ಕೋಟೆನಾಡಿನ ಹಲವೆಡೆ ಹೋಳಿ ಸಂಭ್ರಮ

Holi
Published on

ಚಿತ್ರದುರ್ಗ: ಸುಡು ಬಿಸಿಲು ಲೆಕ್ಕಿಸದೆಯೇ ನಗರ ಸೇರಿ ಕೋಟೆನಾಡಿನ ಹಲವೆಡೆ ಹೋಳಿ ಹಬ್ಬವನ್ನು ಸೋಮವಾರ ಸಂಭ್ರಮದಿಂದ ಅನೇಕರು ಆಚರಿಸಿದರು.

ಬೆಳಗ್ಗೆ 6.30ರಿಂದಲೇ ಯುವಕ-ಯುವತಿಯರು, ಚಿಣ್ಣರು ವಿವಿಧ ವರ್ಣದ ಬಣ್ಣಗಳನ್ನು ಕೈಯಲ್ಲಿಡಿದು ಬಣ್ಣದಾಟವಾಡಲು ಶುರು ಮಾಡಿದರು. ಮಧ್ಯಾಹ್ನ 1ರವರೆಗೂ ಈ ಪ್ರಕ್ರಿಯೆ ಹಲವೆಡೆ ಮುಂದುವರೆಯಿತು.

ಬಣ್ಣ ಎರಚಿದ ನಂತರ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಡೊಳ್ಳು, ತಮಟೆ ವಾದ್ಯಗಳು ಯುವಕರನ್ನು ಮತ್ತಷ್ಟು ಸಂಭ್ರಮದಲ್ಲಿ ತೇಲಾಡುವಂತೆ ಮಾಡಿತು. ದ್ವಿಚಕ್ರ ವಾಹನಗಳಲ್ಲಿ ವಿವಿಧ ಬಡಾವಣೆ ಸುತ್ತಾಡಿ ಗೆಳೆಯ-ಗೆಳತಿಯರನ್ನು ಬಣ್ಣದಾಟಕ್ಕೆ ಆಹ್ವಾನಿಸಿದರು.

ಕೆಲವೆಡೆ ಮಡಿಕೆ ಒಡೆದು ಸಂಭ್ರಮಿಸಲಾಯಿತು. ಚಿಣ್ಣರು ಪಿಚಕಾರಿ, ಪಿಸ್ತೂಲ್, ಬಾಟಲಿಗಳಲ್ಲಿ ನೀರಿನೊಂದಿಗೆ ಬಣ್ಣ ಮಿಶ್ರಣ ಮಾಡಿಕೊಂಡು ಸ್ನೇಹಿತರಿಗೆ ಎರಚಿದರು.

ಕಾಲೇಜುಗಳಿಗೂ ವಿಸ್ತರಣೆ: ಹೋಳಿ ಆಚರಣೆ ಕೆಲ ವರ್ಷಗಳಿಂದ ಕಾಲೇಜುಗಳಿಗೂ ವಿಸ್ತರಿಸಿದ್ದು, ನಗರದ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಬಣ್ಣ ಎರಚುವ ಮೂಲಕ ಸಂಭ್ರಮದಿಂದ ಆಚರಿಸಿದರು.

ಮೈ ತುಂಬಾ ಬಣ್ಣ ಆಗಿದ್ದರಿಂದಾಗಿ ಮಧ್ಯಾಹ್ನದ ನಂತರ ಹೊಂಡಗಳತ್ತ ಮುಖ ಮಾಡಿದ ಯುವಕರು ಈಜಾಡಿ ದೇಹ ಸ್ವಚ್ಛಗೊಳಿಸಿಕೊಳ್ಳಲು ಮುಂದಾದರು. ಹೋಳಿ ಆಡಿದವರ ಸಂಖ್ಯೆ ಹಿಂದಿನ ವರ್ಷಕ್ಕಿಂತಲೂ ಕಡಿಮೆ ಇತ್ತು.

ಜೈನ್ ಸಮುದಾಯದಿಂದ ಆಚರಣೆ: ಜೈನ್ ಕಾಲನಿಗಳಲ್ಲೂ ಹೋಳಿ ಸಡಗರ ಕಂಡುಬಂದಿತು. ಉತ್ತರ ಭಾರತದಿಂದ ಇಲ್ಲಿಗೆ ಬಂದು ಕೆಲಸಕ್ಕೆ ಸೇರಿಕೊಂಡ ಯುವಕರು ಸೋಮವಾರವೇ ಮೆದೇಹಳ್ಳಿ ರಸ್ತೆ, ಬಿ.ಡಿ.ರಸ್ತೆಯಲ್ಲಿನ ಜೈನ್ ಸಮುದಾಯದ ಕೆಲ ಅಂಗಡಿಗಳಿಗೆ ಹೋಗಿ ಬಣ್ಣ ಎರಚಿದರು.

ಇಂದು ಕೂಡ ಹೋಳಿ ಆಚರಣೆ: ಹೋಳಿ ಹಬ್ಬದ ಅಂಗವಾಗಿ ಹಿಂದಿನ ದಿನವಾದ ಭಾನುವಾರ ರಾತ್ರಿ ಜಿಲ್ಲೆಯ ವಿವಿಧ ಬಡಾವಣೆ, ರಸ್ತೆ ಬದಿಗಳಲ್ಲಿ, ದೇಗುಲಗಳ ಸಮೀಪದಲ್ಲಿ ಹಾಗೂ ಗ್ರಾಮೀಣ ಭಾಗಗಳಲ್ಲಿ ಕಾಮನನ್ನು ಪ್ರತಿಷ್ಠಾಪಿಸಿ, ಹಾಡುಗಳನ್ನು ಹೇಳಿ ಕೂಗುತ್ತ ದಹಿಸಲು ಮುಂದಾದರು. ಸೋಮವಾರ ಕೂಡ ಕಾಮದಹನ ನಡೆದಿದ್ದು, ಮಾ. 26ರ ಮಂಗಳವಾರವೂ ಹಲವೆಡೆ ಹೋಳಿ ಆಚರಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net