ಕೋಮಲಾಪುರ ಜನರಿಗೆ ತಪ್ಪದ ಬವಣೆ

06-08kodekal01
೦೮ಕೊಡೇಕಲ್‌೦೧/ಕೊಡೇಕಲ್ ಸಮೀಪದ ಕೋಮಲಾಪುರದ ಜನರು ಊರಾಚೆ ಪೈಪ್‌ಲೈನ್ ವಾಲ್ವ್ನಲ್ಲಿ ಸೋರಿಕೆಯಾಗುತ್ತಿರುವ ನೀರನ್ನು ಗಾಡಿಗಳಲ್ಲಿ ತರುತ್ತಿರುವುದು.
Published on

ಪವನ ದೇಶಪಾಂಡೆ ಕೊಡೇಕಲ್: ಕೋಮಲಾಪುರ ಗ್ರಾಮದಲ್ಲಿ ಎರಡು ತಿಂಗಳಿಂದ ತಲೆದೋರಿರುವ ಕುಡಿವ ನೀರಿನ ಸಮಸ್ಯೆಯಿಂದಾಗಿ ಜನರು ಪರದಾಡುವಂತಾಗಿದೆ.
೫೦೦ಕ್ಕೂ ಅಧಿಕ ಜನಸಂಖ್ಯೆಯ ಮಾರನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಮಲಾಪುರದಲ್ಲಿ ಮೂರು ಕೊಳವೆ ಬಾವಿಗಳಿದ್ದರೂ ಗ್ರಾಮಸ್ಥರಿಗೆ ನೀರಿನ ಸಮಸ್ಯೆಯಿಂದ ಮುಕ್ತಿ ಸಿಕ್ಕಿಲ್ಲ. ಕೊಳವೆ ಬಾವಿಗೆ ಮೋಟಾರ್ ಅಳವಡಿಸಿ ಗುಮ್ಮಿಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಸಮಸ್ಯೆ ಎದುರಾಗಿದೆ.

ಕಳೆದ ತಿಂಗಳು ನೀರೆತ್ತುವ ಮೋಟಾರ್ ಕೆಟ್ಟು ಹೋಗಿದ್ದರಿಂದ ಕೊಡ ನೀರಿಗೂ ಜನರು ಪರಿತಪಿಸುತ್ತಿದ್ದಾರೆ. ಮೂರು ಕೊಳವೆ ಬಾವಿಗಳಲ್ಲಿ ಒಂದು ಕೆಟ್ಟಿದ್ದು, ಉಳಿದೆರಡರ ನೀರು ಕುಡಿಯಲು ಮಾತ್ರ ಸಾಕಾಗುತ್ತದೆ. ಹೀಗಾಗಿ ಅನಿವಾರ್ಯವಾಗಿ ಗ್ರಾಮ ಹೊರವಲಯದ ಜಮೀನುಗಳಲ್ಲಿನ ಬಾವಿ ಅಥವಾ ಬೇರೆಡೆ ಹೋಗಿ ತರುವಂಥ ಸ್ಥಿತಿ ನಿರ್ಮಾಣವಾಗಿದೆ.

ನಾರಾಯಣಪುರದ ಬಸವಸಾಗರ ಜಲಾಶಯದಿಂದ ಬೂದಿಹಾಳ ಪೀರಾಪುರ ಏತ ನೀರಾವರಿ ಯೋಜನೆಯ ಪೈಪ್‌ಲೈನ್ ಕೋಮಲಾಪುರದ ಹೊರವಲಯದ ಮೂಲಕ ಹೋಗಿದ್ದು, ಅಲ್ಲಿನ ವಾಲ್ವ್ನಿಂದ ಸೋರಿಕೆಯಾಗುತ್ತಿರುವ ಅಶುದ್ಧ ನೀರನ್ನೇ ಗಾಡಿಗಳ ಮೂಲಕ ತಂದು ಕುಡಿಯುತ್ತಿದ್ದರೂ ಅಧಿಕಾರಿಗಳು ಮಾತ್ರ ಕ್ರಮ ಕೈಗೊಳ್ಳದಿರುವುದು ಗ್ರಾಮಸ್ಥರನ್ನು ಸಿಡಿದೇಳುವಂತೆ ಮಾಡಿದೆ.

ವಾರದ ಐದು ದಿನ ನೀರು ಸರಬರಾಜು ಆಗುವುದಿಲ್ಲ. ಹಲವು ಬಾರಿ ಗ್ರಾಮ ಪಂಚಾಯಿತಿಯವರಿಗೆ ಮನವಿ ಮಾಡಿದ್ದರೂ ಸ್ಪಂದಿಸುತ್ತಿಲ್ಲ. ಕುಡಿವ ನೀರಿನ ಸಮಸ್ಯೆ ಆಗದಂತೆ ಶಾಶ್ವತ ಪರಿಹಾರ ದೊರಕಿಸಿಕೊಡಿ ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

ನಮ್ಮೂರು ಗಡಿ ಗ್ರಾಮ ಎಂದು ಎಲ್ಲರಲ್ಲೂ ತಾತ್ಸಾರ ಮನೋಭಾವ ಅದ. ಅಂಥದರಾಗ ಊರಾಗ ಕುಡ್ಯಾಕ ನೀರು ಇಲ್ಲಂದ್ರೂ ಕೇಳೋರಿಲ್ಲ. ಊರ ಹೊರಗ ಹೋಗಿ ಸೋರೋ ನೀರ ತಂದ ಕುಡಿವ ಗತಿ ಬಂದಾದ. ಯಾರಿಗೆ ಹೇಳಬೇಕು?
| ಸಾಯಬಣ್ಣ ಬಿರಾದಾರ ಗ್ರಾಮಸ್ಥ

ಕೋಮಲಾಪುರದಲ್ಲಿ ಕುಡಿವ ನೀರಿನ ಸಮಸ್ಯೆ ಇರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಪಿಡಿಒ ಅವರಿಂದ ಮಾಹಿತಿ ಪಡೆದು ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು.
| ಬಸವರಾಜ ಸ್ವಾಮಿ ಹಿರೇಮಠ ತಾಪಂ ಇಒ ಹುಣಸಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net