

ಕಲಬುರಗಿ: ಕಡಂಗಂಚಿಯಲ್ಲಿ ಅ.೧೧ರಂದು ಬೆಳಗ್ಗೆ ೧೧.೩೦ಕ್ಕೆ ಕೋಮುವಾದ ಅಳಿಸಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಉಳಿಸಿ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಆಂದೋಲನ ಸಮಿತಿ ಗೌರವಾಧ್ಯಕ್ಷ ಪ್ರೊ.ಆರ್.ಕೆ.ಹುಡಗಿ, ಅಧ್ಯಕ್ಷ ಡಾ.ಡಿ.ಜಿ.ಸಾಗರ್ ಹೇಳಿದರು.
೧೧ರಂದು ಬೆಳಗ್ಗೆ ೧೧.೩೦ಕ್ಕೆ ಕಡಗಂಚಿಯ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯಿಂದ ಜಾಥಾ ಶುರುವಾಗಲಿದ್ದು, ಜಿಲ್ಲೆಯ ವಿವಿಧ ಭಾಗದಿಂದ ಸುಮಾರು ೫ ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಲಿದ್ದಾರೆ. ಕೇಂದ್ರೀಯ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಅವರು ಸಂವಿಧಾನದ ಹಾದಿಯಲ್ಲಿ ಸಾಗಬೇಕಿತ್ತು. ಆದರೆ ಕೋಮುವಾದಿ ಅಜೆಂಡಾದೊಂದಿಗೆ ಆಡಳಿತ ನಡೆಸುತ್ತಿದ್ದಾರೆ.
ಕುಲಪತಿಯಾಗಿ ನೇಮಕಗೊಂಡ ದಿನದಿಂದ ಇಡೀ ಕ್ಯಾಂಪಸ್‌ನ ಶೈಕ್ಷಣಿಕ ವಾತಾವರಣ ಹಾಳಾಗಿದೆ. ಆರ್‌ಎಸ್‌ಎಸ್ ಬೆಂಬಲಿಸುವ ಹಾಗೂ ಹಿಂದುತ್ವ ಚಟುವಟಿಕೆಗಳಿಗೆ ಸಹಕಾರ ನೀಡುವ ಎಬಿವಿಪಿ ಸಂಘಟನೆಗಳ ವಿದ್ಯಾರ್ಥಿಗಳಿಗೆ ಮಾತ್ರ ಪ್ರಾಧ್ಯಾಪಕರು ಮಾನ್ಯತೆ ನೀಡುತ್ತಿದ್ದಾರೆ. ಉಳಿದವರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಮಂಗಳವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ದೂರಿದರು.
ವಿದ್ಯಾರ್ಥಿಗಳನ್ನು ಒತ್ತಾಯಪೂರ್ವಕವಾಗಿ ಎಬಿವಿಪಿಗೆ ಸೇರಿಸಲಾಗುತ್ತಿದೆ, ಒಪ್ಪದವರ ಮೇಲೆ ಕೇಸ್ ಹಾಕಲಾಗುತ್ತಿದೆ. ವಿದ್ಯಾರ್ಥಿಗಳ ಮೇಲೆ ದಾಖಲಾಗಿರುವ ಕೇಸ್ ವಾಪಸ್ ಪಡೆಯಬೇಕು. ಪ್ರೊ.ಬಟ್ಟು ಸತ್ಯನಾರಾಯಣ ಮತ್ತು ಡಾ.ಬಸವರಾಜ ಡೋಣೂರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಹೋರಾಟ ಮಾಡಲಾಗುತ್ತಿದೆ. ಈ ಹೋರಾಟ ಯಾವುದೇ ಜಾತಿಗೆ ಸೀಮಿತವಲ್ಲ ಎಂದರು.
ಪ್ರಮುಖರಾದ ಮೀನಾಕ್ಷಿ ಬಾಳಿ, ಪ್ರಕಾಶ ಮೂಲಭಾರತಿ, ಮಹಾದೇವ ಧನ್ನಿ, ಎಸ್.ಪಿ.ಸುಳ್ಳದ, ಎಚ್.ಶಂಕರ, ಅಶ್ವಿನಿ ಮದನಕರ್, ಲಕ್ಷ್ಮೀಕಾಂತ ಹುಬ್ಬಳ್ಳಿ, ಸುರೇಶ ಹಾದಿಮನಿ, ಹಣಮಂತ ಬೋಧನ, ದತ್ತಾತ್ರೇಯ ಇಕ್ಕಳಕಿ, ಮಂಜು ಸಿ.ಕೆ. ಇತರರಿದ್ದರು.