾಪ ಮಾಡಿದ್ದೀರ. ಆದರೆ ಅವರೊಂದಿಗೆ ಪಟ್ಟಣದ 23 ವಾರ್ಡ್‌ಗಳಲ್ಲಿ ನಿವೇಶನ ರಹಿತ ನೀರು ಸರಬರಾಜುದಾರರು, ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ಬಡವರನ್ನೂ ಗುರುತಿಸಿ ಅವರಿಗೆ ನಿವೇಶನ ವಿತರಿಸಲು ಮುಂದಾಗಬೇಕು.

ಸದಸ್ಯರಾದ ಬಿ.ಸಿ.ಜಗದೀಶ್, ಶ್ರೀನಿವಾಸ್, ಸೌಮ್ಯಾ ಮಾತನಾಡಿ, ಈಗಾಗಲೇ ಹಳೇ ಮಾರುಕಟ್ಟೆ, ಹರ್ಡಿಕರ್ ವೃತ್ತದ ಬಳಿ ಸಾಕಷ್ಟು ವರ್ಷಗಳಿಂದ ಬಡವರು ಪೆಟ್ಟಿಗೆ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಈಗ ಆ ಅಂಗಡಿಗಳನ್ನು ತೆರವು ಮಾಡಿ ಹೊಸದಾಗಿ ಮಳಿಗೆ ನಿರ್ಮಿಸಲು ಹೊರಟಿರುವುದು ಸ್ವಾಗತಾರ್ಹ. ಆದರೆ ಕೆಲ ಸದಸ್ಯರ ಬಳಿಗೆ ಬಲಾಢ್ಯರು ತಮ್ಮ ಪ್ರಭಾವ ಬಳಸಿ ಅವರು ಮಳಿಗೆ ಪಡೆಯಲು ಹುನ್ನಾರ ನಡೆಸುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಇದರ ಬಗ್ಗೆ ಅಧ್ಯಕ್ಷರು, ಮುಖ್ಯಾಧಿಕಾರಿಗಳು ಗಮನ ಹರಿಸಬೇಕು ಎಂದರು.

ಮುಖ್ಯಾಧಿಕಾರಿ ಎಸ್.ಡಿ.ಮಂಜುನಾಥ್ ಮಾತನಾಡಿ, ಅಂಬೇಡ್ಕರ್ ಭವನದ ಸಮೀಪದ ಕೋಳಿ ಅಂಗಡಿಗಳನ್ನು ತೆರವುಗೊಳಿಸಿ ಅವರಿಗೆ 5ನೇ ವಾರ್ಡಿನಲ್ಲಿ ಮಳಿಗೆ ನಿರ್ಮಿಸಲು ಜಾಗ ಗುರುತಿಸಿದ್ದು, ಎಲ್ಲರಿಗೂ ಅಲ್ಲಿಯೇ ಮಳಿಗೆ ನಿರ್ಮಿಸಿ ಕೊಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಅಧ್ಯಕ್ಷೆ ತೀರ್ಥಕುಮಾರಿ ಮಾತನಾಡಿ, ಹಲವಾರು ವರ್ಷಗಳಿಂದ ಕೋಳಿ ಅಂಗಡಿ ವಿಷಯ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸಾಕಷ್ಟು ಬಾರಿ ಚರ್ಚೆಗೆ ಬಂದಿದ್ದು, ಪುರಸಭೆಯಿಂದ ಮಳಿಗೆ ನಿರ್ಮಿಸಿದ ನಂತರ ತೆರವುಗೊಳಿಸಲಾಗುವುದು. ಹಾಗೂ ಆಶ್ರಯ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವರ ಹಾಗೂ ಶಾಸಕರ ನೇತೃತ್ವದಲ್ಲಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಿರ್ಣಯ ಕೈಗೊಳ್ಳಲಾಗುವುದು ಎಂದರು.

ಸದಸ್ಯ ಜಮಾಲುದ್ದೀನ್ ಮಾತನಾಡಿ, ಸರ್ಕಾರದ ನಿರ್ದೇಶನದಂತೆ ಪಟ್ಟಣದ 23 ವಾರ್ಡ್‌ಗಳಲ್ಲಿ ಗೃಹಲಕ್ಷ್ಮೀ ಯೋಜನೆಯ ಕುರಿತು ಎಷ್ಟು ಫಲಾನುಭವಿಗಳನ್ನು ಗುರುತಿಸಲಾಗಿದೆ. ಸರ್ಕಾರದ ಮಹತ್ತರವಾದ ಯೋಜನೆಯ ಬಗ್ಗೆ ಸಭೆಗೆ ಸರಿಯಾದ ದಾಖಲೆ ತಾರದೆ ಸದಸ್ಯರಿಗೆ ಯಾವುದೇ ಮಾಹಿತಿ ನೀಡದೆ ಅಧಿಕಾರಿಗಳು ಸಾರ್ವಜನಿಕರ ದಿಕ್ಕು ತಪ್ಪಿಸುವ ಕೆಲಸ ಮಾಡುತಿದ್ದಾರೆ. ಸರ್ಕಾರದ ಯೋಜನೆ ಜನರಿಗೆ ತಲುಪುವಂತೆ ಮಾಡುವುದಕ್ಕೆ ಅಧಿಕಾರಿಗಳು ಮುಂದಾಗಬೇಕು ಎಂದರು.
ಅಧ್ಯಕ್ಷೆ ತೀರ್ಥಕುಮಾರಿ ಪ್ರತಿಕ್ರಿಯಿಸಿ, ಈಗಾಗಲೇ ಸರ್ಕಾರದ ಆದೇಶದಂತೆ ಪುರಸಭೆ ವ್ಯಾಪ್ತಿಯಲ್ಲಿ ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಕಾರ್ಯ ನಡೆಯುತ್ತಿದೆ. ಆದರೆ ಈಗ ಸರ್ಕಾರ ಪಟ್ಟಣದ ಆಯ್ದ ವೃತ್ತ ಹಾಗೂ ಜನಸಂದಣಿ ಇರುವೆಡೆ ಎಲ್‌ಇಡಿ ಸ್ಕ್ರೀನ್ ಅಳವಡಿಸಿ ಮಹಿಳೆಯರಿಗೆ ಮಾಹಿತಿ ನಿಡಬೇಕು ಎಂದು ಆದೇಶಿಸಿದೆ. ಅದರಂತೆ ಬೇಲೂರು ಪಟ್ಟಣದಲ್ಲಿ 8 ಭಾಗದಲ್ಲಿ ಎಲ್‌ಇಡಿ ಸ್ಕ್ರೀನ್ ಅಳವಡಿಸಿ ಕಾರ್ಯಕ್ರಮ ರೂಪಿಸಲಾಗುವುದು ಎಂದರು.

ವಿಶೇಷ ಸಭೆಯಲ್ಲಿ ಪುರಸಭೆ ಉಪಾಧ್ಯಕ್ಷೆ ಜಮೀಲಾ ತೌಫಿಕ್ ಹಾಗೂ ಸದಸ್ಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net