

ಬಾಗಲಕೋಟೆ: ಜಿಲ್ಲಾದ್ಯಂತ ವಿವಿಧ ಸಂಘ, ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ವಿಜಯವಾಣಿ ಮಾಧ್ಯಮ ಸಹಯೋಗದಲ್ಲಿ ಶುಕ್ರವಾರ ನಡೆದ ವಿಶ್ವ ಯೋಗ ದಿನಾಚರಣೆಗೆ ಅಭೂತ ಪೂರ್ವ ಬೆಂಬಲ ವ್ಯಕ್ತವಾಯಿತು. ಕೋಟೆನಾಡು ಯೋಗ ಮಯವಾಗಿ ಮಾರ್ಪಟ್ಟಿತ್ತು.
೧೦ ನೇ ವರ್ಷದ ಯೋಗ ದಿನಾಚರಣೆಯಲ್ಲಿ ಜಿಲ್ಲಾದ್ಯಂತ ಮಕ್ಕಳು, ಮಹಿಳೆಯರು, ವೃದ್ಧರು, ವಿದ್ಯಾರ್ಥಿಗಳು, ನೌಕರರು, ವ್ಯಾಪಾರಸ್ಥರು ಸೇರಿದಂತೆ ಸಹಸ್ರಾರು ಜನರು ಪಾಲ್ಗೊಂಡು ವಿಶೇಷ ಮೆರಗು ತಂದರು. ಯೋಗ ಬಗ್ಗೆ ಜನರಲ್ಲಿ ಹೆಚ್ಚಿರುವ ಆಸಕ್ತಿಯನ್ನು ಬಿಂಬಿಸಿತು. ಯೋಗ ದಿನಾಚರಣೆಯಲ್ಲಿ ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿದ್ದರು.
ಭಾರತದ ಯೋಗವು ಇಂದು ವಿಶ್ವದಾದ್ಯಂತ ಹೆಚ್ಚೆಚ್ಚು ಪ್ರಚೂರಗೊಂಡಿದ್ದು, ಜಿಲ್ಲೆಯಲ್ಲಿಯೂ ವಿಜಯವಾಣಿ ಮಾಧ್ಯಮ ಸಹಯೋಗದಲ್ಲಿ ವಿವಿಧೆಡೆ ಯೋಗ ಪ್ರದರ್ಶನಗಳು ನಡೆದವು. ಅನೇಕ ಯೋಗ ಪಟುಗಳು, ಗುರುಗಳು ಯೋಗ ಮಾಡಿಸುವುದರ ಜೊತೆಗೆ ಯೋಗದ ಮಹತ್ವ ಮತ್ತು ಅದರಿಂದ ದೊರೆಯುವ ಪ್ರಯೋಜಗಳ ಕುರಿತು ಮಾರ್ಗದರ್ಶನ ನೀಡಿದರು. ಉತ್ತಮ ಸಮಾಜ, ಸುದೃಢ ಆರೋಗ್ಯಕ್ಕೆ ಯೋಗದಿಂದ ಮಾತ್ರ ಸಾಧ್ಯ ಎನ್ನುವ ಅಭಿಪ್ರಾಯ ಎಲ್ಲೆಡೆ ವ್ಯಕ್ತವಾಯಿತು.
ನಗರದ ಪ್ರತಿಷ್ಠಿತ ಬಿವಿವಿ ಸಂಘದ ವಿವಿಧ ಅಂಗ ಸಂಸ್ಥೆಗಳು ಕಾಲೇಜು ಮೈದಾನ, ವಿದ್ಯಾಗಿರಿಯ ಇಂಜನಿಯರಿಂಗ್ ಕಾಲೇಜ್ ಮೈದಾನ ಹಾಗೂ ನವನಗರದ ಮೆಡಿಕಲ್ ಕಾಲೇಜ್ ಮೈದಾನದಲ್ಲಿ ಬಿವಿವಿ ಸಂಘದ ೩ ಸಾವಿರ ಸಿಬ್ಬಂದಿ, ೧೦ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಾರ್ವಜನಿಕರು ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಯೋಗ ಮಾಡಿದರು.
ವೃಕ್ಷಾಸನ, ಪಾದ ಹಸ್ತಾಸನ, ಅರ್ಧ ಚಕ್ರಾಸನ, ದಂಡಾಸನ, ಭದ್ರಸಾನ, ವಜ್ರಾಸನ,ಉತ್ಥಾಸನಮಂಡೊಕಾಸನ, ವಕ್ರಾಸನ, ಭುಜಂಗಾಸನ, ಶಲಭಾಸನ, ಸೇತುಬಂಧಾಸನ, ಉತ್ಥಾನಪಾದಾಸನ, ಶವಾಸನ, ಓಂಕಾರ, ಕಪಾಲಬಾತಿ, ಶವಾಸನ, ಶಲಬಾಸನ, ಪ್ರಾಣಾಯಾಮ, ಪವನ ಮುಕ್ತಾಸನ ಪ್ರಾಣಯಾಮ ಸೇರಿದಂತೆೆ ವಿವಿಧ ಆಸನಗಳಲ್ಲಿ ಯೋಗ ಪ್ರದರ್ಶಿಸಲಾಯಿತು. ಎಲ್ಲ ಆಸನಗಳನ್ನು ೪೫ ನಿಮಿಷಗಳ ಕಾಲ ಸಾಮೂಹಿಕವಾಗಿ ಪ್ರಸ್ತುತ ಪಡಿಸಲಾಯಿತು.
`ಸ್ವಯಂ ಸಮಾಜಕ್ಕಾಗಿ ಯೋಗ' ಘೋಷವಾಕ್ಯ ಅಡಿಯಲ್ಲಿ ಬೆಳಗ್ಗೆ ೬.೩೦ ಗಂಟೆ ೭.೩೦ ಗಂಟೆ ವರೆಗೆ ಬಿವಿವಿ ಸಂಘದ ಆಯುರ್ವೇದ ಮಹಾವಿದ್ಯಾಲಯದ ಯೋಗ ವಿಭಾಗದ ತಜ್ಞರಿಂದ ಹಳೆ ಆವರಣದ ಕ್ರೀಡಾಂಗಣದಲ್ಲಿ ಯೋಗ ಕಾರ್ಯಕ್ರಮವು ಜರುಗಿತು. ಬಸವೇಶ್ವರ ಕಲಾ, ವಿಜ್ಞಾನ, ವಾಣಿಜ್ಯ, ಕಾನೂನು, ಶಿಕ್ಷಣ, ಪಾಲಿಟೆಕ್ನಿಕ್, ದಂತ ಮಹಾವಿದ್ಯಾಲಯ, ಔಷಧ ವಿಜ್ಞಾನ ಇತ್ಯಾದಿ ಶಾಲಾ ಕಾಲೇಜ್‌ಗಳ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಶಾಸಕ ವೀರಣ್ಣ ಚರಂತಿಮಠ, ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಕಾಲೇಜುಗಳ ಆಡಳಿತ ಮಂಡಳಿಗಳ ಕಾರ್ಯಾಧ್ಯಕ್ಷ ಗುರುಬಸವ ಸೂಳಿಬಾವಿ, ಆಯುಷ್ಯ ವೈದ್ಯಕೀಯ ಕಾಲೇಜುಗಳ ಮತ್ತು ಔಷದ ವಿಜ್ಞಾನ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಸಾಸನೂರ, ಹೈಸ್ಕೂಲ್ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಮಹಾಂತೇಶ ಶೆಟ್ಟರ, ಬಿಟಿಡಿಎ ಮಾಜಿ ಅಧ್ಯಕ್ಷ ಜಿ.ಎನ್.ಪಾಟೀಲ, ಸಿದ್ದರಾಮ ಮನಹಳ್ಳಿ, ಸಂಘದ ಆಡಳಿತಾಧಿಕಾರಿ ಡಾ.ವಿಜಯಕುಮಾರ ಕಟಗಿಹಳ್ಳಿಮಠ ಭಾಗವಹಿಸಿದ್ದರು.
ವಿದ್ಯಾಗಿರಿಯ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ನೇತೃತ್ವದಲ್ಲಿ ವಿವೇಕಾನಂದ ಯೋಗ ವಿಜ್ಞಾನ ಕೇಂದ್ರದ ಸಂಗಣ್ಣ ಕುಪ್ರಸ್ತ ತಂಡವು ಈ ಯೋಗ ಪ್ರದರ್ಶನದ ಕಾರ್ಯಕ್ರಮ ನಡೆಸಿಕೊಟ್ಟರು.
ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಯೋಗದಿನಾಚರಣೆಯನ್ನು ಆಚರಿಸಲಾಯಿತು. ಪಿ.ಎಂ.ಎನ್.ಎಂ ದಂತ ಮಹಾವಿದ್ಯಾಲಯ, ಸಜ್ಜಲಶ್ರೀ ನರ್ಸಿಂಗ್ ಕಾಲೇಜ್, ಶಾರದಾಂಬೆ ನರ್ಸಿಂಗ್ ಕಾಲೇಜ್ ಮತ್ತು ಫಿಜಿಯೋಥೆರಪಿ ಕಾಲೇಜುಗಳ ಸಹಯೋಗದೊಂದಿಗೆ ನಡೆದ ಯೋಗ ದಿನಾಚರಣೆಯಲ್ಲಿ ಸಾವಿರಾರು ಜನ ಭಾಗವಹಿಸಿದ್ದರು. ಬಿವಿವಿ ಸಂಘದ ವೈದ್ಯಕೀಯ ಮಹಾ ವಿದ್ಯಾಲಯಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ (ಬೇವೂರ) ನೇತೃತ್ವ ವಹಿಸಿದ್ದರು.ಹಾಸ್ಟೆಲ್ ಕಮಿಟಿ ಕಾರ್ಯಾಧ್ಯಕ್ಷ ಕುಮಾರಸ್ವಾಮಿ ಹಿರೇಮಠ, ಯೋಗ ಪರಿಣಿತ ವೈದ್ಯರಾದ ಡಾ.ಅಶೋಕ ಬಡಕಲಿ, ಡಾ.ಎಸ್.ಎಸ್. ದೊಡ್ಡಮನಿ ಮತ್ತು ಡಾ.ಹಿರನ್ಮಯಿ ಬಿ. ಸೇರಿದಂತೆ ಇತರರು ಇದ್ದರು.