ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕಿಗೆ 40.5 ಲಕ್ಷ ರೂ. ವೆಚ್ಚದಲ್ಲಿ 200 ಮೈಕ್ರೋ ಎಟಿಎಂ ಖರೀದಿಗೆ ನಬಾರ್ಡ್ ಅನುಮತಿ

25-klr-10 DCC Bank
Published on

ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕಿಗೆ 40.5 ಲಕ್ಷ ರೂ. ವೆಚ್ಚದಲ್ಲಿ 200 ಮೈಕ್ರೋ ಎಟಿಎಂ ಮತ್ತು 27 ಲಕ್ಷ ರೂ. ವೆಚ್ಚದಲ್ಲಿ ಎರಡು ಮೊಬೈಲ್ ವ್ಯಾನ್ ಖರೀದಿಗೆ ನಬಾರ್ಡ್ ಅನುಮತಿ ನೀಡಿದ್ದು, ಮನೆ ಬಾಗಿಲಲ್ಲೇ ಸೇವೆ ಒದಗಿಸಲು ನೆರವಾಗಲಿದೆ ಎಂದು ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.

ಜಿಲ್ಲಾ ಸಹಕಾರಿ ಯೂನಿಯನ್ ಸಭಾಂಗಣದಲ್ಲಿ ಶನಿವಾರ ಕರೆದಿದ್ದ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ನಿರ್ದೇಶಕರು, ಶಾಖಾ ವ್ಯವಸ್ಥಾಪಕರು, ಮೇಲ್ವಿಚಾರಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬ್ಯಾಂಕಿನ ಅತ್ಯುತ್ತಮ ಸಾಧನೆ ಪರಿಗಣಿಸಿ ನಬಾರ್ಡ್ ಅನುದಾನ ಬಿಡುಗಡೆ ಮಾಡಿರುವುದರಿಂದ ಗ್ರಾಹಕರಿಗೆ ನೀಡುವ ಸೇವೆ ಮತ್ತಷ್ಟು ಉತ್ತಮಪಡಿಸಲು ಸಹಕಾರಿಯಾಗಿದೆ ಎಂದರು.

2019-20ನೇ ಸಾಲಿನ ಆರ್ಥಿಕ ವರ್ಷದ ಕೊನೇ ಹಂತದಲ್ಲಿದ್ದು, ಠೇವಣಿ ಸಂಗ್ರಹ, ಎನ್‌ಪಿಎ ಕಡಿಮೆ ಮಾಡುವುದು, ಸಾಲ ವಿತರಣೆ, ವಸೂಲಾತಿ, ಸಹಕಾರಿ ರಕ್ತ ಪರೀಕ್ಷಾ ಲ್ಯಾಬ್ ಸ್ಥಾಪನೆ ಜತೆಗೆ ನಬಾರ್ಡ್ ಆಡಿಟ್‌ಗೆ ಸಜ್ಜಾಗಬೇಕು ಎಂದು ತಿಳಿಸಿದರು.

ಸೊಸೈಟಿ ಲೆಕ್ಕ ಪಕ್ಕಾ: ಅವಳಿ ಜಿಲ್ಲೆಗಳ ಸೊಸೈಟಿಗಳ ಲೆಕ್ಕ ಇನ್ನು ಮುಂದೆ ಪಕ್ಕಾ ಆಗಲಿದ್ದು, ಹೈದರಾಬಾದ್ ಮೂಲದ ವಿ ಸಾಫ್ಟ್ ಟೆಕ್ನಾಲಜೀಸ್‌ನ ತಂತ್ರಾಂಶ ಅಳವಡಿಸಿಕೊಳ್ಳಲಾಗುತ್ತಿದೆ. ಪ್ರಥಮ ಹಂತದಲ್ಲಿ ಮಾ.31ರೊಳಗೆ 60 ಸೊಸೈಟಿಗಳು ಆನ್‌ಲೈನ್ ಆಗಲಿದೆ. ಏಪ್ರಿಲ್‌ನಲ್ಲಿ ಶೇ.100 ಗುರಿ ಸಾಧಿಸಲು ಯೋಜನೆ ರೂಪಿಸಲಾಗಿದೆ ಎಂದರು.

1000 ಕೋಟಿ ರೂ. ಗುರಿ: ಪ್ರಸ್ತುತ 850 ಕೋಟಿ ರೂ. ಸಾಲ ವಿತರಿಸಲಾಗಿದೆ, ಮಾರ್ಚ್ ಅಂತ್ಯದೊಳಗೆ 1000 ಕೋಟಿ ರೂ. ಗುರಿ ಸಾಧನೆಯಾಗಬೇಕು. ಸಾಲ ತೀರಿಸಿರುವ ಮಹಿಳಾ ಸಂಘಗಳಿಗೆ ತಕ್ಷಣ ಮರು ಸಾಲ ವಿತರಿಸಬೇಕು, ಸುಸ್ತಿ ಆಗಿರುವವರ ಆಸ್ತಿಯನ್ನು ತಕ್ಷಣ ಹರಾಜು ಮಾಡಬೇಕು. ಮಾರ್ಚ್ 31ರೊಳಗೆ ಸಾಲದ ಖಾತೆ ಸುಸ್ತಿಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.

ಸಮಿತಿ ರಚನೆ: ಬ್ಯಾಂಕಿನ ಎಂಡಿ ರವಿ ನೇತೃತ್ವದಲ್ಲಿ ಸೊಸೈಟಿ ಸಿಇಒಗಳನ್ನು ಒಳಗೊಂಡ ಸಮಿತಿ ರಚಿಸುವ ಮೂಲಕ ಸಹಕಾರಿ ಲ್ಯಾಬ್ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು. ಪ್ರಸ್ತುತ ಮಾರುಕಟ್ಟೆ ದರದಲ್ಲಿನ ಶೇ.25 ವೆಚ್ಚದಲ್ಲಿ ಬಡವರಿಗೆ ಲ್ಯಾಬ್ ಪ್ರಯೋಜನ ದೊರೆಯುವಂತೆ ಮಾಡಬೇಕು ಎಂದು ಸೂಚಿಸಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಆರ್.ನಾರಾಯಣರೆಡ್ಡಿ, ಎಚ್.ನರಸಿಂಹರೆಡ್ಡಿ, ನಾಗನಾಳ ಸೋಮಣ್ಣ, ಎಂ.ಎಲ್.ಅನಿಲ್‌ಕುಮಾರ್, ಬಿ.ವಿ.ವೆಂಕಟರೆಡ್ಡಿ, ಯಲವಾರ ಸೊಣ್ಣೇಗೌಡ, ಅಶ್ವತ್ಥ್‌ಪ್ಪ, ಎಂಡಿ ರವಿ, ಎಜಿಎಂಗಳಾದ ಎಂ.ಆರ್.ಶಿವಕುಮಾರ್, ಎನ್.ಬೈರೇಗೌಡ, ಖಲೀಂವುಲ್ಲಾ, ಎಂ.ಚೌಡಪ್ಪ, ಕೆ.ನಾಗೇಶ್ ಇದ್ದರು.

ನಿರ್ಲಕ್ಷ್ಯಕ್ಕೆ ಅಸಮಾಧಾನ: ಠೇವಣಿ ಸಂಗ್ರಹದ ಗುರಿಯಲ್ಲಿ ಹಾಲಿ ಸಂಗ್ರಹಿಸಿರುವ 20 ಕೋಟಿ ರೂ. ಸಮಾಧಾನ ತಂದಿಲ್ಲ. ಮಾರ್ಚ್ ಒಳಗೆ ಕನಿಷ್ಠ 500 ಕೋಟಿ ರೂ. ಸಂಗ್ರಹಿಸಬೇಕು, ಈ ಸಂಬಂಧ ಬ್ಯಾಂಕಿನಿಂದ 2 ಲಕ್ಷ ಕರಪತ್ರ ಮಾಡಿಸಿ ಹಳ್ಳಿಗಳಲ್ಲಿ ಹಂಚಿ ಮಹಿಳೆಯರು, ರೈತರ ಖಾತೆಯನ್ನು ಡಿಸಿಸಿ ಬ್ಯಾಂಕಿನಲ್ಲಿ ತೆರೆಯುವಂತೆ ಮಾಡಬೇಕು. ಮಹಿಳಾ ಸಂಘಗಳ ಸದಸ್ಯರ ಮನವೊಲಿಸಿ ವೈಯಕ್ತಿಕ ಖಾತೆಯಲ್ಲಿ ಕನಿಷ್ಠ 5000 ರೂ. ಇಡುವಂತೆ ಮಾಡಬೇಕು ಎಂದು ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net