

ಬೇಲೂರು: ದಲಿತ ಸಂಘಟನೆಗಳ ಮಹಾ ಒಕ್ಕೂಟ ಹಾಗೂ ಭೀಮಾ ಕೋರೆಗಾಂವ್ ವಿಜಯೋತ್ಸವ ಸಮಿತಿಯಿಂದ ಸೋಮವಾರ ಎರಡನೇ ವರ್ಷದ ಭೀಮಾ ಕೋರೆಗಾಂವ್ ವಿಜಯೋತ್ಸವವನ್ನು ಸಾವಿರಾರು ಅಂಬೇಡ್ಕರ್ ಅಭಿಮಾನಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.
ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿರುವ ಡಾ.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ರೋಡ್ ಆರ್ಕೆಸ್ಟ್ರಾ, ಡಿಜೆ ಸೌಂಡ್ ಸಿಸ್ಟಮ್ ಮೂಲಕ ಮೆರವಣಿಗೆ ಹೊರಟ ಸಾವಿರಾರು ಅಂಬೇಡ್ಕರ್ ಅಭಿಮಾನಿಗಳು ನೀಲಿ ಬಾವುಟಗಳೊಂದಿಗೆ ಜೈ ಭೀಮ್ ಘೋಷಣೆ ಕೂಗಿ ಕುಣಿದು ಕುಪ್ಪಳಿಸಿದರು.
ಮಧ್ಯಾಹ್ನ 3.30ಕ್ಕೆ ಪ್ರಾರಂಭವಾದ ಮೆರವಣಿಗೆ ರಾತ್ರಿ 8.30ರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಅಂತ್ಯ ಕಂಡಿತು. ಬಳಿಕ ಅಂಬೇಡ್ಕರ್ ಪ್ರತಿಮೆಗೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು. ನಂತರ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕರ್ನಾಟಕ ಬೌದ್ಧ ಸಮಾಜದ ರಾಜ್ಯಾಧ್ಯಕ್ಷ ಹಾ.ರಾ.ಮಹೇಶ್ ಮಾತನಾಡಿ, ಇತಿಹಾಸದ ಪುಟಗಳಲ್ಲಿ ಮಾಸಿ ಹೋಗಿದ್ದ ಕೋರೆಗಾಂವ್ ಯುದ್ಧದ ಗೆಲುವು ದೇಶದ ಮೂಲ ನಿವಾಸಿ ಹಾಗೂ ಶೋಷಿತರ ಪಾಲಿಗೆ ಸ್ವಾಭಿಮಾನದ ಸಂಕೇತ. 28 ಸಾವಿರ ಪೇಶ್ವೆ ಸೈನಿಕರ ವಿರುದ್ಧ ಕೇವಲ ಐನೂರು ಜನ ಮಹಾರ್ ಸೈನಿಕರು ಯುದ್ಧ ಮಾಡಿ ಗೆಲುವು ಸಾಧಿಸಿದ ಪರಿಣಾಮ ನಾವು ಇಂದು ಸಮಾನವಾದ ಹಕ್ಕುಗಳನ್ನು ಪಡೆಯಲು ಕಾರಣವಾಗಿದೆ. ಆದ್ದರಿಂದ ಕೋರೆಗಾಂವ್ ವೀರ ಯೋಧರಂತೆ ನಾವುಗಳು ಗೆಲುವು ಸಾಧಿಸಬೇಕೆಂದರೆ ಸ್ವಾತಂತ್ರ ರಾಜ್ಯಾಧಿಕಾರ ಹಿಡಿಯಬೇಕು. ಆಗ ಮಾತ್ರ ನಾವು ಪ್ರಬುದ್ಧರಾಗಲು ಸಾಧ್ಯ ಎಂದರು.
ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ಅಂಬೇಡ್ಕರ್ ಅವರು ಕೊಟ್ಟ ಮೀಸಲಾತಿಯಡಿ ನಾನು ಬೇಲೂರು ಕ್ಷೇತ್ರದಲ್ಲಿ ಶಾಸಕನಾಗಿದ್ದು, ನಿಮ್ಮೊಂದಿಗೆ ಸದಾ ಇರುತ್ತೇನೆ. ಸಮುದಾಯಕ್ಕೆ ಸರ್ಕಾರದ ಸೌಲಭ್ಯಗಳು ಸಿಗುವಂತೆ ಕ್ರಮ ಕೈಗೊಳ್ಳುತ್ತೇನೆ. ನಿಮ್ಮಗಳ ಸಹಕಾರದಿಂದ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡುತ್ತೇನೆ. ಮುಂದಿನ ಅಂಬೇಡ್ಕರ್ ಜಯಂತಿಯನ್ನು ಅದ್ದೂರಿಯಾಗಿ ಆಚರಿಸೋಣ ಎಂದರು.
ದಸಂಸ ಸಂಸ್ಥಾಪಕ ಸದಸ್ಯ ಶ್ರೀಧರ್ ಕಲಿವೀರ್, ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಎಂ.ಆರ್.ವೆಂಕಟೇಶ್, ಮಾಜಿ ತಾ.ಪಂ ಸದಸ್ಯರಾದ ಪರ್ವತಯ್ಯ, ಮಂಜುನಾಥ್, ಪುರಸಭಾ ಮಾಜಿ ಅಧ್ಯಕ್ಷ ದಾನಿ, ದಸಂಸ ಜಿಲ್ಲಾ ಸಂಚಾಲಕ ಲಕ್ಷ್ಮಣ್, ನಿಂಗರಾಜು, ಯುವ ಮುಖಂಡರಾದ ಮಹೇಶ್, ಬಾಬು, ವಕೀಲ ರಾಜು. ಎಚ್.ಡಿ.ರಮೇಶ್. ಮಂಜುನಾಥ್. ರಘು, ಅಶೋಕ್, ಕುಮಾರ್ ಗುಪ್ತ. ರವಿ, ಹರೀಶ್, ವಿರೂಪಾಕ್ಷ. ರಘು. ರಂಗಸ್ವಾಮಿ. ಗುರುರಾಜು ಸೇರಿದಂತೆ ಇತರಿದ್ದರು.