ಕೊಡಗು: ವಕೀಲ ಬಿ.ಎನ್. ಸಂತೋಷಕುಮಾರ್ ಮೇಲಿನ ಹಲ್ಲೆ ಖಂಡಿಸಿ ಕುಶಾಲನಗರ ವಕೀಲರ ಸಂಘದಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು. ಕೋರ್ಟ್ ಕಲಾಪದಿಂದ ದೂರ ಉಳಿದ ವಕೀಲರು, ಸಂತೋಷಕುಮಾರ್ ಮನೆ ಬಳಿ ಜಮಾಯಿಸಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಕುಶಾಲನಗರ ವಕೀಲರ ಸಂಘದ ಅಧ್ಯಕ್ಷ ಆರ್.ಕೆ.ನಾಗೇಂದ್ರ ಬಾಬು ಮಾತನಾಡಿ, ಗೌಡ ಸಮಾಜ ಹಿಂಭಾಗದ ಮನೆಯ ಪಕ್ಕದಲ್ಲಿ ಮಹಿಳೆಯೊಬ್ಬರು ಅನಧಿಕೃತವಾಗಿ ಮನೆ ನಿರ್ಮಾಣ ಮಾಡುತ್ತಿದ್ದರು. ಈ ಬಗ್ಗೆ ದೂರು ನೀಡಿದ ವಕೀಲ ಬಿ.ಎನ್.ಸಂತೋಷ್‌ಕುಮಾರ್ ವಿರುದ್ಧ ಆಕ್ರೋಶಗೊಂಡ ಮಹಿಳೆಯು ವಕೀಲರ ಮನೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ಈ ಮಹಿಳೆ ಕುಶಾಲನಗರ ಅಭಿವೃದ್ಧಿ ಯೋಜನಾ ಪ್ರಾಧಿಕಾರ ಮತ್ತು ಪುರಸಭೆ ವತಿಯಿಂದ ಅನುಮತಿ ಪಡೆಯದೆ ಮನೆ ನಿರ್ಮಾಣ ಕಾಮಗಾರಿ ನಡೆಸುತ್ತಿರುವ ಬಗ್ಗೆ ಪುರಸಭೆಗೆ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ಕುಶಾಲನಗರ ಅಭಿವೃದ್ಧಿ ಯೋಜನಾ ಪ್ರಾಧಿಕಾರದ ಅಧಿಕಾರಿಗಳು ಯಾಕೆ ಕ್ರಮ ತೆಗೆದುಕೊಂಡಿಲ್ಲ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರಲ್ಲದೆ, ವಕೀಲನ ಮೇಲೆಯೇ ಹಲ್ಲೆ ನಡೆದಿರುವ ಬಗ್ಗೆ ಸಿಸಿ ಕ್ಯಾಮರಾ ಫೂಟೇಜ್ ಇದ್ದರೂ ಕೂಡ ಅವರ ವಿರುದ್ಧವೇ ಪೊಲೀಸರು ಇಲ್ಲಸಲ್ಲದ ಸೆಕ್ಷನ್‌ಗಳನ್ನು ಹಾಕಿ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಆಗಮಿಸಿದ ಸ್ಥಳೀಯ ವಾರ್ಡ್ ಸದಸ್ಯ ಎಂ.ಬಿ.ಸುರೇಶ್ ವಕೀಲರ ಅಹವಾಲು ಆಲಿಸಿ ಮಾತನಾಡಿ, ಪುರಸಭೆ ಕಚೇರಿಯಲ್ಲಿ ಈ ಬಗ್ಗೆ ವಿಚಾರಿಸಿ ಸಂಜೆಯೊಳಗೆ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು. ವಕೀಲರ ಸಂಘದ ಕಾರ್ಯದರ್ಶಿ ಕೆ.ಬಿ.ಮೋಹನ್, ನೋಟರಿ ಮಂಜುನಾಥ್, ಸುಧಾಕರ್, ರವಿಕುಮಾರ್ ಇತರರು ಇದ್ದರು.