

ಚಿತ್ರದುರ್ಗ: ಮತಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯ ಪೂರ್ಣಗೊಂಡಿದ್ದು, ಜಿಲ್ಲೆಯಲ್ಲಿ 14,29,555 ಮತದಾರರಿದ್ದು, ಈ ಪೈಕಿ 7,09,048 ಪುರುಷ, 7,20,420 ಮಹಿಳಾ ಹಾಗೂ 87 ಇತರೆ ಮತದಾರರು ಇದ್ದಾರೆ.
ಸೋಮವಾರ ವಿಧಾನಸಭಾ ಕ್ಷೇತ್ರವಾರು ಮತದಾರರ ಅಂತಿಮ ಪಟ್ಟಿಯನ್ನು ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಪ್ರಕಟಿಸಿದರು.
ಪ್ರತಿ ವರ್ಷ ಅಕ್ಟೋಬರ್‌ನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ವೇಳಾಪಟ್ಟಿ ಪ್ರಕಟಿಸಲಾಗುತ್ತದೆ. ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿದಂತೆ 1,661 ಮತಗಟ್ಟೆಗಳಿವೆ. ಕರಡು ಮತ ಪಟ್ಟಿ ಅನ್ವಯ ಈ ಮೊದಲು ಜಿಲ್ಲೆಯಲ್ಲಿ 14,35,994 ಮತದಾರರಿದ್ದರು. ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಬಳಿಕ 14,29,555ಕ್ಕೆ ಇಳಿಕೆಯಾಗಿದೆ.
ಪ್ರಸಕ್ತ ಸಾಲಿನಲ್ಲಿ 13,758 ಹೆಸರುಗಳನ್ನು ಹೊಸದಾಗಿ ಸೇರಿಸಲಾಗಿದೆ. ದಾಖಲೆಗಳನ್ನು ಪರಿಶೀಲಿಸಿ ಮರಣ, ಡಬಲ್ ಎಂಟ್ರಿ ಸೇರಿ 20,197 ಮತದಾರರ ಹೆಸರನ್ನು ನಿಯಮಾನುಸಾರ ಪಟ್ಟಿಯಿಂದ ಕೈ ಬಿಡಲಾಗಿದೆ. 11,727 ಮತದಾರರ ಹೆಸರು, ಭಾವಚಿತ್ರ ಬದಲಾವಣೆ, ತಂದೆ, ಗಂಡನ ಹೆಸರು ಹಾಗೂ ವಿಳಾಸ ತಿದ್ದುಪಡಿ ಮಾಡಲಾಗಿದೆ ಎಂದು ತಿಳಿಸಿದರು.
ವಿಧಾನಸಭಾ ಕ್ಷೇತ್ರವಾರು ಮತದಾರರ ಸಂಖ್ಯೆ
ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಪುರುಷ-1,25,800, ಮಹಿಳೆ-1,25,575, ಇತರೆ-13 ಸೇರಿ 2,51,387 ಮತದಾರರಿದ್ದಾರೆ. ಚಳ್ಳಕೆರೆ: ಪುರುಷ-1,10,954, ಮಹಿಳೆ-1,13,139, ಇತರೆ-8 ಸೇರಿ 2,24,101. ಚಿತ್ರದುರ್ಗ: ಪುರುಷ 1,31,022, ಮಹಿಳೆ-1,36,410, ಇತರೆ 39 ಸೇರಿ 2,67,471. ಹಿರಿಯೂರು: ಪುರುಷ -1,22,266, ಮಹಿಳೆ-1,25,793, ಇತರೆ-16 ಸೇರಿ 2,48,075. ಹೊಸದುರ್ಗ: 1,00,596, ಮಹಿಳೆ-1,01,185, ಇತರೆ 1 ಸೇರಿ 2,01,782 ಹಾಗೂ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಪುರುಷ-1,18,410, ಮಹಿಳೆ-1,18,319, ಇತರೆ 10 ಸಹಿತ 2,36,739 ಮತದಾರರಿದ್ದಾರೆ.
ಕರಡು ಮತದಾರರ ಪಟ್ಟಿಯಲ್ಲಿ 18 ರಿಂದ 19 ವರ್ಷದ 22,667ಯುವ ಮತದಾರರಿದ್ದು, ಅಂತಿಮ ಪಟ್ಟಿಯನ್ವಯ 29,240ಕ್ಕೆ ಏರಿಕೆಯಾಗಿದೆ. 369 ಸೇವಾ ಮತದಾರರಿದ್ದಾರೆ.
ಚುನಾವಣಾ ಆಯೋಗ ಮತಪಟ್ಟಿಗೆ ಹೆಸರು ಸೇರ್ಪಡೆಗೆ ಅರ್ಹತಾ ದಿನಾಂಕಗಳನ್ನು ನೀಡಿದೆ. ಜ.1, ಏಪ್ರಿಲ್ 1, ಜುಲೈ 1, ಅಕ್ಟೋಬರ್ 1ಕ್ಕೆ 18ವರ್ಷ ಪೂರ್ಣಗೊಳ್ಳುವವರು ಹಾಗೂ ಅರ್ಹ ಮತದಾರರು, ಹೆಸರು ಸೇರಿಲ್ಲದವರು, ಹೆಸರು ಕೈಬಿಟ್ಟು ಹೋಗಿರುವವರು, ತಿದ್ದುಪಡಿ ಅಥವಾ ಬೇರೆ ಮತಗಟ್ಟೆಗೆ ವರ್ಗಾಯಿಸಲು ನಿಗದಿತ ನಮೂನೆ ಅರ್ಜಿಗಳನ್ನು ಭರ್ತಿ ಮಾಡಿ ತಮ್ಮ ವ್ಯಾಪ್ತಿಯ ಮತದಾನ ಕೇಂದ್ರ, ತಾಲೂಕು ಕಚೇರಿ ಅಥವಾ ಉಪವಿಭಾಗಾಧಿಕಾರಿ ಕಚೇರಿಗೆ ಸಲ್ಲಿಸಬಹುದು. ಡಿಡಿಡಿ.್ಚಛಿಟಚ್ಟ್ಞಠಿ.್ಞಜ್ಚಿ.ಜ್ಞಿ,ಠಿಠಿ://್ಚಜಿಠ್ಟಿಛ್ಠ್ಟಜ.್ಞಜ್ಚಿ.ಜ್ಞಿ ನಲ್ಲೂ ಸಹ ಪರಿಶೀಲಿಸಬಹುದು. ಪಟ್ಟಿಯಲ್ಲಿ ಹೆಸರು ಇಲ್ಲದಿದ್ದಲ್ಲಿ ಪೂರಕ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಗಳನ್ನು ಆನ್‌ಲೈನ್ ಮೂಲಕವೂ ಸಲ್ಲಿಸಬಹುದೆಂದರು.
ರಾಜಕೀಯ ಪಕ್ಷಗಳು ಪ್ರತಿ ಮತಗಟ್ಟೆ ಮಟ್ಟದ ಏಜೆಂಟರನ್ನು ನೇಮಿಸಿ ಬಿಎಲ್‌ಗಳಿಗೆ ನೆರವಾಗಬೇಕೆಂದು ಕೋರಿದರು.
ಎಸಿ ಎಂ. ಕಾರ್ತಿಕ್, ಜೆಡಿಎಸ್ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಗೋಪಾಲಸ್ವಾಮಿ ನಾಯಕ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಎನ್. ಮೈಲಾರಪ್ಪ, ಸಿಪಿಐ(ಎಂ)ಡಿಒಸಿ ಸಿ.ಕೆ. ಗೌಸ್‌ಪೀರ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಣ್, ಚುನಾವಣಾ ಶಾಖೆ ಮಲ್ಲಿಕಾರ್ಜುನ್ ಮತ್ತಿತರರು ಇದ್ದರು.
ಅಂಚೆ ಮೂಲಕ ಗುರುತಿನ ಚೀಟಿ
ಮತದಾರರ ಭಾವಚಿತ್ರವಿರುವ ಗುರತಿನ ಚೀಟಿ ಅಂಚೆ ಮೂಲಕ ಉಚಿತವಾಗಿ ತಲುಪಿಸಲಾಗುವುದು. ಎಪಿಕ್ ಕಾರ್ಡ್ ಕಳೆದು ಹೋದರೆ ಅಥವಾ ಬದಲಿ ಕಾರ್ಡ್‌ಗೆ ಅರ್ಜಿಸಲ್ಲಿಸಿ ಉಚಿತವಾಗಿ ಪಡೆಯಬಹುದಾಗಿದೆ. ಮತದಾರರ ಪಟ್ಟಿ ಬಗ್ಗೆ ಸಂದೇಹಗಳಿದ್ದಲ್ಲಿ ಜಿಲ್ಲಾ ಸಂಪರ್ಕ ಕೇಂದ್ರದ ಸಹಾಯವಾಣಿ ಸಂಖ್ಯೆ-1950ಕ್ಕೆ ಕರೆ ಮಾಡಬಹುದು.
ಟಿ. ವೆಂಕಟೇಶ್, ಜಿಲ್ಲಾಧಿಕಾರಿ, ಚಿತ್ರದುರ್ಗ.