ಕೋಲಾರದಲ್ಲಿ 279 ಮಂದಿಗೆ ಕರೊನಾ ದೃಢ

20 Budikote 4 Pakarahalli sealdown
Published on

ಕೋಲಾರ: ಜಿಲ್ಲೆಯಲ್ಲಿ ಮಂಗಳವಾರ 272 ಮಂದಿಗೆ ಸೋಂಕು ದೃಢಪಡುವುದರೊಂದಿಗೆ ಒಂದು ವರ್ಷದ ಅವಧಿಯಲ್ಲಿ ಒಂದೇ ದಿನ ಅತಿ ಹೆಚ್ಚು ಪ್ರಕರಣ ಪತ್ತೆಯಾಗಿದೆ.

ಕೋಲಾರ ತಾಲೂಕು ಒಂದರಲ್ಲೇ 125 ಮಂದಿಗೆ ಸೋಂಕು ದೃಢಪಟ್ಟರೆ, ಮಾಲೂರು 69, ಬಂಗಾರಪೇಟೆ 29, ಕೆಜಿಎಫ್ 15, ಮುಳಬಾಗಿಲು 23 ಹಾಗೂ ಶ್ರೀನಿವಾಸಪುರದಲ್ಲಿ 11 ಮಂದಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರ ಸಂಪರ್ಕದಲ್ಲಿದ್ದ 1848 ಮಂದಿ ಮೇಲೆ ನಿಗಾ ಇಡಲಾಗಿದೆ. 3078 ಮಾದರಿ ಪರೀಕ್ಷೆಗೆ ಪಡೆಯಲಾಗಿದೆ. 2806 ಮಾದರಿಗಳ ಫಲಿತಾಂಶ ನೆಗೆಟಿವ್ ಬಂದಿದೆ. 3200 ಮಾದರಿಗಳ ಫಲಿತಾಂಶ ಬರಬೇಕಿದೆ.

105 ಮಂದಿ ಗುಣಮುಖ: ಕೋಲಾರದಲ್ಲಿ 45, ಮಾಲೂರು 14, ಬಂಗಾರಪೇಟೆ 19, ಕೆಜಿಎಫ್ 18, ಮುಳಬಾಗಿಲು 5, ಶ್ರೀನಿವಾಸಪುರದಲ್ಲಿ 4 ಸೇರಿ ಒಟ್ಟು 105 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 12388ಕ್ಕೆ ಏರಿಕೆಯಾಗಿದ್ದು, 11331 ಮಂದಿ ಗುಣಮುಖರಾಗಿದ್ದಾರೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 868ಕ್ಕೆ ಏರಿಕೆಯಾಗಿದೆ. 26 ಮಂದಿ ಐಸಿಯುನಲ್ಲಿದ್ದಾರೆ.

ಡಿಸಿ ಭೇಟಿ: ಬಂಗಾರಪೇಟೆ ತಾಲೂಕಿನ ಪಾಕರಹಳ್ಳಿಯಲ್ಲಿ ಕರೊನಾ ವ್ಯಾಪಕವಾಗಿ ಹರಡಿರುವ ಹಿನ್ನೆಲೆಯಲ್ಲಿ ಡಿಸಿ ಡಾ. ಆರ್.ಸೆಲ್ವಮಣಿ, ಜಿಪಂ ಸಿಇಒ ಎನ್.ಎಂ. ನಾಗರಾಜ್ ಬಂಗಾರಪೇಟೆ ತಾಲೂಕು ಕಚೇರಿಗೆ ಭೇಟಿ ನೀಡಿ ಕರೊನಾ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿ ಸಲಹೆ, ಸೂಚನೆ ನೀಡಿದರು. ತಹಸೀಲ್ದಾರ್ ದಯನಾಂದ್, ತಾಲೂಕು ಆರೋಗ್ಯಾಧಿಕಾರಿ ಡಾ. ಸರಸ್ವತಿ ಹಾಜರಿದ್ದರು.

ಪಾಕರಹಳ್ಳಿ ಸೀಲ್‌ಡೌನ್: ಬಂಗಾರಪೇಟೆ ತಾಲೂಕಿನಲ್ಲಿ ಕರೊನಾ ವ್ಯಾಪಕವಾಗಿ ಹರಡುತ್ತಿದ್ದು, ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಹೆಚ್ಚು ಪ್ರಕರಣ ಕಾಣಿಸಿಕೊಂಡ ಪಾಕರಹಳ್ಳಿಯನ್ನು ಸೀಲ್‌ಡೌನ್ ಮಾಡಲಾಗಿದೆ ಎಂದು ತಹಸೀಲ್ದಾರ್ ಎಂ.ದಯಾನಂದ ಹೇಳಿದರು. ಬಂಗಾರಪೇಟೆ ತಾಲೂಕಿನ ಚಿಕ್ಕಅಂಕಂಡಹಳ್ಳಿ ಗ್ರಾಪಂ ವ್ಯಾಪ್ತಿಯ ಪಾಕರಹಳ್ಳಿಯನ್ನು ಸೀಲ್‌ಡೌನ್ ಮಾಡಿ ಕರೊನಾ ಸೋಂಕಿತರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಪಾಕರಹಳ್ಳಿಯಲ್ಲಿ ಮಂಗಳವಾರ 8 ಜನರಿಗೆ ಸೋಂಕು ದೃಢಪಟ್ಟಿದ್ದು, ಇದೂವರೆಗೆ 18 ಕೇಸ್ ದಾಖಲಾಗಿದೆ. 3 ಮಂದಿ ಸೋಂಕಿನಿಂದ ಮೃತಪಟ್ಟಿದ್ದು, 11 ಸಕ್ರಿಯ ಪ್ರಕರಣಗಳಿವೆ. ಗ್ರಾಮವನ್ನು ವಾರದ ಮಟ್ಟಿಗೆ ಸೀಲ್‌ಡೌನ್ ಮಾಡಿ ಎಲ್ಲ ಕಡೆ ಬ್ಯಾರಿಕೇಡ್ ಹಾಕಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಹೇಳಿದರು. ಚಿಕ್ಕ ಅಂಕಂಡಹಳ್ಳಿ ಪಂಚಾಯಿತಿಯಲ್ಲಿ ಒಬ್ಬರಿಗೆ ಕರೊನಾ ಸೋಂಕು ದೃಢಪಟ್ಟಿರುವ ಕಾರಣ ಇತರ ಸಿಬ್ಬಂದಿ ಪರೀಕ್ಷೆಗೆ ಮಾದರಿ ನೀಡಿದ್ದಾರೆ.

ಐನೋರಹೊಸಹಳ್ಳಿ ಗ್ರಾಮದ ಪಂಚಾಯಿತಿ ಸಿಬ್ಬಂದಿಯೊಬ್ಬರಿಗೆ ಸೋಂಕು ಧೃಡಪಟ್ಟಿರುವುದರಿಂದ ಪಂಚಾಯಿತಿ ಸೀಲ್‌ಡೌನ್ ಮಾಡಿದ್ದಾರೆ. ತಾಪಂ ಇಒ ವೆಂಕಟೇಶಪ್ಪ, ಸರ್ಕಲ್ ಇನ್‌ಸ್ಪೆಕ್ಟರ್ ಬಿ.ಸುನೀಲ್ ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ಸರಸ್ವತಿ, ಪಿಡಿಒ ಚಿತ್ರಾ, ಆರೋಗ್ಯ ನಿರೀಕ್ಷಕರಾದ ರವಿ, ಆದರ್ಶ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net