ಕೋರೆ ಇಲ್ಲದ ಗಂಡಾನೆಯೇ ‘ಮಖ್ನಾ’!

ಕೋರೆ ಇಲ್ಲದ ಗಂಡಾನೆಯೇ ‘ಮಖ್ನಾ’!
Published on

ಹಾಸನ: ಸಕಲೇಶಪುರ- ಬೇಲೂರು ಭಾಗದಲ್ಲಿ ಹಳ್ಳಿ-ಹಳ್ಳಿಗಳಿಗೆ ನುಗ್ಗಿ ದಾಂಧಲೆ ಮಾಡುತ್ತಿದ್ದ ಓಲ್ಡ್ ಮಖ್ನಾ ಎಂಬ ಆನೆಯನ್ನು ಕಳೆದ ಮೂರು ದಿನಗಳ ಹಿಂದೆಯಷ್ಟೇ ಅರಣ್ಯ ಇಲಾಖೆ ಸೆರೆ ಹಿಡಿದು ದುಬಾರೆ ಸಾಕಾನೆ ಶಿಬಿರಕ್ಕೆ ಸ್ಥಳಾಂತರ ಮಾಡಿದೆ. ಇದರೊಂದಿಗೆ ಕಾಡಾನೆಗಳಲ್ಲಿ ‘ಮಖ್ನಾ’ ಎಂಬ ಆನೆಗಳು ಇರುತ್ತವಾ? ಎಂಬ ಪ್ರಶ್ನೆ ಸಾಕಷ್ಟು ಜನರನ್ನು ಕಾಡಿತ್ತು. ಹಾಗಾದರೆ ಮಖ್ನಾ ಆನೆ ಎಂದರೇನು? ಅವುಗಳು ಏಕೆ ಹೆಚ್ಚು ದಾಂಧಲೆ ನಡೆಸುತ್ತವೇ? ಇತರ ಆನೆಗಳು ಈ ಆನೆಗಳಿಗೂ ಇರುವ ವ್ಯತ್ಯಾಸವೇನು ಎಂಬ ಮಾಹಿತಿ ಇಲ್ಲಿದೆ.
ಗಂಡು ಆನೆಗಳಲ್ಲಿ ಕೋರೆ ಅಥವಾ ಕೊಂಬು ಇರುತ್ತದೆ. ಆದರೆ, ಗಂಡಾಗಿದ್ದರೂ ಕೋರೆ ಇಲ್ಲದ ಆನೆಗಳನ್ನೇ ಮಖ್ನಾ ಆನೆ ಎಂದು ಕರೆಯುತ್ತಾರೆ. ಉಳಿದಂತೆ ಇತರೆ ಗಂಡಾನೆಗಳಿಗೂ ಈ ಕೋರೆ ಇಲ್ಲದ ಆನೆಗಳಿಗೂ ಅಂತಹ ಬೇರೆ ವ್ಯತ್ಯಾಸಗಳೇನು ಇರುವುದಿಲ್ಲ. ಸಾಮಾನ್ಯವಾಗಿ ಆನೆಗಳು ಗುಂಪಾಗಿ ಜೀವಿಸುವ ಪ್ರಾಣಿ. ಇಲ್ಲಿ ಹೆಣ್ಣಾನೆಗಳೇ ಈ ಗುಂಪಿನ ಮುಂದಾಳತ್ವ ವಹಿಸಿರುತ್ತವೆ. ತಮ್ಮ ಗುಂಪಿನಲ್ಲಿ 8 ವರ್ಷ ಮೇಲ್ಪಟ್ಟ ಗಂಡಾನೆಗಳನ್ನು ಗುಂಪಿನಿಂದ ಹೊರಕ್ಕೆ ಹಾಕುತ್ತವೆ. ಇದಕ್ಕೆ ಮುಖ್ಯ ಕಾರಣ ಒಂದು ಆಹಾರದ ಕೊರತೆ ಉಂಟಾಗದಂತೆ ನೋಡಿಕೊಳ್ಳುವುದು ಮತ್ತು ಸಂತಾನೋತ್ಪತ್ತಿ.
ಆನೆಗಳಿಗೆ ಯಾವ ಸಮಯದಲ್ಲಿ ಯಾವ ಭಾಗದಲ್ಲಿ ಇರಬೇಕು ಎಂಬ ಅರಿವು ಚೆನ್ನಾಗಿ ಇರುತ್ತವೆ. ಕಾಲಗಳಿಗೆ ಅನುಗುಣವಾಗಿ ಅವುಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಂಚರಿಸುತ್ತಲೇ ಇರುತ್ತವೆ. ಮಾರ್ಚ್ ಹಾಗೂ ಏಪ್ರಿಲ್ ತಿಂಗಳಿನಲ್ಲಿ ಕಾಡಿನಲ್ಲಿ ನೀರಿನ ಕೊರತೆ ಉಂಟಾಗುವುದರಿಂದ ಅವುಗಳು ಜಲಾಶಯಗಳ ಹಿನ್ನೀರಿನ ಪ್ರದೇಶಗಳಿಗೆ ಬರುತ್ತವೆ. ಈ ಸಮಯದಲ್ಲಿ ಎಲ್ಲ ಆನೆ ಗುಂಪುಗಳು ಬಂದು ಸೇರುತ್ತವೆ. ಇಲ್ಲಿಯೇ ಒಂದು ಗುಂಪಿನ ಹೆಣ್ಣಾನೆಗಳು ಬೇರೆ ಭಾಗದ ಸದೃಢ ಗಂಡಾನೆಗಳನ್ನು ಮಿಲನಕ್ಕೆ ಆಯ್ಕೆ ಮಾಡಿಕೊಳ್ಳುತ್ತವೆ. ಇದನ್ನು ‘ಪೂಲ್ ಜೀನಿಂಗ್’ ಎಂದು ಕರೆಯುತ್ತಾರೆ. ಒಂದೇ ಗುಂಪಿನಲ್ಲಿ ಅಥವಾ ಒಂದೇ ಭಾಗದ ಆನೆಗಳೊಂದಿಗೆ ಮಿಲನವಾಗಿ ಹುಟ್ಟುವ ಮರಿಗಳು ಆರೋಗ್ಯಕರವಾಗಿ ಇರುವುದಿಲ್ಲ ಎಂಬ ಕಾರಣಕ್ಕೆ ಬೇರೆ ಭಾಗದ ಆನೆಗಳನ್ನು ಆಯ್ಕೆ ಮಾಡಿಕೊಳ್ಳುತ್ತವೆ.
ಕಬಿನಿ, ಹಾರಂಗಿ, ಹೇಮಾವತಿ ಹಿನ್ನೀರಿನ ಪ್ರದೇಶಗಳಿಗೆ ಬೇಸಿಗೆ ಸಮಯದಲ್ಲಿ ವಿವಿಧ ಭಾಗಗಳಿಂದ ಆನೆಗಳು ಬಂದು ಸೇರುತ್ತವೆ. ಈ ವೇಳೆ ಹೆಣ್ಣಾನೆಗಳನ್ನು ಆಕರ್ಷಿಸಲು ಗಂಡು ಆನೆಗಳು ಇತರೆ ಆನೆಗಳೊಂದಿಗೆ ಕಾದಾಡಿ ತಮ್ಮ ಶೌರ್ಯ ಪ್ರದರ್ಶನ ಮಾಡುತ್ತವೆ. ಯಾವುದೇ ಹೆಣ್ಣಾನೆಗಳು ಹೆಚ್ಚು ಸದೃಢವಾದ ಗಂಡು ಆನೆಗಳನ್ನೇ ಮಿಲನಕ್ಕೆ ಆಯ್ಕೆ ಮಾಡಿಕೊಳ್ಳುತ್ತವೆ. ಏಕೆಂದರೆ ಮುಂದೆ ಹುಟ್ಟುವ ಮರಿಗಳು ಸದೃಢ ಹಾಗೂ ಆರೋಗ್ಯಪೂರ್ಣವಾಗಿರಲೆಂದು. ಈ ಆಯ್ಕೆ ಪ್ರಕ್ರಿಯೆಯಲ್ಲಿ ಮಖ್ನಾ ಆನೆಗಳೆಡೆಗೆ ಹೆಣ್ಣಾನೆಗಳು ಆಕರ್ಷಿತವಾಗುವ ಪ್ರಮಾಣ ತೀರಾ ಕಡಿಮೆ. ಏಕೆಂದರೆ, ಗಂಡಾನೆಗೆ ಕೋರೆ ಒಂದು ಪ್ರಬಲ ಅಸ್ತ್ರವಿದ್ದಂತೆ. ಕೋರೆಯೇ ಇಲ್ಲದ ಆನೆಗಳನ್ನು ಹೆಣ್ಣಾನೆಗಳು ಅಷ್ಟಾಗಿ ಗಮನಿಸುವುದಿಲ್ಲ. ಹೀಗಾಗಿ ಈ ಮಖ್ನಾ ಆನೆಗಳು ಇತರೆ ಗಂಡು ಆನೆಗಳಿಗಿಂತ ತಾನೇನೂ ಕಡಿಮೆ ಇಲ್ಲ ಎಂಬುದನ್ನು ತೋರಿಸಲು ಹೆಚ್ಚು ದಾಂಧಲೆ, ಗಲಾಟೆ ಮಾಡುತ್ತವೆ.

ಕೋರೆಯ ಮಹತ್ವವೇನು?
ಗಂಡಾನೆಗಳಿಗೆ ಕೋರೆ ಒಂದು ರೀತಿಯಲ್ಲಿ ಗಾಂಭೀರ್ಯವನ್ನು ತಂದುಕೊಟ್ಟರೆ ಅವುಗಳ ಸಹಾಯದಿಂದಲೇ ತನಗೆ ಬೇಕಾದ ಪೌಷ್ಟಿಕ ಆಹಾರವಿರುವ ಮರಗಳನ್ನು ಕೆಡವುತ್ತವೆ. ಫೈಬರ್ ಅಂಶ ಹೆಚ್ಚು ಇರುವ ಮರಗಳನ್ನು ಮುರಿದು ತನ್ನ ದೇಹಕ್ಕೆ ಅಗತ್ಯವಾಗಿರುವ ಫೈಬರ್ ಅಂಶವನ್ನು ಪಡೆದುಕೊಳ್ಳುತ್ತವೆ. ಆದರೆ, ಈ ಮಖ್ನಾ ಆನೆಗಳಿಗೆ ಕೋರೆ ಇಲ್ಲದಿರುವುದರಿಂದ ಫೈಬರ್ ಅಂಶವಿರುವ ಮರಗಳನ್ನು ಕೆಡವಲು ಆಗುವುದಿಲ್ಲ. ಹೀಗಾಗಿ ಈ ಆನೆಗಳು ಹೆಚ್ಚಾಗಿ ಜನರು ತಿನ್ನುವ ಅಕ್ಕಿ, ಗೋಧಿ, ಹುರುಳಿ ಇತರೆ ಆಹಾರಗಳ ಮೇಲೆ ಹೆಚ್ಚು ಅವಲಂಬಿತವಾಗಿರುತ್ತವೆ. ಇದೇ ಕಾರಣಕ್ಕಾಗಿ ಮಖ್ನಾ ಆನೆಗಳು ಜನವಸತಿ ಪ್ರದೇಶಗಳಿಗೆ ಬಂದು ಈ ಆಹಾರ ಸೇವಿಸುತ್ತವೆ. ಸಕಲೇಶಪುರದಲ್ಲಿ ಹಿಡಿದ ಮಖ್ನಾ ಆನೆ ಕೂಡ ಹೆಚ್ಚಾಗಿ ಪಡಿತರ ಅಂಗಡಿ, ಪಡಿತರ ಶೇಖರಿಸಿ ಇಟ್ಟಿದ್ದ ಗೋದಾಮಿನ ಮೇಲೆ ಅನೇಕ ಬಾರಿ ನುಗ್ಗಿ ಅಕ್ಕಿ ತಿಂದು ಹೋಗುತ್ತಿತ್ತು.

ಆನೆ ಸಂತತಿ ವಿನಾಶದ ಮುನ್ಸೂಚನೆ
ಆನೆ ಸಂತತಿ ಇನ್ನು ಕೆಲವೇ ದಶಕಗಳಲ್ಲಿ ಅವನತಿ ಹೊಂದಿದರೂ ಅಚ್ಚರಿ ಪಡಬೇಕಾಗಿಲ್ಲ ಎಂಬ ಆತಂಕವನ್ನು ವ್ಯಕ್ತಪಡಿಸುತ್ತಾರೆ ವನ್ಯಜೀವಿ ತಜ್ಞ ಹಾಗೂ ವೈಲ್ಡ್‌ಲೈಫ್ ಕನ್ಸರ್ವೇಷನ್ ಫೌಂಡೇಷನ್ ಸಂಸ್ಥಾಪಕರಾದ ರಾಜ್‌ಕುಮಾರ್ ದೇವರಾಜೆ ಅರಸ್. ಇವರು ಹೇಳುವ ಪ್ರಕಾರ, ‘ಆನೆಗಳನ್ನು ಮೂರು ಪೀಳಿಗೆಗಳಲ್ಲಿ ವರ್ಗಿಕರಿಸಲಾಗಿದೆ. ಮೊದಲನೆ ಪೀಳಿಗೆಯ ಆನೆಗಳು ಕಾಡಿನಲ್ಲೇ ಇದ್ದು ಕಾಡಿನ ಆಹಾರಗಳನ್ನು ಮಾತ್ರವೇ ತಿಂದು ಬದುಕುತ್ತಿದ್ದ ಆನೆಗಳು. ಇದನ ನಂತರದಲ್ಲಿ ಕಾಡಿನ ನಾಶ, ಗಣಿಗಾರಿಕೆ, ಅಕ್ರಮ ಒತ್ತುವರಿಯಿಂದ ಎರಡನೇ ಪೀಳಿಗೆಯ ಆನೆಗಳು ಕಾಡಿನ ಅರ್ಧ ಆಹಾರ ತಿಂದು, ಇನ್ನರ್ಧ ಆಹಾರವನ್ನು ತಮ್ಮ ಜಾಗದಲ್ಲಿ ರೈತರ ಬೆಳೆದ ಬೆಳೆಗಳನ್ನು ತಿನ್ನಲು ಆರಂಭಿಸಿದವು. ಇನ್ನು ಇವುಗಳ ನಂತರದ ಮೂರನೇ ಪೀಳಿಗೆಯ ಆನೆಗಳಿಗೆ ಕಾಡಿನಲ್ಲಿ ತಮ್ಮ ಆಹಾರ ಹುಡುಕುವುದೇ ತಿಳಿಯದಂತೆ ಆಗಿದೆ. ಹೀಗಾಗಿ ಇವುಗಳು ಹೆಚ್ಚಾಗಿ ರೈತರು ಬೆಳೆಯುವ ಬೆಳೆಗಳ ಮೇಲೆಯೇ ಹೆಚ್ಚಾಗಿ ಅವಲಂಬಿತವಾಗಿವೆ. ಇನ್ನು ಮುಂದಿನ ಪೀಳಿಗೆಯ ಆನೆಗಳು ಸಂಪೂರ್ಣವಾಗಿ ಕಾಡನ್ನು ಬಿಟ್ಟು ನಾಡಿನತ್ತ ಬಂದು ಸಂಘರ್ಷದಲ್ಲಿ ತೊಡಗುವುದರಿಂದ ಆನೆಗಳು ಉಳಿಯುವುದು ಕಷ್ಟವಾಗಿದೆ. ಈ ಸಮಸ್ಯೆಗೆ ಈಗಲೇ ಪರಿಹಾರ ಕಂಡುಕೊಳ್ಳದಿದ್ದರೆ ಮುಂದಿನ ಕೆಲವೇ ಕೆಲವು ದಶಕಗಳನ್ನು ಆನೆಗಳ ಸಂತತಿಯೇ ನಶಿಸಿ ಹೋದರೂ ಹೋಗಬಹುದು,’ ಎಂದು ಎಚ್ಚರಿಕೆ ನೀಡುತ್ತಾರೆ.

ಸಕಲೇಶಪುರದ ಭಾಗದ ಆನೆಗಳ ಸಂಕಷ್ಟ!
ಸಕಲೇಶಪುರ ಭಾಗದಲ್ಲಿ ಆನೆಗಳು ತೀರಾ ದಾಂಧಲೆ ಮಾಡುತ್ತವೆ ಎಂಬ ಮಾತುಗಳು ಪದೇಪದೆ ಕೇಳಿಬರುತ್ತಿತ್ತವೆ. ಆದರೆ, ಆ ಭಾಗದ ಆನೆಗಳ ಸ್ಥಿತಿಗಳನ್ನು ಒಮ್ಮೆ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳುತ್ತಾರೆ ರಾಜ್‌ಕುಮಾರ್ ದೇವರಾಜೆ ಅರಸು ಅವರು. ಆ ಭಾಗ ಒಂದು ರೀತಿ ಆನೆಗಳು ದ್ವೀಪದಂತೆ ಆಗಿದೆ. ಅವುಗಳು ಹೊರಗೆ ಬರಲಾಗದಂತಹ ಪರಿಸ್ಥಿತಿಯನ್ನು ಸೃಷ್ಟಿಸಲಾಗಿದೆ. ಇದರಿಂದ ಅಲ್ಲಿನ ಆನೆಗಳ ಸಂತಾನೋತ್ಪತ್ತಿಯಲ್ಲಿ ವ್ಯತ್ಯಯ, ಆಹಾರ ಕೊರತೆಯಂತಹ ಸಮಸ್ಯೆಗಳನ್ನು ಎದುರಿಸುತ್ತಿವೆ. ಗಂಡಾನೆ ಕೋರೆ ಎಷ್ಟು ದೊಡ್ಡದಾಗಿ ಇದೆ ಎಂಬುದರ ಮೇಲೆ ಅವುಗಳ ಸದೃಢತೆ ನಿಂತಿರುತ್ತದೆ. ಸಕಲೇಶಪುರ ಭಾಗದ ಆನೆಗಳ ಕೋರೆಗಳನ್ನು ನೀವು ಒಮ್ಮೆ ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯುತ್ತದೆ. ಇಲ್ಲಿನ ಗಂಡಾನೆಗಳ ಕೋರೆಗಳು ಮೊಟು ಮೊಟಾಗಿವೆ ಎಂದು ಹೇಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net