

ಬೇಲೂರು: ಇಬ್ಬೀಡು ಗ್ರಾಮ ಪಂಚಾಯತಿ ಅಧ್ಯಕ್ಷರ ಸರ್ವಾಧಿಕಾರಿ ಧೋರಣೆ ಖಂಡಿಸಿ ಬುಧವಾರ ನಡೆಯಬೇಕಿದ್ದ ಸಾಮಾನ್ಯ ಸಭೆಗೆ ಸದಸ್ಯರ ಗೈರಿನಿಂದಾಗಿ ಕೋರಂ ಇಲ್ಲದೆ ಸಭೆ ರದ್ದು ಪಡಿಸಿ ಮುಂದೂಡಿದ ಘಟನೆ ನಡೆಯಿತು.
ತಾಲೂಕಿನ ಇಬ್ಬೀಡು ಗ್ರಾಮ ಪಂಚಾಯತಿ ಅಧ್ಯಕ್ಷ ಮಂಜುನಾಥ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ಕರೆಯಲಾಗಿತ್ತು. 14 ಜನ ಸದಸ್ಯರುಳ್ಳ ಪಂಚಾಯಿತಿಯಲ್ಲಿ ಸಾಮಾನ್ಯ ಸಭೆಗೆ ಕೇವಲ 4 ಜನ ಸದಸ್ಯರು ಮಾತ್ರ ಹಾಜರಾಗಿದ್ದು ಉಳೀದವರು ಬಾರದ ಕಾರಣ ಕೋರಮ್ ಕೊರತೆಯಿಂದ ಅಭಿವೃದ್ಧಿ ಅಧಿಕಾರಿ ಸರಸ್ವತಿ ಸಭೆಯನ್ನು ರದ್ದುಪಡಿಸಿ ಮುಂದೂಡಿದ್ದಾರೆ.
ಸಭೆಯಿಂದ ಹೊರಗುಳಿದಿದ್ದ ಗ್ರಾಮ ಪಂಚಾಯತಿ ಸದಸ್ಯ ಸಚಿನ್ ಸುದ್ದಿಗಾರರೊಂದಿಗೆ ಮಾತನಾಡಿ, ಸಾಮಾನ್ಯ ಸಭೆಗೆ 7 ದಿನಗಳ ಮುಂಚೆ ಸಭೆ ನಡೆಯಲಿದೆ ಎಂದು ಅಭಿವೃದ್ಧಿ ಅಧಿಕಾರಿ ಸರಸ್ವತಿ ಎಲ್ಲ ಸದಸ್ಯರಿಗೂ ಲಿಖಿತ ಹಾಗೂ ದೂರವಾಣಿ ಮೂಲಕ ತಿಳಿಸಿದ್ದರು. ಆದರೆ ನಮ್ಮ ಪಂಚಾಯಿತಿ ಅಧ್ಯಕ್ಷರ ಬೇಜವಬ್ದಾರಿತ, ಉಡಾಫೆ ವರ್ತನೆ, ಸದಸ್ಯ ಕಡೆಗಣನೆ ಹಾಗೂ ಅವರ ವೈಯಕ್ತಿಕ ನಿರ್ಧಾರಗಳಿಗೆ ಬೇಸತ್ತು 10 ಜನ ಸದಸ್ಯರು ಸಭೆ ಬಹಿ?್ಕರಿಸಿದ್ದೇವೆ. ಈ ಹಿಂದೆಯೂ ಎರಡು ಬಾರಿ ಇದೇ ರೀತಿ ಸಭೆ ರದ್ದಾಗಿತ್ತು. ನಂತರ ಅಧಿಕಾರಿಗಳ ಸಮ್ಮುಖದಲ್ಲಿ ಒಮ್ಮತಕ್ಕೆ ಬಂದು ಈಗಿನ ಅಧ್ಯಕ್ಷ ಮಂಜುನಾಥ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಗ್ರಾಮಗಳ ಅಭಿವೃದ್ಧಿಗೆ ಮುಂದಾಗಿದ್ದೆವು. ಆದರೆ ಈಗ ಪುನ: ಅಧ್ಯಕ್ಷರ ನಡುವಳಿಕೆಯಿಂದ ಬೇಸತ್ತು ಸಭೆಯನ್ನು ಬಹಿ?್ಕರಿಸಿದ್ದೇವೆ. ಇವರು ಅಧ್ಯಕ್ಷರಾದಾಗಿನಿಂದ ಗ್ರಾಮಗಳ ಅಭಿವೃದ್ಧಿಗೆ ಕೈಜೋಡಿಸಿಲ್ಲ. ನನ್ನದೇ ಅಧಿಕಾರ ನನ್ನ ಮಾತೇ ಸುಪ್ರೀಮ್ ಎಂದು ಉದ್ಧಟತನ ತೋರುತ್ತಿದ್ದಾರೆ. ಇದರಿಂದ ಗ್ರಾಮಗಳ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ ಎಂದರು.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸರಸ್ವತಿ ಮಾತನಾಡಿ, ಈಗಾಗಲೇ ಅಧ್ಯಕ್ಷರ ಸೂಚನೆಯಂತೆ ಎಲ್ಲಾ ಸದಸ್ಯರಿಗೆ 7 ದಿನಗಳ ಮುಂಚಿತವಾಗಿ ಸಭೆಯ ನೊಟೀಸ್ ನೀಡಿದ್ದೇವೆ. 11 ಗಂಟೆಗೆ ಸಭೆ ಪ್ರಾರಂಭವಾಗಬೇಕಿತ್ತು. ಆದರೆ 12 ಗಂಟೆಯಾದರೂ ಸಭೆಗೆ ಸದಸ್ಯರು ಬಾರದ ಕಾರಣ ಸಭೆ ರದ್ದುಪಡಿಸಲಾಗಿದೆ. 5 ತಿಂಗಳಲ್ಲಿ ನಾಲ್ಕು ಸಭೆ ಕರೆಯಲಾಗಿದ್ದು ಕೇವಲ ಒಂದು ಸಭೆ ನಡೆದಿದ್ದು ಉಳಿದವು ರದ್ದಾಗಿದೆ. ಇದರ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಅಲ್ಲದೆ ಇಲ್ಲಿಯ ಅಧ್ಯಕ್ಷರು ನಮ್ಮ ನೌಕರರ ಮೇಲೆ ಹಾಗೂ ಸಿಬ್ಬಂದಿಗಳ ಮೇಲೆನಿರಂತರವಾಗಿ ಮಾನಸಿಕ ಕಿರುಕುಳ ನೀಡುವುದರ ಜೊತೆಗೆ ಎಲ್ಲರಿಗೂ ಏಕವಚನದಲ್ಲಿ ನಿಂದಿಸುತ್ತಿದ್ದಾರೆ. ಇದರಿಂದ ಬೇಸತ್ತು ನಾವು ಎಲ್ಲ ಸದಸ್ಯರಿಗೆ ಹಾಗೂ ಮೇಲಾಧಿಕಾರಿಗಳಿಗೂ ದೂರು ನೀಡಿದ್ದೇವೆ. ಆದರೆ ಅಧ್ಯಕ್ಷರು ಸಭೆಯ ಅಜೆಂಡಾವನ್ನು ಇಟ್ಟುಕೊಂಡು ನಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಇಬ್ಬೀಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಪಂಚಾಯಿತಿಯಲ್ಲಿ ಸದಸ್ಯರ ಸಾಮಾನ್ಯ ಸಭೆ ಕರೆದಿದ್ದೆವು. ಕೆಲ ಸದಸ್ಯರ ವಯಕ್ತಿಕ ವಿಚಾರಕ್ಕೆ ಸಭೆ ರದ್ದಾಗಿದೆ. ಗ್ರಾಮದ ಅಭಿವೃದ್ಧಿಗೆ ನಾವು ಕೈಜೋಡಿಸಲಿದ್ದು ಇನ್ನೊಂದು ವಾರದಲ್ಲಿ ಪುನ: ಸಭೆ ಕರೆಯುತ್ತೇವೆ ಎಂದರು.