ಕೋಟೆನಾಡಿನಲ್ಲಿ ಹೆಚ್ಚಿದೆ ಅಡಕೆ ಬೆಳೆ ವಿಸ್ತೀರ್ಣ

CTD 19 ADAKE---01
Published on


ಚಿತ್ರದುರ್ಗ: ಜಿಲ್ಲೆಯಲ್ಲಿ ಕಳೆದ 2 ವರ್ಷಗಳಿಂದ ಇದ್ದ 35 ಸಾವಿರ ಹೆಕ್ಟೇರ್ ಅಡಕೆ ಬೆಳೆ 55 ಸಾವಿರ ಹೆಕ್ಟೇರ್‌ಗೆ ವಿಸ್ತರಣೆಯಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಜಿ.ಸವಿತಾ ಹೇಳಿದರು.
ಶಿವಮೊಗ್ಗ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ನವಿಲೆ ಅಡಕೆ ಸಂಶೋಧನಾ ಕೇಂದ್ರ, ಚಿತ್ರದುರ್ಗ ಕೃಷಿ ತಂತ್ರಜ್ಞರ ಸಂಸ್ಥೆ ಹಾಗೂ ರೆಡ್ಡಿ ಸಮಾಜದಿಂದ ನಗರದ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಅಡಕೆ ಬೇಸಾಯ ಕ್ರಮಗಳ ಕುರಿತ ಕಾರ‌್ಯಾಗಾರದಲ್ಲಿ ಮಾತನಾಡಿದ ಅವರು, ಒಂದೆಡೆ ವಿಸ್ತೀರ್ಣ ಹೆಚ್ಚಾಗುತ್ತಿದ್ದರೆ ಮತ್ತೊಂದೆಡೆ ವಾಣಿಜ್ಯಬೆಳೆ ಅಡಕೆ ಮಾರುಕಟ್ಟೆ ಸಮಸ್ಯೆಯನ್ನೂ ಎದುರಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಅಡಕೆಗೆ ಯಾವೆಲ್ಲ ಪೋಷಕಾಂಶಗಳನ್ನು ಕೊಡಬೇಕು, ರೋಗಗಳ ನಿವಾರಣೆಗೆ ಯಾವ ಔಷಧಗಳನ್ನು ಸಿಂಪಡಿಸಬೇಕು ಮತ್ತಿತರ ಮಾಹಿತಿಗಳು ಇಂಥ ಕಾರ‌್ಯಾಗಾರಗಳ ಮೂಲಕ ಬೆಳೆಗಾರರಿಗೆ ತಿಳಿಸಬೇಕಿದೆ. ಜಿಲ್ಲೆಯಲ್ಲಿ ಹಣ್ಣು, ಹೂವು, ತರಕಾರಿ, ದಾಳಿಂಬೆ, ಪಪ್ಪಾಯಿ, ಈರುಳ್ಳಿ, ಗೋಡಂಬಿ ಹಾಗೂ ಡ್ರಾೃಗನ್ ಹಣ್ಣು ಮೊದಲಾದ ಬೆಳೆಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದು ಕೂಡ ಮುಖ್ಯವಾಗಿದೆ ಎಂದು ತಿಳಿಸಿದರು.
ಕಾರ‌್ಯಾಗಾರ ಉದ್ಘಾಟಿಸಿದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಬಿ.ಮಂಜುನಾಥ್ ಮಾತನಾಡಿ, ಬದಲಾವಣೆಗಳಿಗೆ ಅನುಗುಣವಾಗಿ ಕೃಷಿಯಲ್ಲಿ ತೊಡಗಿಸಿಕೊಳ್ಳುವಂತೆ ರೈತರಿಗೆ ಸಲಹೆ ನೀಡಿದರು. ಹಿಂದಿನ ಹಾಗೂ ಈಗಿನ ಕೃಷಿ ನಡುವೆ ಸಾಕಷ್ಟು ವ್ಯತ್ಯಾಸಗಳನ್ನು ನಾವಿಂದು ಕಾಣಬಹುದಾಗಿದೆ ಎಂದು ಹೇಳಿದರು.
ರಾಸಾಯನಿಕ ಗೊಬ್ಬರ, ಲಘು ಪೋಷಕಾಂಶ ಹಾಗೂ ಹೈಬ್ರೀಡ್ ತಳಿ ಬಳಸದೆ ರೈತರು ಪೌಷ್ಟಿಕಾಂಶಗಳಿಂದ ಕೂಡಿದ ಬೆಳೆಗಳನ್ನು ಬೆಳೆಯುತ್ತಿದ್ದರು. ಸಾಂಪ್ರದಾಯಿಕ, ನೈಸರ್ಗಿಕ, ಸಾವಯವ ಕೃಷಿ ಪದ್ಧತಿಗಳೊಂದಿಗೆ ಈಗ ಪಾಲಿಹೌಸ್, ಗ್ರೀನ್‌ಹೌಸ್ ಕೃಷಿ ಕೂಡ ಚಾಲ್ತಿಯಲ್ಲಿದೆ ಎಂದು ಹೇಳಿದರು.
ಗೊಬ್ಬರ, ಹೈಬ್ರೀಡ್ ತಳಿ ಇತ್ಯಾದಿಗಳಿಂದ ಹೆಚ್ಚುವರಿ ಇಳುವರಿ ದೊರೆತರೂ ಬೆಳೆಗಳನ್ನು ರೋಗಗಳಿಂದ ರಕ್ಷಿಸಿಕೊಳ್ಳುವುದು ರೈತರಿಗೆ ಸವಾಲಾಗುತ್ತಿದೆ. ಮಳೆ ಕೊರತೆಯಿಂದ ಮುಂಗಾರು ಹಂಗಾಮು ಬೆಳೆ ಕೈ ಸೇರುವುದು ಕಷ್ಟವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಬಬ್ಬೂರು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ಸುರೇಶ ಏಕಬೋಟೆ ಅಡಕೆ ಅಂತರ್ ಬೆಳೆಗಳ ಕುರಿತು ಮಾಹಿತಿ ನೀಡಿದರು. ಅಧ್ಯಕ್ಷತೆ ವಹಿಸಿದ ಕೃಷಿ ತಂತ್ರಜ್ಞರ ಸಂಸ್ಥೆ ಅಧ್ಯಕ್ಷ ಜಿ.ಸಿ.ರಂಗಸ್ವಾಮಿ, ಬಬ್ಬೂರು ಕೆವಿಕೆ ವಿಷಯ ತಜ್ಞ ಡಾ.ಓಂಕಾರಪ್ಪ, ನವಿಲೆ ಅಡಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ನಾಗರಾಜಪ್ಪ ಅಡಿವೆಪ್ಪರ್, ಹಿರಿಯ ಸಂಶೋಧನಾ ಸಹಾಯಕರಾದ ಎಚ್.ಸಿ.ಡಾ.ಸ್ವಾತಿ, ಡಾ.ಸುದೀಪ್, ಎಸ್.ಜೆ.ಕಿರಣ್‌ಕುಮಾರ್ ಮಾತನಾಡಿದರು.
ರೆಡ್ಡಿ ಸಮಾಜದ ಅಧ್ಯಕ್ಷ ಸಿ.ರಾಘವ ರೆಡ್ಡಿ, ಕೃಷಿ ತಂತ್ರಜ್ಞರ ಸಂಸ್ಥೆ ಉಪಾಧ್ಯಕ್ಷ ಕೆ.ಶ್ರೀನಿವಾಸ್‌ರೆಡ್ಡಿ,ಕಾರ‌್ಯದರ್ಶಿ ಜಿ.ಟಿ.ವೀರಭದ್ರರೆಡ್ಡಿ,ಡಾ.ಬಿ.ಸತ್ಯನಾರಾಯಣರೆಡ್ಡಿ ಇದ್ದರು.
ಚಿತ್ರದುರ್ಗ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಸೋಮವಾರ ಏರ್ಪಡಿಸಿದ್ದ ಅಡಕೆ ಬೇಸಾಯ ಕ್ರಮಗಳ ಕಾರ‌್ಯಾಗಾರವನ್ನು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಬಿ.ಮಂಜುನಾಥ್ ಉದ್ಘಾಟಿಸಿದರು. ತೋಟಗಾರಿಕೆ ಇಲಾಖೆ ಡಿಡಿ ಜಿ.ಸವಿತಾ,ಡಾ.ಸುರೇಶ ಏಕಬೋಟೆ, ಜಿ.ಸಿ. ರಂಗಸ್ವಾಮಿ,ಸಿ.ರಾಘವರೆಡ್ಡಿ, ಕೆ.ಶ್ರೀನಿವಾಸ್‌ರೆಡ್ಡಿ, ಜಿ.ಟಿ. ವೀರಭದ್ರರೆಡ್ಡಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net