

ಹಾಸನ: ಮತೀಯವಾದಿ, ಕೋಮುವಾದಿ, ಜನವಿರೋಧಿ, ಜಾತಿವಾದಿ, ಸಂವಿಧಾನ ವಿರೋಧಿ ಶಕ್ತಿಗಳ ವಿರುದ್ಧ ಗುರುವಾರ ನಗರದಲ್ಲಿ ದಲಿತ ಮತ್ತು ಜನಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಬೃಹತ್ ಪ್ರತಿಭಟನಾ ಜಾಥ ಹಾಗೂ ಬಹಿರಂಗ ಸಭೆ ನಡೆಯಿತು.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ನೀಲಿ, ಕೆಂಪು, ಹಸಿರು, ಹಳದಿ ಬಾವುಟಗಳನ್ನು ಪ್ರದರ್ಶಿಸುವ ಮೂಲಕ ಸಹಸ್ರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗುವ ಮೂಲಕ ಗಮನ ಸೆಳೆದರು. ನಂತರ ಸ್ವಾಭಿಮಾನಿ ಭವನದ ಮುಂಭಾಗ ಬಹಿರಂಗ ಸಭೆ ನಡೆಸಿ ಕೋಮುವಾದಿ ಶಕ್ತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ, ಪ್ರಗತಿಪರ ಚಿಂತಕ ದಿನೇಶ್ ಅಮೀನ್‌ಮಟ್ಟು, ದೇಶದಲ್ಲಿ ಸಂವಿಧಾನ ಮತ್ತು ದಲಿತರ ಮೇಲಿನ ದೌರ್ಜನ್ಯ ತಡೆ ಕಾಯಿದೆ ದುರ್ಬಲ ಮಾಡಲು ಅನೇಕ ಪ್ರಯತ್ನ ನಡೆಯುತ್ತಲೇ ಇವೆ. ನಾವೆಲ್ಲ ಇಂದು ದೈರ್ಯದಿಂದ ಬದುಕಲು ಇರುವ ಒಂದೇ ಒಂದು ಆಯುಧ ಎಂದರೆ ಸಂವಿಧಾನ. ಅದನ್ನೇ ಬುಡಮೇಲು ಮಾಡಲು ಮುಂದಾಗಿರುವ ಸರಕಾರಗಳ ನಡೆ ಬಗ್ಗೆ ಜನರು ಯೋಚಿಸಬೇಕಿದೆ ಎಂದು ಎಚ್ಚರಿಸಿದರು.
ಸ್ವಾತಂತ್ರೃ ಬಂದು 75 ವರ್ಷ ಕಳೆದರೂ, ದಲಿತರ ಮೇಲೆ ಹಲ್ಲೆ, ದೌರ್ಜನ್ಯ ನಡೆಯುತ್ತಲೇ ಇವೆ. ಇದನ್ನು ತಡೆಯುವ ನಿಟ್ಟಿನಲ್ಲಿ ಯಾವುದೇ ಪ್ರಯತ್ನ ನಡೆಯುತ್ತಿಲ್ಲ. ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯುರೋ ಪ್ರಕಾರ ದೇಶದಲ್ಲಿ ಪ್ರತಿ 16 ನಿಮಿಷಕ್ಕೆ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದ್ದು, ಪ್ರತಿದಿನ 13 ದಲಿತರ ಕೊಲೆ, 4 ದಲಿತ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣ ದಾಖಲಾಗುತ್ತಿವೆ ಎಂಬ ಅಂಕಿ ಅಂಶಗಳನ್ನು ಕೇಂದ್ರ ಸರ್ಕಾರವೇ ಬಹಿರಂಗಪಡಿಸಿದೆ ಎಂದು ತಿಳಿಸಿದರು.
ಮೀಸಲಾತಿ ಬಗ್ಗೆ ಯಾವುದೇ ಸರ್ಕಾರ ನೇರವಾಗಿ ವಿರೋಧ ವ್ಯಕ್ತಪಡಿಸುತ್ತಿಲ್ಲ. ಆದರೆ ಮೀಸಲಾತಿಯನ್ನು ಸಡಿಲಗೊಳಿಸುವ ಷಡ್ಯಂತ್ರ ನಡೆಯುತ್ತಿವೆ. ದೇಶದಲ್ಲಿ ದಲಿತರು, ಹಿಂದುಳಿದವರು ಹಾಗೂ ಮುಸ್ಲಿಂರನ್ನು ಒಡೆಯುವ ಸಂಚು ನಡೆಯುತ್ತಿದೆ. ಹಿಂದುತ್ವದ ಮೇಲೆ ರಾಜಕಾರಣ ಮಾಡುವವರಿಗೆ ದೇವರ ಮೇಲೆ ಎಳ್ಳಷ್ಟು ಭಕ್ತಿ ಇಲ್ಲದಂತಾಗಿದ್ದು, ರಾಮನ ಹೆಸರಿನಲ್ಲಿ ಪೋಸ್ಟರ್‌ಗಳು ಬರೀ ಚುನಾವಣೆ ಗಿಮಿಕ್ ಆಗಿದೆ . ಧರ್ಮವನ್ನು, ದೇವರನ್ನು ರಾಜಕೀಯಕ್ಕೆ ಬಳಸುವವರು ನಿಜವಾದ ಧರ್ಮ ದ್ರೋಹಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂದು ದೇಶದಲ್ಲಿ ಶೇ.90 ಮತ್ತು ಶೇ.10 ರ ನಡುವೆ ಸಂಘರ್ಷ ಆರಂಭವಾಗಿದೆ, ದೇಶದಲ್ಲಿ ದಲಿತ, ಹಿಂದುಳಿದ, ಮುಸ್ಲಿಂ ಸಮುದಾಯಗಳ ಒಟ್ಟು ಶೇ. 90 ರಷ್ಟು ಜನರಿದ್ದು ಉಳಿದ ಶೇ.10 ರಷ್ಟು ಕೋಮುವಾದಿ ಶಕ್ತಿಯನ್ನು ಹಿಮ್ಮೆಟ್ಟಿಸಲು ವಿಫಲರಾಗಿದ್ದೇವೆ. ಇದಕ್ಕೆ ಒಗ್ಗಟ್ಟಿನ ಕೊರತೆಯೇ ಕಾರಣ. ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ರೈತರು, ಅಲ್ಪಸಂಖ್ಯಾತರು, ಕಾರ್ಮಿಕರು ಮತ್ತು ಮಹಿಳೆಯರು, ಒಂದಾಗಬೇಕು. ಸಂವಿಧಾನದ ಆಶಯಗಳನ್ನು ಒಪ್ಪಿಕೊಳ್ಳುವ ಎಲ್ಲರೂ ಸಂಘಟಿತರಾಗಿ ಸಂವಿಧಾನ ವಿರೋಧಿ ಸಿದ್ಧಾಂತ ಹೊಂದಿರುವ ಎಲ್ಲರನ್ನು ಸೋಲಿಸಲು ಸಜ್ಜಾಗಬೇಕು ಎಂದು ಮನವಿ ಮಾಡಿದರು.
ಇಂದು ಅಂಬೇಡ್ಕರ್ ಚಿಂತನೆಗಳು ಮಾತ್ರ ಬೀದಿಗೆ ಬರಬೇಕು. ಚಳವಳಿ ಮೂಲಕ ಸರ್ಕಾರಗಳನ್ನು ಬದಲಾವಣೆ ಮಾಡಬಹುದು. ಅಂತಹ ಕಾರ್ಯಕ್ಕೆ ಜನ ಮುಂದಾಗುವ ಮೂಲಕ ಉತ್ತಮ ಸರ್ಕಾರದ ಆಯ್ಕೆಗೆ ಸಹಕರಿಸಬೇಕು ಎಂದು ಕರೆ ನೀಡಿದರು.
ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಧರ್ಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಕೋಮುವಾದಿ ಸಂಘಟನೆಗಳನ್ನು ಹಿಮ್ಮಟಿಸಬೇಕಿದೆ, ದೇಶದ ಸಂವಿಧಾನವನ್ನು ಅಪ್ರಸ್ತುತಗೊಳಿಸುವ, ದುರ್ಬಲ ಮಾಡುವ ಪ್ರಯತ್ನ ಸತತವಾಗಿ ನಡೆಯುತ್ತಿದ್ದು, ಇದರ ವಿರುದ್ಧ ದಲಿತ ಹಾಗೂ ಹಿಂದುಳಿದ ವರ್ಗದವರು ಸಂಘಟಿತರಾಗಿ ಹೋರಾಡಬೇಕಿದೆ ಎಂದರು.
ದಲಿತ ಮುಖಂಡರಾದ ಶ್ರೀಧರ್ ಕಲಿವೀರ್, ಎಚ್.ಕೆ. ಸಂದೇಶ್, ನಾರಾಯಣದಾಸ್, ಆರ್‌ಪಿಐ ಸತೀಶ್, ಹೆತ್ತೂರು ನಾಗರಾಜ್, ಎಸ್.ಎನ್.ಮಲ್ಲಪ್ಪ, ರಾಜಶೇಖರ್, ಮಲ್ಲೇಶ್ ಅಂಬುಗ, ಟಿ.ಆರ್.ವಿಜಯಕುಮಾರ್, ಗಣೇಶ್ ವೇಲಾಪುರಿ, ಈರೇಶ್ ಹಿರೇಹಳ್ಳಿ, ಕೆರಗೋಡು ಸೋಮಶೇಖರ್, ಗಂಗಾಧರ್ ಬಹುಜನ್, ಪೃಥ್ವಿ, ಮರಿಜೋಸೆಫ್, ಕೃಷ್ಣದಾಸ್, ಶಂಕರ್ ರಾಜ್, ಅಂತಾರಾಷ್ಟ್ರೀಯ ಕಲಾವಿದ ಕೆ.ಟಿ.ಶಿವಪ್ರಸಾದ್, ಕೆಪಿಆರ್‌ಎಸ್ ಜಿಲ್ಲಾಧ್ಯಕ್ಷ ಎಚ್.ಆರ್.ನವೀನ್ ಕುಮಾರ್ ಮೊದಲಾದವರಿದ್ದರು.