ಕೋಲಾರದ ಯಾವ ಗ್ರಾಮದಲ್ಲೂ ನೀರಿನ ಸಮಸ್ಯೆ ಉದ್ಬವಿಸದಿರಲಿ

26-klr-1Alternative
Published on

ಕೋಲಾರ: ತಾಲೂಕಿನ ಯಾವ ಗ್ರಾಮದಲ್ಲೂ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ತಾಪಂ ಅಧ್ಯಕ್ಷ ಸೂಲೂರು ಎಂ.ಆಂಜಿನಪ್ಪ ಅಧಿಕಾರಿಗಳಿಗೆ ಸೂಚಿಸಿದರು.

ತಾಪಂ ಸಭಾಂಗಣದಲ್ಲಿ ಬುಧವಾರ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿ, ನೀರಿನ ಸಮಸ್ಯೆ ತಲೆದೋರಬಹುದಾದ ಗ್ರಾಮಗಳ ಪಟ್ಟಿ ಮಾಡಿ, ಪಿಡಿಒಗಳಿಂದ ಮಾಹಿತಿ ಪಡೆದುಕೊಳ್ಳಿ, ಸಮಸ್ಯೆ ತಲೆದೋರಿದರೆ ಟ್ಯಾಂಕರ್ ಅಥವಾ ಖಾಸಗಿ ಬೊರ್‌ವೆಲ್‌ನಿಂದ ನೀರು ಪೂರೈಸಿ ಎಂದರು.

ಎಸ್‌ಸಿಪಿ, ಟಿಎಸ್‌ಪಿ ಅನುದಾನ ಬಿಡುಗಡೆ ಮಾಡಿಸಿಕೊಂಡು ಮಾರ್ಚ್ ಮೊದಲ ವಾರದೊಳಗೆ ಬಳಸಿಕೊಳ್ಳಬೇಕು, ವರ್ಷಾಂತ್ಯಕ್ಕೆ ಅನುದಾನ ವಾಪಸಾದರೆ ಸಂಬಂಧಪಟ್ಟವರನ್ನು ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಭೂಸೇನಾ ನಿಗಮಕ್ಕೆ ಅನೇಕ ಕಾಮಗಾರಿ ವಹಿಸಲಾಗಿದೆ. ಇದುವರೆಗೂ ಕೆಲಸ ಶುರು ಮಾಡಿಲ್ಲ. ಅಧಿಕಾರಿಗಳು ಸಭೆಗೂ ಬರುವುದಿಲ್ಲ. ಅವರಿಗೆ ನೋಟಿಸ್ ಜಾರಿ ಮಾಡಬೇಕು ಎಂದು ಇಒಗೆ ಸೂಚಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಮುದುವಾಡಿ ಮಂಜುನಾಥ ಮಾತನಾಡಿ, ಹಾಸ್ಟೆಲ್‌ಗಳಲ್ಲಿ ಮಕ್ಕಳಿಗೆ ಸರಿಯಾಗಿ ಊಟ ನೀಡುತ್ತಿಲ್ಲ. ಹೆಣ್ಣುಮಕ್ಕಳ ಹಾಸ್ಟೆಲ್ ಪರಿಶೀಲನೆಗೆ ಜಿಪಂ ಸಿಇಒ, ಇಒ ಅವರಿಂದ ಅನುಮತಿ ಪಡೆಯುವಂತೆ ಹೇಳುತ್ತಾರೆ. ಅನುಮತಿ ನೀಡುವಷ್ಟರೊಳಗೆ ಎಲ್ಲ ದಿಢೀರ್ ಭೇಟಿಯ ಉದ್ದೇಶ ಫಲಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಾಸ್ಟೆಲ್‌ಗಳಲ್ಲಿ ಶೌಚಗೃಹ ಸ್ವಚ್ಛತೆಗೆ ಸಿಬ್ಬಂದಿ ಬಳಕೆಗೆ ಆಕ್ಷೇಪಿಸಿದ ಅವರು, ಸ್ವಚ್ಛತಾ ಕಾರ್ಯಕ್ಕೆ ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಕಕ್ಕೆ ಸಮಾಜ ಕಲ್ಯಾಣ ಇಲಾಖೆ ನೀಡಿದ ಹೊಸ ಆದೇಶದಂತೆ ಕ್ರಮವಹಿಸಿ ಎಂದು ಸಮಾಜ ಕಲ್ಯಾಣ ಕಲ್ಯಾಣ ಇಲಾಖೆಗೆ ಸೂಚಿಸಿದರು.

ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಇಂಜಿನಿಯರ್ ಶ್ರೀನಿವಾಸ್ ಮಾತನಾಡಿ, ತೊರದೇವಂಡಹಳ್ಳಿ, ಪೂವಾಂಡಹಳ್ಳಿ, ಬೆತ್ತನಿ, ವೇಮಗಲ್‌ನ ಒಂದು ಬ್ಲಾಕ್, ನಾಗನಾಳ ಸೇರಿ 5 ಕಡೆ ಟ್ಯಾಂಕರ್ ಹಾಗೂ ಬೋರ್‌ವೆಲ್‌ನಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಕ್ರಿಯಾಯೋಜನೆ ಇಲ್ಲದೆಯೇ 110 ಬೋರ್‌ವೆಲ್ ಕೊರೆದಿದ್ದು, 70ರಲ್ಲಿ ನೀರು ಸಿಕ್ಕಿದೆ. 20ಕ್ಕೂ ಅಧಿಕ ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಲಾಗಿದೆ ಎಂದರು.

ಇಒ ಎನ್.ವಿ. ಬಾಬು ಮಾತನಾಡಿ, ಮಾ.2ರಿಂದ ಆಕಾಶವಾಣಿಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಬಗ್ಗೆ ಪ್ರತಿ ದಿನ ಒಂದೊಂದು ವಿಷಯಗಳ ಕುರಿತು ಪರಿಣಿತರು ಸಲಹೆ, ಮಾರ್ಗದರ್ಶನ ನೀಡಲಿದ್ದಾರೆ. ವಿದ್ಯಾರ್ಥಿಗಳು ಸದ್ಬಳಸಿಕೊಳ್ಳಬೇಕು ಎಂದರು.

ಕರೊನಾ ಇಲ್ಲ: ಕೋವಿಡ್-19 (ಕರೊನಾ) ವೈರಸ್ ಹಿನ್ನೆಲೆಯಲ್ಲಿ ಚೀನಾದಲ್ಲಿ ನೆಲೆಸಿದ್ದ ಎಲ್ಲ ಭಾರತೀಯರನ್ನು ಸರ್ಕಾರ ಸ್ವದೇಶಕ್ಕೆ ಕರೆಸಿಕೊಂಡಿದೆ. ಇವರಲ್ಲಿದ್ದ ಕೋಲಾರದ 5 ವಿದ್ಯಾರ್ಥಿಗಳನ್ನು ತಪಾಸಣೆ ನಡೆಸಿ 28 ದಿನ ನಿಗಾ ಇಡಲಾಗಿತ್ತು. ಒಬ್ಬನಿಗೆ ಸ್ವಲ್ಪ ಅನಾರೋಗ್ಯ ಕಂಡುಬಂದಿದ್ದರಿಂದ ರಕ್ತದ ಮಾದರಿ ಪುಣೆಗೆ ಕಳುಹಿಸಲಾಗಿ ನೆಗೆಟಿವ್ ಬಂದಿದೆ. ನರಸಾಪುರದ ಐ ಫೋನ್ ತಯಾರಿಕಾ ಘಟಕ ಸ್ಥಾಪನೆ ಸಂಬಂಧ ಚೀನಾದಿಂದ ಕೋಲಾರಕ್ಕೆ ಬಂದಿದ್ದ 17 ಜನರ ತಂಡವನ್ನೂ ತಪಾಸಣೆ ನಡೆಸಲಾಗಿ ಸಮಸ್ಯೆ ಕಂಡುಬಂದಿಲ್ಲವಾದ್ದರಿಂದ ಆತಂಕ ಪಡುವ ಅಗತ್ಯವಿಲ್ಲ ಎಂದು ವೈದ್ಯಾಧಿಕಾರಿ ಡಾ. ರಮ್ಯ ದೀಪಿಕಾ ಸಭೆಗೆ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net