ಕೋಡಿಹಳ್ಳಿ ಚಂದ್ರಶೇಖರ್ ರೈತರ ಹೆಸರಿನಲ್ಲಿ ಪಾದಯಾತ್ರೆ ನಾಟಕೀಯ:ಶಿವಲಿಂಗಪ್ಪ

ಕೋಡಿಹಳ್ಳಿ ಚಂದ್ರಶೇಖರ್ ರೈತರ ಹೆಸರಿನಲ್ಲಿ ಪಾದಯಾತ್ರೆ ನಾಟಕೀಯ:ಶಿವಲಿಂಗಪ್ಪ
Published on

ಹಾಸನ: ರೈತರಿಗೆ ಸುಳ್ಳು ಭರವಸೆ ನೀಡುವ ಮೂಲಕ ಮೋಸ ಮಾಡುತ್ತ ಬಂದಿರುವ ಕೋಡಿಹಳ್ಳಿ ಚಂದ್ರಶೇಖರ್ ಅವರು ಈಗ ಕಾವೇರಿ ನೀರು ಮತ್ತು ಕೊಬ್ಬರಿ ಬೆಲೆ ಇಳಿಕೆ ವಿಷಯವಾಗಿ ಪಾದಯಾತ್ರೆ ಹೊರಟಿರುವುದು ನಾಟಕೀಯ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ( ಪುಟ್ಟಣ್ಣಯ್ಯ ಬಣ) ಜಿಲ್ಲಾಧ್ಯಕ್ಷ ಶಿವಲಿಂಗಪ್ಪ ದೂರಿದರು.

ರೈತ ಮುಖಂಡ ಎಂದು ಹೇಳಿಕೊಂಡು ಕೋಡಿಹಳ್ಳಿ ಚಂದ್ರಶೇಖರ್ ಸರ್ಕಾರದ ಜತೆ ಮಾತನಾಡಿ ರೈತರಿಗೆ ವಿವಿಧ ಸೌಲಭ್ಯ ಕೊಡಿಸುವುದಾಗಿ ಈಗಾಗಲೆ ಸಾಕಷ್ಟು ಸಲ ರೈತರಿಗೆ ವಂಚಿಸಿದ್ದಾರೆ. ಈಗ ಮತ್ತೆ ಕಾವೇರಿ ಮತ್ತು ಕೊಬ್ಬರಿಗೆ ವೈಜ್ಞಾನಿಕ ಬೆಲೆ ನಿಗದಿ ವಿಚಾರ ವಿಷಯಗಳಿಗೆ ಅರಸೀಕೆರೆ ಎಪಿಎಂಸಿ ಮಾರುಕಟ್ಟೆಯಿಂದ ಬೆಂಗಳೂರಿಗೆ ಬೃಹತ್ ಪಾದಯಾತ್ರೆ ಹೊರಟಿರುವುದು ಕೇವಲ ನಾಟಕ ಎಂದು ಸೋಮವಾರ ಸುದ್ದಿಗೋಷ್ಠಿ ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ರೈತರಿಗೆ ಪರಿಹಾರ ಕೊಡಿಸುತ್ತೇನೆಂದು ರೈತರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಮಾರ್ಗಮಧ್ಯದಿಂದಲೇ ವಾಪಸ್ ಕಳುಹಿಸಿದರು. ರಾಜ್ಯ ಸರ್ಕಾರದಿಂದ ಕೆಎಂಎಫ್‌ನಂತೆ ಖಾಸಗಿ ಡೈರಿಯಲ್ಲಿ ಐದು ರೂ. ಸಹಾಯಧನ ಕೊಡಿಸುತ್ತೇನೆ ಎಂದು ಬೆಂಗಳೂರಿಗೆ ಕರೆಸಿ ಕೇವಲ ಆಶ್ವಾಸನೆ ಕೊಟ್ಟರು. 2017 ರಲ್ಲಿ ಸಾಲ ಮನ್ನಾ ಮಾಡಿಸುತ್ತೇನೆ ಎಂದು ಹೇಳಿ ಸ್ವಂತ ಅರ್ಜಿಗಳನ್ನು ಸಿದ್ಧಪಡಿಸಿ, ಸುಮಾರು 21 ಜಿಲ್ಲೆಗಳಲ್ಲಿ ಪ್ರತಿ ಅರ್ಜಿಗೆ 50 ರಿಂದ 100 ರೂ. ಪಡೆದು ಮೋಸ ಎಸಗಿದರು ಎಂದು ಆರೋಪಿಸಿದರು.

ರೈತರ ಹೆಸರೇಳಿಕೊಂಡು ಕೇವಲ ಕಾಲಹರಣ ಮಾಡುತ್ತಿರುವ ಕೋಡಿಹಳ್ಳಿ ಚಂದ್ರಶೇಖರ್ ಹೋರಾಟದಿಂದ ಯಾವ ಕಾರ್ಯಗಳು ಯಶಸ್ವಿಯಾಗಿವೆ, ಸರ್ಕಾರದಿಂದ ರೈತರಿಗೆ ಎಷ್ಟು ಸಹಾಯ ಮಾಡಿಕೊಟ್ಟಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ. ಆನಂತರ ಇವರು ಪಾದಯಾತ್ರೆ ಮಾಡಲಿ. ಕೇವಲ ತೋರ್ಪಡಿಕೆಗಾಗಿ ರೈತರನ್ನು ಮರುಳು ಮಾಡಲು ಹೋಗುತ್ತಿರುವುದು ನಿಜಕ್ಕೂ ಖಂಡನೀಯ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ನಂಜುಂಡಪ್ಪ, ರವಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net