

ಮೈಸೂರು: ರಾಜ್ಯದಲ್ಲಿ ನಡೆಯುತ್ತಿರುವ ಗಲಭೆ ಘಟನೆ ಖಂಡಿಸಿ ಕೂಡಲೇ ಶಾಸನ ಸಭೆ ಕರೆಯಬೇಕೆಂದು ಆಗ್ರಹಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರಿನಲ್ಲಿ ಮೇಲಿಂದ ಮೇಲೆ ಕೋಮು ಗಲಭೆ ನಡೆಯುತ್ತಿವೆ. ಸರ್ಕಾರವು ತಕ್ಷಣ ಎಚ್ಚರಿಕೆ ವಹಿಸಬೇಕು. ಕೂಡಲೇ ಶಾಸನ ಸಭೆ ಕರೆದು ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದು ಒತ್ತಾಯಿಸಿದರು.
ಕೋಮು ದಳ್ಳುರಿ, ಧರ್ಮ ಧರ್ಮಗಳ ನಡುವೆ ದ್ವೇಷ ಭಾವನೆ, ಪ್ರಚೋದನಕಾರಿ ಬೆಳವಣಿಗೆಗಳ ದಮನ ಮಾಡಬೇಕು. ಬಿ.ಎಸ್.ಯಡಿಯೂರಪ್ಪನ ಕಾಲದಿಂದಲೂ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಈಗಲಾದರೂ ಶಾಂತಿ ಸುವ್ಯವಸ್ಥೆ ಕಾಯ್ದುಕೊಳ್ಳಲು ರಾಜ್ಯ ಸರ್ಕಾರ ಕಠಿಣ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಕಳೆದ ಜನವರಿಯಿಂದ ಏಪ್ರಿಲ್‌ವರೆಗೆ 400ಕ್ಕೂ ಹೆಚ್ಚು ಕೊಲೆ ಕೇಸ್‌ಗಳು, 120 ಅತ್ಯಾಚಾರಗಳು, 70ಕ್ಕೂ ಹೆಚ್ಚು ಪೋಕ್ಸೋ ಪ್ರಕರಣಗಳು ಸಂಭವಿಸಿವೆ. ಆದ್ದರಿಂದ ಎಲ್ಲ ಪ್ರಕರಣಗಳನ್ನು ಕೂಡಲೇ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಗಾಯಕ ಸೋನು ನಿಗಮ್ ಅವರನ್ನು ಕನ್ನಡ ಚಿತ್ರರಂಗದಿಂದ ನಿಷೇಧಿಸಿ, ಕನ್ನಡ ಪ್ರತಿಭೆಗಳಿಗೆ ಅವಕಾಶ ಕೊಡಬೇಕು. ಅನ್ಯ ಭಾಷೆಯ ಗಾಯಕರನ್ನು ಹಾಡಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಕೂಡಲೇ ಸೋನು ನಿಗಮ್ ಕ್ಷಮೆಯಾಚಿಸಬೇಕು. ಆತನನ್ನು ಪೊಲೀಸರು ಬಂಧಿಸಿ ಜೈಲಿನಲ್ಲಿಡಬೇಕು. ಬೇರೆ ರಾಜ್ಯದ ಗಾಯಕರಿಂದ ಹಾಡಿಸುವುದನ್ನು ನಮ್ಮ ಚಿತ್ರರಂಗ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.