

ಕೋಲಾರ: ಶ್ರೀರಾಮನವಮಿ ಪ್ರಯುಕ್ತ ನಗರದಲ್ಲಿ ಆಯೋಜಿಸಿದ್ದ ಶೋಭಾಯಾತ್ರೆ ಹಲವು ವಿವಾದ, ಆತಂಕ ಮತ್ತು ಗೊಂದಲದ ಮಧ್ಯೆ ಸುಸೂತ್ರವಾಗಿ ನಡೆಯಿತು. ಶ್ರೀರಾಮನ ಭಕ್ತರು ಶೋಭಾಯಾತ್ರೆಯಲ್ಲಿ ಕುಣಿದು ಕುಪ್ಪಳಿಸಿದರು. ಮುತಾಲಿಕ್ ದಿಢೀರ್ ಆಗಮನ ಪೊಲೀಸ್ ಇಲಾಖೆಯನ್ನು ತಬ್ಬಿಬ್ಬಾಗುವಂತೆ ಮಾಡಿತ್ತು.
ಜಿಲ್ಲಾಡಳಿತದ ನಿರಾಕರಣೆ ನಡುವೆಯೂ ಶ್ರೀರಾಮಸೇನೆ ಮೆರವಣಿಗೆ ಜತೆ ಬೃಹತ್ ಶೋಭಾಯಾತ್ರೆ ಆಯೋಜಿಸಿತ್ತು. ಮುಸ್ಲಿಮರು ಹೆಚ್ಚಾಗಿರುವ ಪ್ರದೇಶಗಳಿಗೆ ತೆರಳದಂತೆ ಎಂಜಿ ರಸ್ತೆ, ಎಂಜಿ ಚೌಕ, ಎಲೇಪೇಟೆ ವೃತ್ತ, ಸರ್ವಜ್ಞ ವೃತ್ತದ ಮೈಲಕ ಬಂಗಾರಪೇಟೆ ವೃತ್ತದಲ್ಲಿ ಹಾದು ಡೂಂಲೈಟ್ ವೃತ್ತದಲ್ಲಿ ಮೆರವಣಿಗೆ ಅಂತ್ಯವಾಗುವಂತೆ ಶಾಂತ ರೀತಿಯಿಂದ ನಡೆಸಿದರೆ ನಡೆಸಿಕೊಳ್ಳಲಿ ಎಂದು ಪೊಲೀಸರು ಸುಮ್ಮನಿದ್ದರು. ಆದರೆ ಶೋಭಾಯಾತ್ರೆ ಆರಂಭವಾಗಬೇಕು ಎನ್ನುವಷ್ಟರಲ್ಲಿ ಪ್ರಮೋದ್ ಮುತಾಲಿಕ್ ದಿಢೀರ್ ಪ್ರತ್ಯಕ್ಷವಾಗಿದ್ದರು. ಆದರೆ ಈ ಹಿಂದೆ ಪ್ರಮೋದ್ ಮುತಾಲಿಕ್ ಅವರಿಗೆ ಜಿಲ್ಲೆಯ ಪ್ರವೇಶಕ್ಕೆ ಜಿಲ್ಲಾಡಳಿತ ರ್ನಿಬಂಧ ವಿಧಿಸಿದ್ದ ಕಾರಣ ಅವರಿಗೆ ಶೋಭಾಯಾತ್ರೆಯಲ್ಲಿ ಭಾಗವಹಿಸಲು ಅವಕಾಶ ನೀಡದೆ ಶ್ರೀರಾಮನಿಗೆ ಪೂಜೆ ಸಲ್ಲಿಸಿ 20 ನಿಮಿಷ ಕಾಲಾವಕಾಶ ಕೊಟ್ಟು ವಾಪಸ್ ತೆರವಳುವಂತೆ ಸೂಚನೆ ನೀಡಿದರು.
ಪೊಲೀಸರಿಗೆ, ಗುಪ್ತಚರ ವಿಭಾಗಕ್ಕೂ ಮಾಹಿತಿ ಇಲ್ಲದೆ ಮುತಾಲಿಕ್ ಪ್ರತ್ಯಕ್ಷರಾಗಿದ್ದು, ಅವರನ್ನು ಮುತ್ತಿಕೊಂಡ ಕಾರ್ಯಕರ್ತರು ತೆರೆದ ಜೀಪ್ನಲ್ಲಿ ಕರೆದೊಯ್ದು ಜೈಕಾರಗಳನ್ನು ಹಾಕಿದರು. ನಂತರ ಶ್ರೀರಾಮ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಿದರು. ಆದರೆ ಮೆರವಣಿಗೆ, ಮುತಾಲಿಕ್ ಭಾಗವಹಿಸುವುದನ್ನು ನಿರೀಕ್ಷಿಸಿರದ ಜಿಲ್ಲಾ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾದರು. ಮುತಾಲಿಕ್ ಇದ್ದ ತಾತ್ಕಾಲಿಕ ಪೂಜಾಮಂದಿರದ ಸುತ್ತ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್ ಮತ್ತು ಇತರ ಪೊಲೀಸ್ ಅಧಿಕಾರಿಗಳು ಸುತ್ತುವರಿದರು.
ನಂತರ ಮುತಾಲಿಕ್ ಗಾಂಧಿ ವನದ ಬಳಿ ತಾತ್ಕಾಲಿಕವಾಗಿ ಸ್ಥಾಪಿಸಿದ್ದ ಮಂದಿರದಲ್ಲಿ ಶ್ರೀರಾಮನಿಗೆ ಪೂಜೆ ಸಲ್ಲಿಸಿ ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕೇಸರಿ ಬಾವುಟ ಹಾರಿಸಿ ಭಾರತ್ ಮಾತಾಕಿ ಜೈ ಘೋಷಣೆ ಕೂಗಿ ಹೊರಟರು. ಇದೇ ವೇಳೆ ಮಾತನಾಡಿದ ಮುತಾಲಿಕ್, ಕೋಲಾರ ಪಾಕಿಸ್ತಾನದಲ್ಲಿಲ್ಲ, ನಾನು ಕೋಲಾರಕ್ಕೆ ಬಾರದಂತೆ ರ್ನಿಬಂಧ ವಿಧಿಸಲಾಗಿದೆ. ಇದು ತಪು$್ಪ, ಯಾರು ಸಂಚು ಮಾಡಿ ಗಲಭೆ ಸೃಷ್ಟಿಸುತ್ತಾರೋ ಅವರನ್ನು ಬಂಧಿಸಬೇಕು ಎಂದರು.
ಪೊಲೀಸರ ಸೂಚನೆ ಮೇರೆಗೆ ಕೋಲಾರದಿಂದ ಮುತಾಲಿಕ್ ವಾಪಸ್ ತೆರಳಿದರು. ಅಷ್ಟೊತ್ತಿಗಾಗಲೇ ಶೋಭಾಯಾತ್ರೆಗೆ ಮಾಡಿಕೊಂಡಿದ್ದ ಸಿದ್ಧತೆ ಹಿನ್ನೆಲೆ ಹಾಗೂ ನಗರದ ಎಂ.ಜಿ.ರಸ್ತೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆ ಮಾಡಿದ್ದ ಶ್ರೀರಾಮ ಮೂರ್ತಿಯನ್ನು ವಿಸರ್ಜನೆ ಮಾಡುವ ಸಲುವಾಗಿ ಎಂ.ಜಿ.ರಸ್ತೆ ಮೂಲಕ, ಗಾಂಧಿ ಚೌಕ, ಕಾಲೇಜು ವೃತ್ತ, ಬಂಗಾರಪೇಟೆ ವೃತ್ತದ ಮೂಲಕ ಶ್ರೀರಾಮ ಮೂರ್ತಿಯ ಮೆರವಣಿಗೆ ಹಾಗೂ ಶೋಭಾಯಾತ್ರೆ ನಡೆಯಿತು. ಕೋಲಾರ ಎಸ್ಪಿ ಡಿ.ದೇವರಾಜ್ ಸ್ವತ@ ಬಂದೋಬಸ್ತ್ ಉಸ್ತುವಾರಿ ವಹಿಸಿಕೊಂಡು ಶೋಭಾಯಾತ್ರೆಗೆ ಅನುವು ಮಾಡಿಕೊಟ್ಟರು.
ಶೋಭಾಯಾತ್ರೆ ಮದ್ಯದಲ್ಲಿ ಸಂಸದ ಮುನಿಸ್ವಾಮಿ ಹಾಗೂ ಶಾಸಕ ರಾಜೂಗೌಡ ಕೂಡ ಕೆಲ ಕಾಲ ಭಾಗವಹಿಸಿ ನಿರ್ಗಮಿಸಿದರು. ಮೂರು ದಿನಗಳಿಂದ ಜಿಲ್ಲೆಯಲ್ಲಿ ಶೋಭಾಯಾತ್ರೆ ವಿವಾದ ಸಾಕಷ್ಟು ಆತಂಕಕ್ಕೆ ಕಾರಣವಾಗಿದ್ದು ಅಹಿತಕರ ಘಟನೆಗಳು ನಡೆಯದಂತೆ ನೆರವೇರಿತು. ಕ್ಷಣ ಕ್ಷಣದ ಬದಲಾವಣೆಗಳನ್ನು ಪೊಲೀಸರು ಬುದ್ಧಿವಂತಿಕೆಯಿಂದ ನಿಭಾಯಿಸಿ ಜನರ ಮೆಚ್ಚುಗೆಗೆ ಪಾತ್ರರಾದರು.
ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ, ಬೆಂಗಳೂರು ನಗರ ಅಧ್ಯಕ್ಷ ಚಂದ್ರಶೇಖರ್, ವಿಭಾಗೀಯ ಕಾರ್ಯದರ್ಶಿ ಸಂದೇಶ್ ನರಗಲ್, ವಿಭಾಗೀಯ ಅಧ್ಯಕ್ಷ ರಮೇಶ್ ರಾಜ್ ಅರಸ್, ಜಿಲ್ಲಾಧ್ಯಕ್ಷ ಅರುಣ್ ಪ್ರಕಾಶ್, ನಗರ ಕಾರ್ಯದರ್ಶಿ ಸುಪ್ರೀತ್, ಮುಖಂಡರಾದ ಗೌತಂ ಚಂದ್ರಶೇಖರ್, ಹೇಮಂತ್, ಭಜರಂಗದಳದ ಬಾಲಾಜಿ ಅಪ್ಪಿ ಮತ್ತಿತರರು ಭಾಗವಹಿಸಿದ್ದರು. ಎಎಸ್ಪಿ ಸಚಿನ್ ಘೋರ್ಪಡೆ ಮತ್ತಿತರ ಪೊಲೀಸ್ ಅಧಿಕಾರಿಗಳು ಬಂದೋಬಸ್ತ್ನಲ್ಲಿ ಪಾಲ್ಗೊಂಡಿದ್ದರು.
ನಾನೇನು ಕದ್ದುಮುಚ್ಚಿ ಬಂದಿಲ್ಲ. ಮೆರವಣಿಗೆಯಲ್ಲಿ ಭಾಗವಹಿಸುವುದರಿಂದ ಅನಾಹುತವೇನೂ ಆಗುವುದಿಲ್ಲ. ಪೊಲೀಸರು ರ್ನಿಬಂಧ ವಿಧಿಸುವುದು ಸರಿಯಲ್ಲ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅಸಮಾಧಾನ ವ್ಯಕ್ತಪಡಿಸಿದರು.
ಶ್ರೀರಾಮ ಮೂರ್ತಿಗೆ ಪುಷ್ಪನಮನ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಭಾರತ ದೇಶ ಹಿಂದು ರಾಷ್ಟ್ರ ಆಗಬೇಕು ಅನ್ನೋ ದೃಷ್ಟಿಕೋನದಿಂದಲೇ ಶ್ರೀರಾಮ ನವಮಿ ಆಚರಣೆ ಮಾಡ್ತಾ ಇದ್ದೇವೆ. ಕೋಲಾರಕ್ಕೆ ಮುತಾಲಿಕ್ ಬಂದರೆ ಏನೋ ನಡೆದು ಬಿಡುತ್ತೆ ಅಂತಾರೆ. ಆದರೆ ಅಂತಹುದೇನೂ ಅನಾಹುತ ನಡೆಯೋದಿಲ್ಲ. ಪೊಲೀಸರು ಎಲ್ಲವನ್ನೂ ನಿರ್ವಹಿಸುಸ್ತಾರೆ. ಮುಳಬಾಗಿಲಿನಲ್ಲಿ ಶ್ರೀರಾಮ ಶೋಭಾಯಾತ್ರೆ ಕಲ್ಲು ತೂರಾಟ ಪ್ರಕರಣ ಅದು ಅನ್ಯಕೋಮಿನವರ ವ್ಯವಸ್ಥಿತ ಪಿತೂರಿ. ಅದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಅದು ಪೂರ್ವ ನಿಯೋಜಿತ ಕೃತ್ಯವಾಗಿದ್ದು, ವಿದ್ಯುತ್ ತೆಗೆದು ಶೋಭಾಯಾತ್ರೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಕಲ್ಲು ತೂರಿದ ದುಷ್ಕರ್ಮಿಗಳು ಮತ್ತು ಅವರ ಹಿಂದಿರುವ ಶಕ್ತಿಗಳನ್ನು ಪತ್ತೆಹಚ್ಚಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಎಸ್ಪಿ ದೇವರಾಜ್ ಗರಂ: ಜಿಲ್ಲಾಡಳಿತದಿಂದ ಗಾಂಧಿವನದಲ್ಲಿ ಶ್ರೀರಾಮ ಮೂರ್ತಿಯ ಪೂಜೆಗೆ ಅನುಮತಿ ನೀಡಲಾಗಿದೆ. ಆದರೆ ಮೆರವಣಿಗೆಗೆ ಅನುಮತಿ ನೀಡಿದವರು ಯಾರು? ಮುತಾಲಿಕ್ ಬರುವುದನ್ನು ಗೌಪ್ಯವಾಗಿಟ್ಟಿದ್ದೇಕೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್ ವಿಭಾಗೀಯ ಅಧ್ಯಕ್ಷ ರಮೇಶ್ರಾಜ್ ಅರಸ್, ಜಿಲ್ಲಾಧ್ಯಕ್ಷ ಅರುಣ್ ಪ್ರಕಾಶ್ ಅವರನ್ನು ತರಾಟೆಗೆ ತೆಗೆದುಕೊಂಡರು. ಆಗ ನಗರಠಾಣೆ ವೃತ್ತ ನಿರೀಕ್ಷಕ ರಾಘವೇಂದ್ರಪ್ರಕಾಶ್ ಅವರ ಒಪ್ಪಿಗೆ ಪಡೆದಿದ್ದೇವೆ ಎಂದು ಮುಖಂಡರು ಹೇಳುತ್ತಿದ್ದಂತೆ ಕೆಂಡಾಮಂಡಲರಾದ ಎಸ್ಪಿ ದೇವರಾಜ್, ಪೊಲೀಸ್ ಕೆಲಸ ನನಗೆ ಚೆನ್ನಾಗಿ ಗೊತ್ತಿದೆ. ನೀವು ಮೌಖಿಕವಾಗಿ ನಮ್ಮ ಅಧಿಕಾರಿಯಿಂದ ಅನುಮತಿ ಪಡೆದಿದ್ದು, ಅದರಂತೆ ನಡೆದುಕೊಂಡಿದ್ದೀರಾ? ಏನಾದರೂ ಅನಾಹುತವಾದರೆ ಯಾರು ಜವಾಬ್ದಾರಿ? ಮೊದಲು ಗೌರವ ಕೊಡುವುದನ್ನು ಕಲಿಯಿರಿ ಎಂದು ಎಚ್ಚರಿಸಿದರು.