

ಹಾಸನ: ಮಂಗಳೂರಲ್ಲಿ ಅಥವಾ ಬೇರೆ ಯಾವುದೇ ಭಾಗದಲ್ಲಿ ಕೋಮು ದ್ವೇಷ ಬಿತ್ತಿ ಅಶಾಂತಿ ನಿರ್ಮಾಣ ಮಾಡುವುದು ಅಕ್ಷಮ್ಯ ಅಪರಾಧ. ಇದು ಯಾರಿಗೂ ಶೋಭೆ ತರುವುದಿಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ.ಗೌಡ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಮು ದ್ವೇಷದಿಂದ ಯಾರೇ ಬಲಿಯಾದರೂ ಅಮೂಲ್ಯ ಜೀವಕ್ಕೆ ಬೆಲೆ ಕಟ್ಟಲು ಆಗಲ್ಲ. ಹೀಗಾಗಿ ಆಡಳಿತ ನಡೆಸುವ ಸರ್ಕಾರಗಳು ಗಂಭೀರವಾಗಿ ನಡೆದುಕೊಳ್ಳಬೇಕು. ಕಾನೂನು ಸುವ್ಯವಸ್ಥೆ ಹತೋಟಿಗೆ ತರಬೇಕು ಎಂದರೆ ಎಲ್ಲರೂ ಜವಾಬ್ದಾರಿ ಯಿಂದ ಮಾತನಾಡಬೇಕು ಎಂದರು.
ಕರಾವಳಿ ಭಾಗದಲ್ಲಿ ಕೋಮು-ದ್ವೇಷ ಹೆಚ್ಚಾಗಲು ಬಿಜೆಪಿ ಕಾರಣ ಎಂಬ ಸಚಿವ ದಿನೇಶ್ ಗುಂಡೂರಾವ್ ಅವರ ಆರೋಪಕ್ಕೆ ಪ್ರತಿಕ್ರಿಯಿಸಿ, ಸಾವಿನ ವಿಷಯದಲ್ಲಿ ರಾಜಕೀಯ ಮಾಡುವುದು ಬೇಡ. ಕಾನೂನನ್ನು ಬಿಗಿಪಡಿಸಿ ಯಾರು ತಪ್ಪು ಮಾಡುತ್ತಾರೋ ಅವರನ್ನು ಕಠಿಣವಾಗಿ ದಂಡಿಸಬೇಕು. ಓಲೈಕೆ ರಾಜಕಾರಣ ಮಾಡುವುದನ್ನು ನಿಲ್ಲಿಸಬೇಕು. ಎಲ್ಲ ಧರ್ಮದವರ ಪ್ರಾಣಕ್ಕೂ ಬೆಲೆ ಇದೆ ಎಂಬುದನು ಮನಗಾಣಬೇಕು.
ಹುಬ್ಬಳ್ಳಿ ಗಲಭೆ ಕೇಸ್‌ಗಳನ್ನು ಸರ್ಕಾರ ವಾಪಸ್ ಪಡೆದಿದ್ದನ್ನು ರದ್ದು ಮಾಡಿರುವ ಹೈಕೋರ್ಟ್ ಆದೇಶ ಬಗ್ಗೆ ಪ್ರತಿಕ್ರಿಯಿಸಿ, ಸರ್ಕಾರ ನಡೆಸುವವರು ನಾವೇ ಸಾರ್ವಭೌಮರು ಅಂದುಕೊಳ್ಳಲು ಕಾನೂನಿನಲ್ಲಿ ಅವಕಾಶ ಇಲ್ಲ. ಕಾನೂನಿನಲ್ಲಿ ಅವಕಾಶ ಇಲ್ಲದೇ ಇರುವುದನ್ನು ಮಾಡಿದರೆ ಏನಾಗಲಿದೆ ಎಂಬುದಕ್ಕೆ ಹೈಕೋರ್ಟ್ ತೀರ್ಪು ಉದಾಹರಣೆ. ಈ ರೀತಿಯ ತೀರ್ಮಾನ ಕೈಗೊಳ್ಳುವ ಮುನ್ನ 10 ಬಾರಿ ಯೋಚಿಸಬೇಕು. ಸರ್ಕಾರದ ಇದೇ ರೀತಿಯ ಎಡವಟ್ಟುಗಳಿಂದ ಮಂಗಳೂರಿನಲ್ಲಿ ಒಂದಲ್ಲ ಒಂದು ರೀತಿಯ ಸಮಸ್ಯೆ ಆಗುತ್ತಿದೆ. ಕೋಮುದಳ್ಳುರಿ ಬಿತ್ತುವ, ಅಶಾಂತಿ ಸೃಷ್ಟಿಸಿ ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುವವರ ಮೇಲಿನ ಕೇಸ್ ವಾಪಸ್ ಪಡೆಯುವುದು ಸರಿಯಲ್ಲ ಎಂದರು.
ಬಿಜೆಪಿಯಿಂದ ಶಾಸಕರಾದ ಎಸ್.ಟಿ.ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಅವರನ್ನು ಉಚ್ಚಾಟನೆ ಹಿಂದೆಯೇ ಆಗಬೇಕಿತ್ತು. ಇದು ಕಾರ್ಯಕರ್ತರ ಆಶಯ ಕೂಡ ಆಗಿತ್ತು. ಅವರ ನಡವಳಿಕೆ ಅದನ್ನು ತೋರಿಸಿಕೊಡುತ್ತಿತ್ತು. ಅಂತಿಮವಾಗಿ ಪಕ್ಷ ತೀರ್ಮಾನ ಕೈಗೊಂಡಿದೆ. ಯಾರೇ ಆಗಲಿ, ಪಕ್ಷದ ವಿರೋಧಿ ಚಟುವಟಿಕೆ ನಡೆಸಿದರೆ ಇದೇ ಶಿಕ್ಷೆಯಾಗುತ್ತದೆ ಎಂಬುದನ್ನು ಕೇಂದ್ರ ನಾಯಕರು ತೋರಿಸಿಕೊಟ್ಟಿದ್ದಾರೆ. ಈ ಮೂಲಕ ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಹೇಳಿದರು.
ಹಾಸನ ಜಿಲ್ಲೆಯಲ್ಲಿ ಮುಂದಿನ ಜಿಪಂ-ತಾಪಂ ಚುನಾವಣೆಯಲ್ಲೂ ಬಿಜೆಪಿ-ಜೆಡಿಎಸ್ ನಡುವಿನ ಮೈತ್ರಿ ಮುಂದುವರಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಪ್ರೀತಂ ಗೌಡ, ಅದನ್ನು ರಾಜ್ಯಮಟ್ಟದ ನಾಯಕರು ತೀರ್ಮಾನ ಮಾಡುತ್ತಾರೆ ಎಂದ ಅವರು, ಇದೇ ವೇಳೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲಲಿದೆ ಎಂಬ ಡಿಸಿಎಂ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಕೆಪಿಸಿಸಿ ಅಧ್ಯಕ್ಷರೂ ಆಗಿದ್ದಾರೆ. ಎಲ್ಲ ಪಕ್ಷಗಳ ನಾಯಕರು ಹೀಗೆ ಹೇಳುವುದು ಸಹಜ. ನಾವೂ ಹೇಳುತ್ತೇವೆ, ಜನತಾ ದಳದವರೂ ಹೇಳುತ್ತಾರೆ. ಆದರೆ ಚುನಾವಣೆ ಸಂದರ್ಭದಲ್ಲಿ ಜನರ ವಿಶ್ವಾಸ ಯಾರಿಗೆ ಇರುತ್ತದೆಯೋ ಅವರು ಗೆಲ್ಲುತ್ತಾರೆ ಎಂದರು. ಆದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಜಿಲ್ಲೆಯ ಏಳೂ ಸ್ಥಾನ ಗೆಲ್ಲಲಿದೆ. ಹಾಗೆಯೇ ರಾಜ್ಯದಲ್ಲಿ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಭೇರಿ ಬಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.