ಕೋಣನೂರು ಕುರುಚಲು ಅರಣ್ಯ ಪ್ರದೇಶಕ್ಕೆ ಬೆಂಕಿ

21NGD3
ನಂಜನಗೂಡು ತಾಲೂಕಿನ ಕೋಣನೂರು ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿರುವುದು.
Published on

ನಂಜನಗೂಡು: ತಾಲೂಕಿನ ಕೋಣನೂರು ಕುರುಚಲು ಅರಣ್ಯ ಪ್ರದೇಶದಲ್ಲಿ ಸೋಮವಾರ ಸಂಜೆ ಕಿಡಿಗೇಡಿಗಳು ಬೆಂಕಿ ಹೊತ್ತಿಸಿದ ಪರಿಣಾಮ ರಾತ್ರಿಯಾಗುತ್ತಿದ್ದಂತೆ ಹತ್ತಾರು ಎಕರೆ ಪ್ರದೇಶಗಳಲ್ಲಿ ಬೆಂಕಿ ವಿಸ್ತರಿಸಿದೆ. ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ಮಂಗಳವಾರ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ.

ಸೋಮವಾರ ಸಂಜೆ ಅರಣ್ಯ ಪ್ರದೇಶಕ್ಕೆ ತೆರಳಿರುವ ದನಗಾಹಿಗಳು ಗುಡ್ಡಗಾಡು ಪ್ರದೇಶದ ತುತ್ತ ತುದಿಗೆ ತೆರಳಿ ಬೆಂಕಿ ಹೊತ್ತಿಸಿದ್ದಾರೆ ಎನ್ನಲಾಗಿದೆ. ರಾತ್ರಿಯಾಗುತ್ತಿದ್ದಂತೆ ಆ ಬೆಂಕಿಯ ಜ್ವಾಲೆ ಇಡೀ ಗುಡ್ಡಗಾಡು ಪ್ರದೇಶವನ್ನು ಆವರಿಸಿಕೊಂಡಿದೆ. ಇದರಿಂದಾಗಿ ಅಲ್ಲಿ ನೆಲೆಸಿರುವ ಜಿಂಕೆ, ಸಾರಗ, ಮೊಲ ಸೇರಿದಂತೆ ಇತರ ಕಾಡು ಪ್ರಾಣಿಗಳು ಕೂಡ ತೊಂದರೆಗೆ ಸಿಲುಕಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ವಲಯಾರಣ್ಯಾಧಿಕಾರಿ ಕಿರಣ್ ಸೇರಿದಂತೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಇನ್ನು ಮಂಗಳವಾರವೂ ಕಾರ್ಯಾಚರಣೆ ಮುಂದುವರಿಸಿ ಸಹಜ ಸ್ಥಿತಿಗೆ ತಂದಿದ್ದಾರೆ. ಘಟನೆ ಕುರಿತು ಸ್ವಯಂ ದೂರು ದಾಖಲಿಸಿಕೊಂಡಿರುವ ಅರಣ್ಯ ಇಲಾಖೆಯು ದುಷ್ಕರ್ಮಿಗಳ ಪತ್ತೆಗಾಗಿ ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net