ಕೋಲಾರದಿಂದ ನಗರಕ್ಕೆ 12 ಗಂಟೆ ಸೈಕ್ಲಿಂಗ್

mysore
Published on

ಮೈಸೂರು: ಸಮಾನತೆಯ ಸಂದೇಶದೊಂದಿಗೆ ವಿಶ್ವ ದಾಖಲೆ ಎಂಬ ಘೋಷಣೆಯಡಿ ಬಿ.ಎಂ.ಶ್ರೀನಿವಾಸ್ ಅವರು ಚಿನ್ನದ ನಾಡು ಕೋಲಾರದಿಂದ ಸಾಂಸ್ಕೃತಿಕ ನಗರಿ ಮೈಸೂರಿನವರೆಗೆ 12 ಗಂಟೆ ಸೈಕ್ಲಿಂಗ್ ಮಾಡಿ ಗಮನ ಸೆಳೆದರು.

ದೈಹಿಕ ಶಿಕ್ಷಣ ಶಿಕ್ಷಕರಾಗಿರುವ 60 ವರ್ಷದ ಇವರನ್ನು ದಲಿತ ಸಂಘರ್ಷ ಸಮಿತಿ ನಗರಕ್ಕೆ ಅದ್ದೂರಿಯಾಗಿ ಬರಮಾಡಿಕೊಂಡಿತು.

ಪುರಭವನದ ಆವರಣದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಜೈ ಭೀಮ್ ಘೋಷಣೆಗಳ ಮೂಲಕ ಶ್ರೀನಿವಾಸ್ ಅವರನ್ನು ಅಭಿನಂದಿಸಲಾಯಿತು.

ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ ಮಾತನಾಡಿ, ಸಮಾನತೆ ಸಂದೇಶ ಸಾರಲು ಸೈಕಲ್ ಸವಾರಿಯ ಮೂಲಕ ದಾಖಲೆ ನಿರ್ಮಿಸಲು ಮುಂದಾಗಿರುವ ಶ್ರೀನಿವಾಸ್ ಅಭಿನಂದನಾರ್ಹರು. ಪ್ರಸ್ತುತ ಭಾರತ ಬುದ್ಧ ಬಯಸಿದ ಭಾರತವಾಗಿಲ್ಲ. ಜಾತಿ-ಧರ್ಮಗಳ ನಡುವೆ ಕಂದಕ ವಿಸ್ತಾರವಾಗುತ್ತಿದೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಸಮಾನತೆಯ ಕನಸನ್ನು ಹೊತ್ತು ಸೈಕಲ್ ಯಾತ್ರೆ ಕೈಗೊಂಡಿರುವುದು ಜನ ಮೆಚ್ಚಬೇಕಾದ ಕೆಲಸ. ಅಂಬೇಡ್ಕರ್ ಚಿಂತನೆಗಳಂತೆ ದೇಶ ಸಾಗಬೇಕು ಎಂದರು.

ಸಂಘಟನೆಯ ಆಲಗೂಡ ಶಿವಕುಮಾರ್, ಶಂಭುಲಿಂಗಸ್ವಾಮಿ, ಕಲ್ಲಳ್ಳಿ ಕುಮಾರ್, ಬಿ.ಡಿ.ಶಿವಬುದ್ಧಿ, ಹೆಗ್ಗನೂರು ಲಿಂಗರಾಜು, ಹುಣಸೂರು ರಾಮಕೃಷ್ಣ, ರಾಜು, ಎಚ್.ಡಿ.ಕೋಟೆ ಮಹೇಶ್, ಸಿದ್ದರಾಜು, ದಾಸಯ್ಯ, ಸರಗೂರು ಕಾಳಸ್ವಾಮಿ, ರಾಜು ಕುಕ್ಕೂರು, ಚಂದ್ರಶೇಖರ್, ಸೋಮಶೇಖರ್ ಇನ್ನಿತರರಿದ್ದರು.

ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಶ್ರೀನಿವಾಸ್ ಅವರನ್ನು ಅಭಿನಂದಿಸಿದರು. ಜಿಡಬ್ಲುೃಆರ್ ಸಂಸ್ಥೆಯ ಮುಖ್ಯಸ್ಥೆ ಪೂಜಾ, ಸೈಕ್ಲಿಂಗ್ ಸಹಾಯಕರಾದ ಸುಹಾಸ್, ಸುಜೀತ್, ಮುಖಂಡರಾದ ಮುರುಡಗಳ್ಳಿ ಮಂಜು, ನಿಂಗರಾಜು ಬೇರಂಬಾಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net