

ಬೂದಿಕೋಟೆ: ಕೋಡಗುರ್ಕಿಯಲ್ಲಿ 30ಕ್ಕೂ ಹೆಚ್ಚು ಕೋತಿಗಳು ನಿತ್ರಾಣಗೊಳ್ಳಲು ಬಿಸಿಲು ಮತ್ತು ಹಸಿವು ಕಾರಣ ಎಂದು ಹಿರಿಯ ಪಶು ವೈದ್ಯಾಧಿಕಾರಿ ಡಾ.ಎಸ್.ಪ್ರದೀಪ್‌ಕುಮಾರ್ ತಿಳಿಸಿದ್ದಾರೆ.
ಬಂಗಾರಪೇಟೆ ತಾಲೂಕು ಬೂದಿಕೋಟೆ ಹೋಬಳಿ ಕೋಡಗುರ್ಕಿಗೆ ಭೇಟಿ ನೀಡಿ ಕೋತಿಗಳಿಗೆ ಔಷಧ ಹಾಗೂ ಹಣ್ಣುಗಳನ್ನು ನೀಡಿ ಮಾತನಾಡಿದ ಅವರು, ನೀರಿನ ಮೂಲಕ ಕೋತಿಗಳಿಗೆ ರೋಗನಿರೋಧಕ ಔಷಧ ನೀಡಲಾಗುತ್ತಿದೆ. ಮೂರ್ನಾಲ್ಕು ದಿನಗಳಲ್ಲಿ ಚೇತರಿಸಿಕೊಳ್ಳಬಹುದು ಎಂದು ಹೇಳಿದರು.
ಕೋಡಗುರ್ಕಿ ಗ್ರಾಮದಲ್ಲಿ ನೂರಕ್ಕೂ ಹೆಚ್ಚು ಕೋತಿಗಳಿವೆ. ಬಹಳಷ್ಟು ಗರ್ಭಿಣಿ ಮತ್ತು ಮರಿ ಕೋತಿಗಳಿವೆ. ಅವು ಸರಿಯಾಗಿ ಆಹಾರವಿಲ್ಲದೆ ಬಳಲುತ್ತಿದ್ದವು. ನೀರಿನಲ್ಲಿ ಒಆರ್‌ಎಸ್ ಪೌಡರ್ ಮತ್ತು ರೋಗನಿರೋಧಕ ಔಷಧ ಬೆರೆಸಿ ಗ್ರಾಪಂ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ನೆರವಿನೊಂದಿಗೆ ಕೋತಿಗಳಿಗೆ ನೀಡಲಾಗುತ್ತಿದೆ. ಇದೀಗ ಬಹಳಷ್ಟು ಕೋತಿಗಳು ಚೇತರಿಕೆ ಕಂಡಿವೆ. ಇನ್ನೂ ಮೂರು ದಿನ ಇದೇ ಚಿಕಿತ್ಸೆ ಮುಂದುವರಿಸಲು ಅರಣ್ಯ ಇಲಾಖೆ ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಕೆಲವು ದಿನಗಳವರೆಗೆ ಗ್ರಾಮಸ್ಥರು ಮನೆಗಳಲ್ಲಿ ಉಳಿದ ಆಹಾರವನ್ನು ಕೋತಿಗಳಿಗೆ ನೀಡಬಾರದು. ರೈತರು ಬೆಳೆಗಳಿಗೆ ಕ್ರಿಮಿನಾಶಕ ಸಿಂಪಡಿಸಿದರೆ ಕೆಲವು ಗಂಟೆ ಕೋತಿಗಳು ಒಳಬರದಂತೆ ನೋಡಿಕೊಳ್ಳಬೇಕು ಎಂದರು.
ಅರಣ್ಯ ಇಲಾಖೆ ಗಾರ್ಡ್ ನಾರಾಯಣಪ್ಪ, ವಾಚರ್ ಜಗದೀಶ್‌ಕುಮಾರ್, ಪಶು ಇಲಾಖೆ ಸಿಬ್ಬಂದಿ ನಾರಾಯಣಪ್ಪ, ಮುಖಂಡರಾದ ಕೃಷ್ಣಮೂರ್ತಿ, ಮುರಳಿ ಇತರರಿದ್ದರು.