ಕೋಡಿಯಾಲ ಗ್ರಾಮಸ್ಥರ ಪ್ರತಿಭಟನೆ

SRP_15-02jpg
Published on

ಶ್ರೀರಂಗಪಟ್ಟಣ: ತಾಲೂಕಿನ ಕೊಡಿಯಾಲ ಗ್ರಾಮದ ವಿವಾದಿತ ಸ್ಥಳವನ್ನು ಪೊಲೀಸ್ ಭದ್ರತೆಯಲ್ಲಿ ಅಳತೆ ಮಾಡಲು ಆಗಮಿಸಿದ ಸರ್ವೇಯರ್‌ಗಳನ್ನು ಅಡ್ಡಗಟ್ಟಿ ಕೊಡಿಯಾಲ ಗ್ರಾಮದ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದರು.


ತಾಲೂಕಿನ ಕೊಡಿಯಾಲ ಗ್ರಾಮದ ಸಂತೆಮೈದಾನದ ವಿವಾದಿತ ಸ್ಥಳದಲ್ಲಿನ 24 ಗುಂಟೆ ಜಮೀನನ್ನು ಕೊಡಿಯಾಲ ಗ್ರಾಪಂ ಪಿಡಿಒ ಹಾಗೂ ಸಿಬ್ಬಂದಿ ಗೈರು ನಡುವೆ ಅಳತೆಯೊಂದಿಗೆ ಹದ್ದುಬಸ್ತು ನಡೆಸಿ ಕಲ್ಲು ನೆಡಲು ಭೂಮಿಯ ಮಾಲೀಕ ಶಿವಣ್ಣ ಎಂಬುವರೊಂದಿಗೆ ಆಗಮಿಸಿದ್ದ ತಾಲೂಕು ಸರ್ವೇ ಇಲಾಖೆಯ ಸರ್ವೇಯರ್ ಬಸವರಾಜು ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ಉಂಟಾಗಿ ಇದೀಗ ಈ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ.


ತಾಲೂಕಿನ ಕೊಡಿಯಾಲ ಗ್ರಾಮದ ಸಂತೇಮೈದಾನ ವಿವಾದಿತ ಸ್ಥಳದಲ್ಲಿ ಹುಣಸನಹಳ್ಳಿ ಶಿವಣ್ಣ ಎಂಬುವರು 24 ಗುಂಟೆ ಜಮೀನು ಹೊಂದಿದ್ದು, ಈ ಜಮೀನಿನ ಆಜುಬಾಜಿನಲ್ಲಿ ಪರಿಶಿಷ್ಟ ಪಂಗಡದ ಉಚ್ಚರಸಮ್ಮ ಸೇವಾ ಟ್ರಸ್ಟ್, ಪದ್ಮಶಾಲಿ ನೇಕಾರರ ಸಹಕಾರ ಸಂಘ ಇದ್ದು, ಹಿಂಭಾಗದಲ್ಲಿ ನಿಂಗೇಗೌಡ ಹಾಗೂ ಸಣ್ಣೇಗೌಡ ಎಂಬುವರು ಜಮೀನು ಹೊಂದಿದ್ದಾರೆ. ಆದರೆ ಇವರಿಗೆ ಕಾನೂನಿನ ನಿಯಮದಂತೆ ಅಳತೆ ಮಾಡುವಾಗ ನೋಟಿಸ್ ನೀಡದೆ ಹಾಗೂ ಕೊಡಿಯಾಲ ಗ್ರಾಮ ಪಂಚಾಯಿತಿ ಮಾಡುವ ಅಳತೆ ಕಾರ್ಯದ ಬದಲಿಗೆ ತಾಲೂಕು ಕಚೇರಿಯಲ್ಲಿನ ಸರ್ವೇ ಅಧಿಕಾರಿಗಳನ್ನು ನಿಯಮ ಬಾಹಿರವಾಗಿ ಕರೆಸಿ ಅಳತೆ ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿ ಕೊಡಿಯಾಲ ಗ್ರಾಮ ಪಂಚಾಯಿತಿ ಅಧ್ಯಕ್ಷರ ನೇತೃತ್ವದಲ್ಲಿ ಸದಸ್ಯರು ಹಾಗೂ ಗ್ರಾಮಸ್ಥರು ತಡೆದುಪ್ರತಿಭಟಿಸಿದ್ದು, ಅರಕೆರೆ ಠಾಣೆ ಪಿಎಸ್‌ಐ ರಸೂಲ್ ಸಾಬ್ ನೇತೃತ್ವದಲ್ಲಿ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.


ಬಳಿಕ ಕೊಡಿಯಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್, ತಾಲೂಕು ಪಂಚಾಯಿತಿ ಸದಸ್ಯ ಕಾಮರಾಜು, ಕೊಡಿಯಾಲ ಗ್ರಾಪಂ ಉಪಾಧ್ಯಕ್ಷ ರಾಮಕೃಷ್ಣ, ಸದಸ್ಯ ಹೇಮಂತ್ ಪದ್ಮಶಾಲಿ ನೇಕಾರರ ಸಂಘದ ಅಧ್ಯಕ್ಷ ಪವನ್ ಕುಮಾರ್, ಪರಿಶಿಷ್ಟ ಜನಾಂಗ ಹುಚ್ಚ ಅರಸಮ್ಮ ಸ್ವಾಮಿ ಸೇರಿದಂತೆ ಗ್ರಾಮ ಹಾಗೂ ಸುತ್ತಮುತ್ತಲ ನೂರಾರು ಗ್ರಾಮಸ್ಥರು ಜಮಾಯಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net