ಚಾಮರಾಜನಗರ: ಹನೂರು ತಾಲೂಕಿನ ಮಂಗಲ ಗ್ರಾಮದಲ್ಲಿ ನಡೆಯುತ್ತಿರುವ ಶ್ರೀ ಕೋಣನ ಮಾರಮ್ಮನ ಜಾತ್ರೋತ್ಸವದಲ್ಲಿ ಶನಿವಾರ ಕೊಂಡೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಕೊಂಡೋತ್ಸವದ ಹಿನ್ನೆಲೆಯಲ್ಲಿ ಬೆಳಗ್ಗೆ 7.30ರಲ್ಲಿ ಉಪವಾಸವಿದ್ದ ಅಲಗುಮೂಲೆಯ ವೀರಭದ್ರೇಶ್ವರ, ಕಲ್ಲುಕಟ್ಟೆಯ ಬ್ರಹ್ಮಲಿಂಗೇಶ್ವರ ಹಾಗೂ ಮೋಡಳ್ಳಿಯ ಬೀರೇಶ್ವರ ದೇಗುಲದ ಅರ್ಚಕರು ಗ್ರಾಮಸ್ಥರ ಜತೆಗೂಡಿ ವೀರಭದ್ರೇಶ್ವರ ದೇಗುಲದಿಂದ ಸತ್ತಿಗೆ, ಸೂರಿಪಾನಿ ಹಾಗೂ ವಾದ್ಯಮೇಳದೊಂದಿಗೆ ಬೀರುದೇವರ ಉತ್ಸವ, ನಂದಿಧ್ವಜ ಕಂಬವನ್ನು ನೀರಿನ ಆಸರೆಯಿರುವ ಸ್ಥಳಕ್ಕೆ ಕೊಂಡೊಯ್ದು ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಬಳಿಕ ಮಠದ ಬೀದಿ ಮೂಲಕ ಮೆರವಣಿಗೆಯಲ್ಲಿ ತೆರಳಿ ರಂಗದಮಾಳಕ್ಕೆ ಆಗಮಿಸಲಾಯಿತು. ಈ ವೇಳೆ ಕೊಂಡಕ್ಕೆ ಪೂಜೆ ಸಲ್ಲಿಸಲಾಯಿತು. ನೆರೆದಿದ್ದ ಜನರು ಜಯಘೋಷಗಳನ್ನು ಮೊಳಗಿಸುತ್ತ ಅರ್ಚಕರನ್ನು ಹುರಿದುಂಬಿಸಿದರು.
ಬೆ. 9.55ಕ್ಕೆ ಅರ್ಚಕರು ಮೈಗೆ ವಿಭೂತಿ ಬಳಿದುಕೊಂಡು ಖಡ್ಗ ಹಿಡಿದುಕೊಂಡು ವೀರಾವೇಶದಿಂದ ಕೊಂಡವನ್ನು ಹಾಯ್ದರು. ಇದೇ ವೇಳೆ ಬಸವನಿಂದಲೂ ಸಹ ಕೊಂಡವನ್ನು ಹಾಯಿಸಲಾಯಿತು. ಬಳಿಕ ಬೀರುದೇವರ ಕುಣಿತ ನಡೆಯಿತಲ್ಲದೆ ಅರ್ಚಕರು ರಂಗದ ಕಂಬದ ಸುತ್ತ ಕುಣಿಯುವುದನ್ನು ಜನರು ಕಣ್ತುಂಬಿಕೊಂಡರು.
ಹೆಚ್ಚಿನ ಭಕ್ತರು ಭಾಗಿ: ಕೊಂಡೋತ್ಸವದ ಹಿನ್ನೆಲೆಯಲ್ಲಿ ಮಂಗಲ ಸೇರಿದಂತೆ ಕಾಮಗೆರೆ, ಮೋಡಹಳ್ಳಿ, ಕಣ್ಣೂರು, ಆನಾಪುರ, ಗುಂಡಾಪುರ, ಅಲಗುಮೂಲೆ, ಬೂದುಬಾಳು, ಆಚಗಳ್ಳಿದೊಡ್ಡಿ, ಹನೂರು, ಬಂಡಳ್ಳಿ, ಕೊಳ್ಳೇಗಾಲ ಹಾಗೂ ಇನ್ನಿತರ ಗ್ರಾಮದಿಂದ ಸಾವಿರಾರು ಭಕ್ತರು ಬೆಳಗ್ಗೆ 7ರಿಂದಲೇ ಕೊಂಡದ ಬಳಿ ನೆರೆದಿದ್ದರು. ಕೊಂಡೋತ್ಸವದ ಬಳಿಕ ಕೊಂಡಕ್ಕೆ ನಮಿಸಿ ಹಿಂದಿರುಗಿದರು. ಕೊಂಡೋತ್ಸವದ ವೇಳೆ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಮೆರವಣಿಗೆ: ಮಧ್ಯಾಹ್ನ 3ಕ್ಕೆ ಮಲ್ಲೇಶ್ವರ ಹಾಗೂ ಕೆಂಡಗಣ್ಣೇಶ್ವರರ ಸತ್ತಿಗೆ ಹಾಗೂ ಬೀರು ದೇವರ ಉತ್ಸವ ಮೂರ್ತಿಯನ್ನು ಮುಖ್ಯ ರಸ್ತೆ ಸೇರಿದಂತೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಈ ವೇಳೆ ಅರ್ಚಕರು, ಯಜಮಾನರು ಹಾಗೂ ಗ್ರಾಮಸ್ಥರು ಇದ್ದರು.