ಕೋರೆಗಾಂವ್ ಶೋಷಿತರ ಆತ್ಮಗೌರವದ ಸಂಕೇತ

IMG-20250101-WA0039
Published on

*ಸಾರನಾಥ ಬೌದ್ಧ ವಿಹಾರದ ಬೋಧಿರತ್ನ ಬಂತೇಜಿ ಅಭಿಪ್ರಾಯ

*207ನೇ ಭೀಮ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮ

ಚಾಮರಾಜನಗರ: ಬ್ರಿಟೀಷರು ಮತ್ತು ಪೇಶ್ವೆಗಳ ವಿರುದ್ಧ ನಡೆದಿದ್ದ ಕೋರೆಗಾಂವ್ ಕದನವು ಶೋಷಿತ ಸಮುದಾಯಗಳ ಆತ್ಮಗೌರವದ ಸಂಕೇತವಾಗಿದೆ ಎಂದು ಟಿ.ನರಸೀಪುರ ಸಾರನಾಥ ಬೌದ್ಧ ವಿಹಾರದ ಬೋಧಿರತ್ನ ಬಂತೇಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ಬಳಗ ಮತ್ತು ಕಾನ್ಶಿರಾಂ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ 207ನೇ ಭೀಮ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಈ ನೆಲದಲ್ಲಿ ದಲಿತರ ಇತಿಹಾಸವನ್ನು ಮುಚ್ಚಿಡಲಾಗಿತ್ತು. ಅದನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ನಿರಂತರ ಅಧ್ಯಯನದಿಂದಾಗಿ ಹೊರ ಹಚ್ಚಿದರು. ಮಹಾರ್ ರೇಜಿಮೆಂಟ್ ನಲ್ಲಿದ್ದ ಮಹಾರ್ ಸೈನಿಕರನ್ನು ಪೇಶ್ವೆಗಳು ಬಹಳ ಹೀನಾಯವಾಗಿ ನಡೆಸಿಕೊಂಡಿದ್ದರು. ಈ ನಿಟ್ಟಿನಲ್ಲಿ ಬ್ರಿಟೀಷರ ಜತೆಗೂಡಿ ಗೆರಿಲ್ಲಾ ಮಾದರಿಯಲ್ಲಿ ಯುದ್ಧ ಮಾಡಿದ 500 ಮಹಾರ್ ಸೈನಿಕರು, ಸುಮಾರು 28 ಸಾವಿರ ಪೇಶ್ವೆಗಳ ಸೈನಿಕರನ್ನು ಸದೆಬಡಿದರು. ಕೋರೆಗಾಂವ್ ಕದನ ಶೋಷಣೆಯ ವಿರುದ್ಧ ಮತ್ತು ದಲಿತರ ಸ್ವಾಭಿಮಾನದ ಸಂಕೇತವಾಗಿ ಎಂದು ತಿಳಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ಪ್ರತಿವರ್ಷವೂ ಕೋರೆಗಾಂವ್ ಸ್ಮಾರಕದ ಸ್ಥಳಕ್ಕೆ ಬಂದು ಗೌರವ ಸಲ್ಲಿಸುತ್ತಿದ್ದರು. ಈ ನೆಲದಲ್ಲಿ ಮರೆಯಾಗಿದ್ದ ದಲಿತರ ಇತಿಹಾಸವನ್ನು ನಮಗೆ ಕೊಟ್ಟು ಹೋಗಿದ್ದಾರೆ. ಅದನ್ನು ನಾವೆಲ್ಲರೂ ಅರಿತುಕೊಂಡು ಸಾಗಬೇಕಿದೆ. ಮನುವಾದಿಗಳನ್ನು ನಿರಂತರವಾಗಿ ವಿರೋಧಿಸುತ್ತೇವೆ, ಆದರೇ ಮತ್ತೊಂದು ಕಡೆ ಮನುವಾದಿಗಳ ಆಚರಣೆಯನ್ನೇ ಮಾಡುತ್ತಿದ್ದೇವೆ. ಮನುವಾದಿಗಳು ಮನಸ್ಸಿಗೆ ಕೋಳವನ್ನು ತೊಡಿಸಿದ್ದಾರೆ. ಅದರಿಂದ ನಾವು ಆಚೆ ಬರಬೇಕಿದೆ ಎಂದು ಎಚ್ಚರಿಸಿದರು.

ನಿವೃತ್ತ ಐಎಎಸ್ ಅಧಿಕಾರಿ ಡಾ.ಆರ್.ರಾಜು ಮಾತನಾಡಿ, 1818 ರಲ್ಲಿ ಭೀಮನದಿ ತೀರದಲ್ಲಿ ನಡೆದ ಭೀಮ ಕೋರೆಗಾಂವ್ ಕದನ ದಲಿತರ ಸಾಧನೆಯ ಪ್ರತೀಕವಾಗಿದೆ. ಈ ನಿಟ್ಟಿನಲ್ಲಿ ಕೋರೆಗಾಂವ್ ವಿಜಯೋತ್ಸವವನ್ನು ಆಚರಣೆ ಮಾಡಲಾಗುತ್ತಿದೆ. ಪ್ರಸ್ತುತ ಬೌದ್ಧಿಕ ಯುದ್ಧಗಳು ದಲಿತ ಸಮುದಾಯಕ್ಕೆ ಎದುರಾಗುತ್ತಿದ್ದು, ಅದನ್ನು ಸಮರ್ಪಕವಾಗಿ ಮೆಟ್ಟಿ ನಿಲ್ಲುವ ಜವಾಬ್ದಾರಿ ನಮ್ಮೆಲ್ಲರದಾಗಿದೆ ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ರಚನೆಯ ಸಂವಿಧಾನದ ಮೇಲೆ ಇತ್ತೀಚೆಗೆ ಆಕ್ರಮಣಗಳು ಹೆಚ್ಚಾಗಿದೆ. ಸಂವಿಧಾನ ಅಭಿಯಾನ ಎಂಬ ಕಾರ್ಯಕ್ರಮದ ಮೂಲಕ ಸಂವಿಧಾನದ ಅಗತ್ಯ-ಅನಗತ್ಯದ ಕುರಿತು ಚರ್ಚೆ ನಡೆಯುತ್ತಿದೆ. ಸಂವಿಧಾನವನ್ನು ಉಳಿಸುವ ನಿಟ್ಟಿನಲ್ಲಿ ಯುವಜನಾಂಗ ಚಿಂತನೆ ನಡೆಸಬೇಕಿದೆ. ಸಂವಿಧಾನದ ಉಳಿವಿಗೆ ಕೋರೆಗಾಂವ್ ಕದನವನ್ನು ಸ್ಫೂರ್ತಿಯಾಗಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಕಾನ್ಶಿರಾಂ ವಿದ್ಯಾರ್ಥಿ ಸಂಘದ ಜಿಲ್ಲಾಧ್ಯಕ್ಷ ವಾಸು ಹೊಂಡರಬಾಳು ಮಾತನಾಡಿ, ಒಂದು ಚಳುವಳಿ ಜೀವಂತವಾಗಿ ಇರಬೇಕಾದರೇ ಸಂಘಟನೆಗಳ ಅಗತ್ಯವಿದೆ. ವಿದ್ಯಾರ್ಥಿಗಳಿಗೆ ಬಹುಜನ ಚಳುವಳಿಯ ಚಿಂತನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ಸಂಘಟನೆಯನ್ನು ಹುಟ್ಟು ಹಾಕಲಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಕನಸುಗಳನ್ನು ನನಸು ಮಾಡುವ ಹಾದಿಯಲ್ಲಿ ದಾದಾಸಾಹೇಬ್ ಕಾನ್ಶಿರಾಂ ಅವರು ಶ್ರಮಿಸಿದ್ದಾರೆ. ಅವರ ಆದರ್ಶಗಳನ್ನು ವಿದ್ಯಾರ್ಥಿಗಳಲ್ಲಿ ಮನದಟ್ಟು ಮಾಡಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆಯೋಜಕ ರವಿಮೌರ್ಯ, ಕಾನ್ಶಿರಾಂ ಬಹುಜನ ಸಮಾಜ ಪಕ್ಷದ ಟೌನ್ ಅಧ್ಯಕ್ಷ ರಂಗಸ್ವಾಮಿ, ವಕೀಲರಾದ ಮಹೇಂದ್ರ, ಯುವ ಮುಖಂಡ ರಾಮಸಮುದ್ರ ಬಾಬು, ಸುನೀಲ್ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net