

ಅರಕಲಗೂಡು: ಪಟ್ಟಣದ ಕೋಟೆ ಕೋದಂಡರಾಮ ದೇವಾಲಯದಲ್ಲಿ ರಾಮನವಮಿ ಅಂಗವಾಗಿ ಗುರುವಾರ ಕೋದಂಡರಾಮ ರಥೋತ್ಸವ ಸಂಭ್ರಮದಿಂದ ನೆರವೇರಿತು.
ಬೆಳಗ್ಗೆ ದೇವಾಲಯದಲ್ಲಿ ಮೂಲ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ ನಡೆಸಿ ವಿವಿಧ ಧಾರ್ಮಿಕ ಕೈಂಕರ್ಯ ನಡೆಸಲಾಯಿತು. ಬಳಿಕ ಉತ್ಸವ ಮೂರ್ತಿಗಳನ್ನು ಅಲಂಕರಿಸಿದ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ನಂತರ ರಥ ಬೀದಿಯಲ್ಲಿ ಭಕ್ತರು ತೇರು ಎಳೆದರು.
ಭಕ್ತರು ರಥಕ್ಕೆ ಈಡುಗಾಯಿ ಒಡೆದು ಪೂಜೆ ಸಲ್ಲಿಸಿದರು. ತೇರು ಸ್ವಸ್ಥಾನ ತಲುಪಿದ ಬಳಿಕ ದೇವಾಲಯದಲ್ಲಿ ಸಾಮೂಹಿಕ ಭಜನೆ, ಮಂಗಳಾರತಿ ನಡೆಯಿತು. ಭಕ್ತರಿಗೆ ಪಾನಕ, ಕೋಸಂಬರಿ, ರಸಾಯನ ಪ್ರಸಾದ ನೀಡಲಾಯಿತು. ರಾತ್ರಿ ಶಾಂತೋತ್ಸವ ಹಾಗೂ ವಿದುಷಿ ಗೀತಾ ಚಂದ್ರಶೇಖರ್ ಅವರಿಂದ ಶಂಕರಾಚಾರ್ಯ ವಿರಚಿತ ಸೌಂದರ್ಯ ಲಹರಿ ಗಾಯನ ನಡೆಯಿತು.
ಪಟ್ಟಣದ ಪೇಟೆ ಬಸವನಗುಡಿ ಬೀದಿಯ ಕುರುಹಿನಶೆಟ್ಟಿ ರಾಮಮಂದಿರದಲ್ಲಿ ಪೂಜೆಗಳು ನಡೆದವು. ಭಕ್ತರಿಗೆ ಕೋಸಂಬರಿ, ಪಾನಕ ವಿತರಿಸಲಾಯಿತು. ಕೊಣನೂರು ರಾಮ ಮಂದಿರ ಹಾಗೂ ರಾಮನಾಥಪುರದ ಶ್ರೀ ಪಟ್ಟಾಭಿರಾಮ ದೇವಸ್ಥಾನದಲ್ಲಿ ಪೂಜೆಗಳು ನಡೆದವು.