ಕೋಲಾರ ಕ್ಷೇತ್ರದ ಅಭಿವೃದ್ಧಿಗೆ ಪ್ರಧಾನಿಗೆ ಮನವಿ : ನರೇಂದ್ರಮೋದಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಸಂಸದ ಮುನಿಸ್ವಾಮಿ

2
Published on

ಕೋಲಾರ: ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಹೊಸ ಕೈಗಾರಿಕೆಗಳ ಸ್ಥಾಪನೆ, ಕೆಜಿಎಫ್​ನಲ್ಲಿ ಚಿನ್ನದ ಗಣಿ ಮರುಸ್ಥಾಪನೆ ಹಾಗೂ ರೈಲ್ವೆ ಯೋಜನೆಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವಂತೆ ಸಂಸದ ಎಸ್​.ಮುನಿಸ್ವಾಮಿ ಗುರುವಾರ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ.

ಇದೇ ಮೊದಲ ಬಾರಿಗೆ ಪ್ರಧಾನಿಯನ್ನು ಏಕಾಂಗಿಯಾಗಿ ಭೇಟಿಯಾಗಿ ಸುಮಾರು 20 ನಿಮಿಷ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಿ, ಕೋಲಾರ ಲೋಕಸಭಾ ಕ್ಷೇತ್ರಕ್ಕೆ 8 ವಿಧಾನಸಭಾ ಕ್ಷೇತ್ರಗಳು ಒಳಗೊಂಡಿದ್ದು, ಮೀಸಲು ಕ್ಷೇತ್ರವಾಗಿರುವುದರಿಂದ ಬಡವರ ಕಲ್ಯಾಣಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದು ಮನವಿ ಮಾಡಿದ್ದಾರೆ.

ಕೆಜಿಎಫ್​ನಲ್ಲಿ ಚಿನ್ನದ ಗಣಿಗೆ ಸೇರಿದ 3500 ಎಕರೆ ಜಮೀನಿನಲ್ಲಿ ಇಂಡಸ್ಟ್ರಿಯಲ್​ ಹಬ್​ ಸ್ಥಾಪಿಸಿದಲ್ಲಿ ಹೊಸ ಉದ್ದಿಮೆದಾರರಿಗೆ ಪೋತ್ಸಾಹದ ಜತೆಗೆ ಸಾವಿರಾರು ನಿರುದ್ಯೋಗಿ ಯುವಕರಿಗೆ ಉದ್ಯೋಗ ಸಿಗುವುದರಿಂದ ಸದರಿ ಯೋಜನೆಗೆ ಆದ್ಯತೆ ನೀಡುವಂತೆ ವಿನಂತಿಸಿದ್ದಾರೆ.

ಕೋಲಾರದ ನರಸಾಪುರ, ವೇಮಗಲ್​ ಕೈಗಾರಿಕಾ ಪ್ರದೇಶದಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸ್ಥಾಪನೆ, ಅತಿ ಹೆಚ್ಚು ಮಾವು ಬೆಳೆಯುವ ಶ್ರೀನಿವಾಸಪುರದಲ್ಲಿ ಮಾವು ಸಂಸ್ಕರಣಾ ಟಕ, ಮುಳಬಾಗಿಲಿನಲ್ಲಿ ಕೈಗಾರಿಕಾ ಪ್ರದೇಶದ ಅಭಿವೃದ್ಧಿ, ನನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆಗಳಿಗೆ ಚಾಲನೆ ನೀಡುವ ಮೂಲಕ ರೈತರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವಂತೆ ಕೋರಿದ್ದಾರೆ.

ಶಿಡ್ಲಟ್ಟದಲ್ಲಿ ರೇಷ್ಮೆ ರೀಲರ್​ಗಳಿಗೆ ಪ್ರಯೋಜನವಾಗುವ ಯೋಜನೆಗಳನ್ನು ಜಾರಿಗೆ ತರಬೇಕು, ಮಾಲೂರಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವಂತೆ ಬೇಡಿಕೆ ಸಲ್ಲಿಸಿರುವ ಸಂಸದರು, ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಗೆಲ್ಲುವುದಕ್ಕೆ ಒಳ್ಳೆಯ ವಾತಾವರಣ ಇರುವುದರಿಂದ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದಲ್ಲಿ ವಿಧಾನಸಭಾ ಚುನಾವಣೆಯಲ್ಲೂ ಪಕ್ಷಕ್ಕೆ ಅನುಕೂಲವಾಗಲಿದೆ ಎಂದು ಮನವರಿಕೆ ಮಾಡಿದ್ದಾರೆ.

ಕ್ಲಾಕ್​ ಟವರ್​ ಬಗ್ಗೆ ಮಾಹಿತಿ: ಕೋಲಾರದ ಕ್ಲಾಕ್​ ಟವರ್​ ನಗರಸಭೆಯ ಸ್ವತ್ತು ಆಗಿದ್ದರೂ, ಎಲ್ಲ ವರ್ಗದ ಜನತೆ ಮುಕ್ತವಾಗಿ ಓಡಾಡಲು, ರಾಷ್ಟ್ರಧ್ವಜ ಹಾರಿಸಲು, ಹಿಂದು ದೇವರ ಉತ್ಸವಗಳಿಗೆ ಅಡಚಣೆಯಾಗಿತ್ತು. ರಾಜ್ಯ ಸರ್ಕಾರ, ಜಿಲ್ಲಾ ಆಡಳಿತ ಹಾಗೂ ಎಲ್ಲ ವರ್ಗದ ಸದಾಭಿಪ್ರಾಯದೊಂದಿಗೆ ಅಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲಾಗಿದೆ. ಕೆಲವರು ರಾಜಕೀಯ ಉದ್ದೇಶದಿಂದ ಟೀಕೆಗಳನ್ನು ಮಾಡಿದ್ದಾರೆ, ಅಲ್ಪಸಂಖ್ಯಾತರು ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಒಲವು ಹೊಂದಿದ್ದಾರೆ. ಪ್ರತಿಫಲ ಪಡೆದಿದ್ದಾರೆ. ಈ ವರ್ಗಕ್ಕೆ ಇತಿಹಾಸ ಅರ್ಥವಾಗಿರುವುದರಿಂದ ಮುಂದೆ ಬಿಜೆಪಿ ಪರವಾಗಿ ನಿಲ್ಲುತ್ತಾರೆಂದು ಕ್ಲಾಕ್​ ಟವರ್​ನ ಹಿಂದಿನ ಹಾಗೂ ಹಾಲಿ ವಾತಾವರಣಕ್ಕೆ ಸಂಬಂಧಿಸಿದ ಫೋಟೋಗಳನ್ನು ನೀಡಿ, ರಾಜ್ಯದಲ್ಲಿ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಕೋಲಾರಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಿದ್ದಾರೆ.

ಕ್ಲಾಕ್​ ಟವರ್​ ಪ್ರಸಂಗದ ಬಳಿಕ ವಿರೋಧಿಗಳಿಂದ ಟೀಕೆಗೆ ಗುರಿಯಾಗಿದ್ದ ಸಂಸದ ಎಸ್​.ಮುನಿಸ್ವಾಮಿ ಬೆಂಗಳೂರು ದಣ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ರಾಷ್ಟ್ರೀಯ ಯುವ ಮೋರ್ಚಾದ ಅಧ್ಯಕ್ಷ ತೇಜಸ್ವಿ ಸೂರ್ಯ ಇತ್ತೀಚೆಗೆ ಕೋಲಾರಕ್ಕೆ ಬಂದಿದ್ದಾಗ ಕೋಲಾರ ನಗರದ ಪರಿಸ್ಥಿತಿಯನ್ನು ತಿಳಿಸಿದಾಗ, ಪ್ರಧಾನಿಯನ್ನು ಭೇಟಿ ಮಾಡಲು ಅವಕಾಶ ಕಲ್ಪಿಸುವೆ, ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಅವರೊಡನೆ ಚರ್ಚಿಸಿದಲ್ಲಿ ಅನುಕೂಲವಾಗುತ್ತದೆ. ಜತೆಗೆ ವಿರೋಧಿಗಳ ಬಾಯಿ ಮುಚ್ಚಿಸಬಹುದೆಂಬ ಸಲಹೆ ನೀಡಿದ್ದ ಮೇರೆಗೆ ಪ್ರಧಾನಿಯನ್ನು ಖುದ್ದು ಭೇಟಿ ಮಾಡುವ ಅವಕಾಶ ಸಿಕ್ಕಿದೆ ಎನ್ನಲಾಗಿದೆ.

ಮುನಿಸ್ವಾಮಿ ಅವರು ಪ್ರಧಾನಿಗೆ ಡಾ.ಬಾಬಾ ಸಾಹೇಬ್​ ಅಂಬೇಡ್ಕರ್​ ಪ್ರತಿಮೆಯನ್ನು ಕಾಣಿಕೆಯಾಗಿ ನೀಡಿದಾಗ, ಪ್ರಧಾನಿ ಸಂತಸ ವ್ಯಕ್ತಪಡಿಸಿದರೆನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net