ಕೋಡಿಮಲ್ಲೇಶ್ವರ ಹಾಗೂ ವೀರಭದ್ರ ಸ್ವಾಮಿಯವರ ವೈಭವ ತೆಪ್ಪೋತ್ಸವ

Published on

ಹಳೇಬೀಡು: ಮತಿಘಟ್ಟ ಗ್ರಾಮದಲ್ಲಿ ಸೋಮವಾರ ಕೋಡಿಮಲ್ಲೇಶ್ವರ ಹಾಗೂ ವೀರಭದ್ರ ಸ್ವಾಮಿಯವರ ತೆಪ್ಪೋತ್ಸವ ಹಾಗೂ ಕೆಂಡೋತ್ಸವ ಜನಸ್ತೋಮದೊಂದಿಗೆ ವೈಭವದಿಂದ ಜರುಗಿತು.

13 ವರ್ಷದ ಬಳಿಕ ಗ್ರಾಮದ ಕೆರೆ ಭರ್ತಿಯಾಗಿದ್ದ ಸಂತಸದಲ್ಲಿ ಸೇರಿದ್ದ ಅಪಾರ ಸಂಖ್ಯೆಯ ಭಕ್ತರು ತೆಪ್ಪೋತ್ಸವಕ್ಕೆ ವಿಶೇಷ ಕಳೆ ಮೂಡಿಸಿದರು. ಕೆರೆ ಏರಿಯ ಮೇಲೆ ವಾಹನಗಳ ಸಂಚಾರ ಹೆಚ್ಚಾಗಿ ನಿಲುಗಡೆ ಸಮಸ್ಯೆ ಆಗಿದ್ದರಿಂದ ಜಾತ್ರೆಗೆ ಆಗಮಿಸಿದ್ದ ಸಚಿವರು ಹಾಗು ಬೆಂಗಾವಲು ಪಡೆಯ ವಾಹನ ತೆರಳುವುದಕ್ಕೂ ಕಷ್ಟವಾಯಿತು. ಕೋಡಿಮಲ್ಲೇಶ್ವರ ದೇವಾಲಯದಲ್ಲಿ ವಾದ್ಯ ವೈಭವದೊಂದಿಗೆ ಪೂಜೆ ನಡೆದ ನಂತರ ಉತ್ಸವ ಮೂರ್ತಿಗಳನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಭಕ್ತರ ಜಯಘೋಷದೊಂದಿಗೆ ತೆಪ್ಪದಲ್ಲಿ ಉತ್ಸವ ಮೂರ್ತಿಗಳನ್ನು ಸ್ಥಾಪಿಸಲಾಇತು.ಕೋಡಿಮಲ್ಲೇಶ್ವರ ದೇವಾಲಯ ಬಳಿಯ ಕೆರೆ ಕೋಡಿಯಿಂದ ಮತಿಘಟ್ಟ ತಿರುವಿನ ಕೋಡಿಕೊಪ್ಪಲು ಬಳಿಯ ಮತ್ತೊಂದು ಬದಿಗೆ 2 ಕಿ.ಮೀ. ದೂರ ಸಾಗಿದ್ದನ್ನು ಭಕ್ತರು ಕಣ್ತುಂಬಿಕೊಂಡರು. ಬಳಿಕ ರಥದಲ್ಲಿ ದೇವರನ್ನು ಆರೋಹಣ ಮಾಡಿ ಊರಿನ ಪ್ರಮುಖ ಬೀದಿಗಳಲ್ಲಿ ತೇರನ್ನು ಎಳೆದು ಸಂಭ್ರಮಿಸಿದರು.

ಮುಂಜಾನೆ ನಡೆದ ಕೆಂಡೋತ್ಸವದಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು. ನಸುಕಿನಲ್ಲಿಯೇ ದೇವಾಲಯದಲ್ಲಿ ಪೂಜೆ ಆರಂಭವಾಗಿ ಅಭಿಷೇಕ, ಅಲಂಕಾರ ಮಂಗಳಾರತಿ ಸೇವೆಗಳು ನಡೆದವು. ಗ್ರಾಮದಲ್ಲಿ ಬಹಳ ವರ್ಷದ ನಂತರ ತೆಪ್ಪೋತ್ಸವ ನಡೆದಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಊರಿನ ಹೆಣ್ಣು ಮಕ್ಕಳು ತವರಿಗೆ ಬಂದಿದ್ದರು.

ಮತಿಘಟ್ಟ ಕೆರೆ ಅಭಿವೃದ್ದಿಗೆ ಹಣ ಮಂಜೂರು ಭರವಸೆ:

ತೆಪ್ಪೋತ್ಸವಕ್ಕೂ ಮೊದಲು ಕೋಡಿಮಲ್ಲೇಶ್ವರ ದೇವಾಲಯ ಬಳಿ ಸಭಾ ಕಾರ್ಯಕ್ರಮ ನಡೆಯಿತು. ಜಿಲ್ಲಾ ಉಸ್ತುವಾರಿ ಕೆ.ಗೋಪಾಲಯ್ಯ ಮಾತನಾಡಿ ಮತಿಘಟ್ಟ ಕೆರೆ ಏರಿಯ ರಸ್ತೆ ಅಭಿವೃದ್ದಿ ಹಾಗೂ ಕೋಡಿ ಮಲ್ಲೇಶ್ವರ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದಿಂದ ಹಣ ಮಂಜೂರು ಮಾಡಿಸಲು ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸುತ್ತೇನೆ ಎಂದರು.ಕರೊನಾ ಹಾಗೂ ಅತಿವೃಷ್ಟಿಯಿಂದ ಜನ ತತ್ತರಿಸಿದ್ದಾರೆ. ಜನರಿಗೆ ಮನಸ್ಸಿಗೆ ಹೀತ ನೀಡುವ ವಾತವರಣ ಅಗತ್ಯವಿದೆ. ಹೀಗಾಗಿ ಜಾತ್ರೆ ಉತ್ಸವಗಳಿಗೆ ಭಾರಿ ಜನ ಸೇರುತ್ತಿದ್ದಾರೆ. ನಾಡಿನ ಬಹುತೇಕ ಎಲ್ಲ ಕೆರೆಗಳು ಭರ್ತಿಯಾಗಿವೆ. ಅತಿವೃಷ್ಟಿಯಾದರೂ ಸಮೃದ್ದ ನೀರು ಸಂಗ್ರಹಣೆಯಾಗಿರುವುದು ಜನತೆಗೆ ಸಂತಸ ತಂದಿದೆ. ಅಂತರ್ಜಲ ವೃದ್ದಿಸಿರುವುದರಿಂದ ಕುಡಿಯುವ ನೀರಿನ ಬವಣೆ ತಪ್ಪಿದೆ ಎಂದು ಸಚಿವರು ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲಚಂದ್ರ ಅಧ್ಯಕ್ಷತೆ ವಹಿಸಿದ್ದರು. ಎಂ.ಎಸ್.ನಾಗೆಂದ್ರ ಸೇವಾ ಪ್ರತಿಷ್ಟಾನದ ಅಧ್ಯಕ್ಷ ಸಿದ್ದೇಶ್ ನಾಗೆಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಕೆ.ಸುರೇಶ್, ಮುಖಂಡರಾದ ಗಂಗೂರು ಶಿವಕುಮಾರ, ಕೊರಟಿಕೆರೆ ಪ್ರಕಾಶ್, ಅಮಿತ್ ಶೆಟ್ಟಿ, ತಹಸೀಲ್ದಾರ್ ರಮೇಶ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸುನೀತಾ,ಪಿಡಿಒ ಈರೇಗೌಡ , ಗ್ರಾಪಂ ಸದಸ್ಯರಾದ ನಂದಿನಿ ಕುಮಾರ್, ಮಮತ ಚಂದ್ರಶೇಖರ್, ಮೀನಾಕ್ಷಮ್ಮ, ಗ್ರಾಮದ ಮುಖಂಡರಾದ ಮತಿಘಟ್ಟ ನಾಗರಾಜು, ಜಯಪ್ರಕಾಶ್ ಮತ್ತಿತರರಿದ್ದರು.ಸಬೆ ಮುಗಿದ ನಂತರ ಶಾಸಕ ಕೆ.ಎಸ್.ಲಿಂಗೇಶ್, ಕಾಂಗ್ರೆಸ್ ಮುಖಂಡ ಗ್ರಾನೈಟ್ ರಾಜಶೇಖರ್ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net