ಕೋಟೆನಾಡಿನ ಶಾಲಾ ಆರಂಭೋತ್ಸವಕ್ಕೆ ಅದ್ದೂರಿ ಚಾಲನೆ

bkt-31-4
Published on

ಬಾಗಲಕೋಟೆ: ಪ್ರಸಕ್ತ ಶೈಕ್ಷಣಿಕ ವರ್ಷದ ಶಾಲಾ ಆರಂಭೋತ್ಸವಕ್ಕೆ ಜಿಲ್ಲೆಯಾದ್ಯಂತ ಎಲ್ಲ ಶಾಲೆಗಳಲ್ಲಿ ಶುಕ್ರವಾರ ಅದ್ದೂರಿಯಾಗಿ ಚಾಲನೆ ನೀಡಲಾಯಿತು.

ಜಿಲ್ಲೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗಳು ೪೫೯, ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿರುವ ೩, ಸರ್ಕಾರಿ ಅನುದಾನಿತ ೬, ಖಾಸಗಿ ೧೬೨ ಸೇರಿ ೬೩೦, ಹಿರಿಯ ಪ್ರಾಥಮಿ ಶಾಲೆಗಳಲ್ಲಿ ಶಿಕ್ಷಣ ಇಲಾಖೆಯ ೭೮೮, ಅನುದಾನಿತ ಶಾಲೆಗಳು ೯೭, ಖಾಸಗಿ ೨೦೯ ಸೇರಿದಂತೆ ೧೦೯೪, ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಣ ಇಲಾಖೆ ಅಡಿಯಲ್ಲಿ ೧೨೪೭. ಸಮಾಜ ಇಲಾಖೆ ಅಡಿಯಲ್ಲಿ ೩, ಸರ್ಕಾರಿ ಅನುದಾನಿತ ೧೦೩, ಖಾಸಗಿ ೩೭೧ ಸೇರಿದಂತೆ ೧೭೩೪, ಪ್ರಾಢ ಶಾಲೆಗಳಲ್ಲಿ ಸರ್ಕಾರಿ ೧೯೦, ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ೩೪, ಸರ್ಕಾರಿ ಅನುದಾನಿತ ೧೨೬, ಖಾಸಗಿ ೧೮೫, ಇತರೆ ೧೧ ಸೇರಿದಂತೆ ೫೩೮ ಪ್ರೌಢ ಶಾಲೆಗಳು ಪುನರಾರಂಭಗೊಂಡವು.

ಶೈಕ್ಷಣಿಕ ವರ್ಷದ ಆರಂಭದ ಮೊದಲ ದಿನವಾಗಿದ್ದರಿಂದ ಶಾಲೆಗಳಿಗೆ ಸುಣ್ಣ-ಬಣ್ಣ ಬಳೆದು, ತಳಿರು ತೋರಣಗಳಿಂದ ಶಾಲೆಯನ್ನು ಶೃಂಗರಿಸಲಾಗಿತ್ತು. ಕೆಲ ಶಾಲೆಗಳಲ್ಲಿ ಶಾಮಿಯಾನ ಹಾಕಿ, ರಂಗೂಲಿ ಬಿಡಿಸಿ ಪಾಲಕರನ್ನ ಮತ್ತು ಮಕ್ಕಳನ್ನು ಆತ್ಮೀಯವಾಗಿ ಸ್ವಾಗತಿಸಿಕೊಳ್ಳಲಾಯಿತು. ವಿವಿಧ ನಾಮ ಫಲಕ ಹಿಡಿದುಕೊಂಡು ಮಕ್ಕಳು ಪ್ರಮುಖ ಬೀದಿಗಳಲ್ಲಿ- ಗಲ್ಲಿಗಲ್ಲಿಗಳಲ್ಲಿ ಮೆರವಣಿಗೆ ಸಾಗಿ ಘೋಷಣೆ ಕೂಗಿದ್ದು ಆರಂಭೋತ್ಸವ ಸಂಭ್ರಮ ಇಮ್ಮಡಿಗೊಳಿಸುವಂತೆ ಮಾಡಿತು. ವಿವಿಧ ಶಾಲೆಯ ವಿದ್ಯಾರ್ಥಿಗಳು ಸಮವಸ್ತ್ರ ತೊಟ್ಟುಕೊಂಡು ಮೆರವಣಿಗೆ ನಡೆಸಿದರು.

ಸಾವಿರಾರು ವಿದ್ಯಾರ್ಥಿಗಳು ತಮ್ಮ ಶಾಲಾ ವ್ಯಾಪ್ತಿ ಪ್ರದೇಶ, ಗಲ್ಲಿ, ಪ್ರಮುಖ ಬೀದಿಗಳಲ್ಲಿ ನಮ್ಮ ನಡಿಗೆ ಶಾಲೆಯ ಕಡೆಗೆ',ಹೆಣ್ಣೊಂದು ಕಲಿತರೇ ಶಾಲೆಯೊಂದು ತೆರೆದಂತೆ', ೬ ರಿಂದ ೧೪ ವರ್ಷದ ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸಿ',ಬಾ ಬಾಲೆ ಶಾಲೆಗೆ',ಕಲಿತ ಹೆಣ್ಣು ಮನೆಗೆ ಕಣ್ಣು',ಶಿಕ್ಷಣವೇ ಶಕ್ತಿ', `ಮೈಯಲ್ಲಿ ಹರಕು ಬಟ್ಟೆ ಇದ್ದರೂ ಕೈಯಲ್ಲಿ ಪುಸ್ತಕವಿರಲಿ' ಹೀಗೆ ವಿವಿಧ ಘೋಷಣೆಗಳ ಫಲಕ ಹಿಡಿದುಕೊಂಡು ಮೆರವಣಿಗೆ ನಡೆಸಿದರು.

ಮಕ್ಕಳಿಗೆ ಕಲಿಕಾ ವಾತಾವರಣ ನಿರ್ಮಿಸಿ ಶಿಕ್ಷಕರು ಶೈಕ್ಷಣಿಕ ಚಟುವಟಿಕೆಗಳನ್ನು ಉತ್ಸಾಹದಿಂದ ಆರಂಭಿಸಬೇಕು. ೧ರಿಂದ ೧೦ನೇ ತರಗತಿಯವರೆಗೆ ಸರ್ಕಾರದಿಂದ ಉಚಿತ ಪಠ್ಯಪುಸ್ತಕ, ಬಟ್ಟೆಗಳನ್ನು ವಿತರಿಸಲಾಗುತ್ತಿದೆ. ಮಕ್ಕಳಿಗೆ ಶುದ್ಧಬರಹ, ಸರಳ ಗಣಿತವನ್ನು ಕಡ್ಡಾಯವಾಗಿ ನಿರಂತರವಾಗಿ ಕಲಿಸುವ ಮೂಲಕ ಸಮರ್ಥ ವಿದ್ಯಾರ್ಥಿಗಳನ್ನಾಗಿ ತಯಾರಿಸಬೇಕಾದ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಡಿಡಿಪಿಐ ಬಿ.ಕೆ.ನಂದನೂರ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net