

ಚಿತ್ರದುರ್ಗ: ಕೋಟೆನಾಡಾದ್ಯಂತ ಬುಧವಾರ ಶ್ರೀರಾಮ ನವಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
ರಾಮ, ಆಂಜನೇಯ ಸ್ವಾಮಿ, ಶಿವ, ಗಣಪತಿ ಮಂದಿರಗಳು ವಿಶೇಷವಾಗಿ ವಿದ್ಯುದ್ದೀಪ, ಪುಷ್ಪ ಅಲಂಕಾರದಿಂದ ಕಳೆಗಟ್ಟಿದ್ದವು. ದಶರಥ ನಂದನನ ದರ್ಶನಕ್ಕಾಗಿ ಭಕ್ತರು ಬೆಳಗ್ಗೆಯಿಂದಲೆ ಸಾಲುಗಟ್ಟಿ ನಿಂತಿದ್ದರು. ಎಲ್ಲೆಲ್ಲೂ ರಾಘವನದೇ ಧ್ಯಾನ. ಪೂಜೆ, ಹೋಮ, ಭಜನೆ ಎಲ್ಲದರಲ್ಲೂ ಮರ್ಯಾದೆ ಪುರುಷೋತ್ತಮನದೇ ಸ್ಮರಣೆ.
ರಂಗಯ್ಯನಬಾಗಿಲು, ತ್ಯಾಗರಾಜ ಬೀದಿ, ಕೆಳಗೋಟೆಯ ಅಂಬಾ ಭವಾನಿ ದೇಗುಲ, ಭೋವಿ ವಿದ್ಯಾರ್ಥಿ ನಿಲಯ ಆವರಣದಲ್ಲಿನ ಶ್ರೀರಾಮಮಂದಿರದಲ್ಲಿ ಬೆಳಗ್ಗೆಯಿಂದ ಅಭಿಷೇಕ ಸೇರಿ ಇಡೀ ರಾಮನ ಪರಿವಾರಕ್ಕೆ ವಿಶೇಷ ಪೂಜೆ ನಡೆದವು. ಕೆಲವೆಡೆ ಶ್ರೀರಾಮನ ಉತ್ಸವ ಮೂರ್ತಿ, ಭಾವಚಿತ್ರಕ್ಕೆ ಭಕ್ತರಿಂದ ಕ್ಷೀರಾಭಿಷೇಕದ ವ್ಯವಸ್ಥೆ ಮಾಡಲಾಗಿತ್ತು. ಸಾಲಾಗಿ ಬಂದ ಭಕ್ತರು ಒಬ್ಬೊಬ್ಬರಾಗಿ ಅಭಿಷೇಕ ನೆರವೇರಿಸಿದರು.
ಜಿಲ್ಲೆಯ ಕೆಲವೆಡೆ ರಾಮತಾರಕ ಹೋಮ, ಶ್ರೀರಾಮನ ತೊಟ್ಟಿಲು ಉತ್ಸವ ವಿಶೇಷ ಆಕರ್ಷಣೆಯಾಗಿತ್ತು. ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳದಿಂದ ನಡೆದ ಆಚರಣೆಯಲ್ಲಿ ಪ್ರಮುಖ ಬೀದಿಗಳು ಕೇಸರಿ ಬಂಟಿಗ್ಸ್, ಬಾವುಟಗಳಿಂದ ರಾರಾಜಿಸಿದವು. ಶ್ರೀರಾಮನ ಭಾವಚಿತ್ರಕ್ಕೆ ಬೃಹದಾಕಾರದ ಹೂವಿನ ಹಾರವನ್ನಾಕಿ ಹಲವೆಡೆ ಅಲಂಕರಿಸಿ, ಎಡೆ ಸಮರ್ಪಿಸಿ ಪೂಜಿಸಲಾಯಿತು.
ಶ್ರೀರಾಮನವಮಿ ಅಂಗವಾಗಿ ಸ್ವಾಮಿಯ ಮೂರ್ತಿಗೆ ಶಾಸ್ತ್ರ, ಸಂಪ್ರದಾಯದಂತೆ ಗಂಗಾಪೂಜೆಯೂ ನೆರವೇರಿತು. ನಗರ, ಪಟ್ಟಣ, ಗ್ರಾಮೀಣ ಪ್ರದೇಶಗಳ ರಸ್ತೆಗಳಲ್ಲಿ ಮೆರವಣಿಗೆಗಳೂ ನೆರವೇರಿದವು. ಭಕ್ತೋತ್ಸಾಹ ಮುಗಿಲುಮುಟ್ಟಿತ್ತು.
ಸೀತಾ ಮಾತೆ, ಲಕ್ಷ್ಮಣ, ಆಂಜನೇಯ ಸ್ವಾಮಿ ಸಮೇತ ಶ್ರೀರಾಮನ ಮೂರ್ತಿ, ಭಾವಚಿತ್ರಕ್ಕೆ ಬೆಳಗ್ಗೆ ಮೊದಲ ಮಹಾಮಂಗಳಾರತಿ ಸೇವೆ ಜರುಗಿದ ನಂತರ ಹಲವೆಡೆ ನೆರೆದಿದ್ದ ಭಕ್ತರಿಗೆ ದೇಗುಲಗಳ ಮುಂಭಾಗ, ರಸ್ತೆಗಳಲ್ಲಿ ಪಾನಕ, ಕೋಸುಂಬರಿ, ಮಜ್ಜಿಗೆ, ಕಡಲೆಕಾಳು ಹುಸುಳಿ, ಪುಳಿಯೋಗರೆ ವಿತರಿಸಲಾಯಿತು. ನೂರಾರು ಭಕ್ತರು ಪ್ರಸಾದ ಸ್ವೀಕರಿಸಿದರು. ಕೆಲವೆಡೆ ಅನ್ನಸಂತರ್ಪಣೆ ಕೂಡ ನಡೆಯಿತು.
ಬುರುಜನಹಟ್ಟಿಯ ಕೋಟೆ ಆಂಜನೇಯಸ್ವಾಮಿ ದೇಗುಲ ಸಮಿತಿ, ನೆಹರು ನಗರದ ವೀರಾಂಜನೇಯ ಸ್ವಾಮಿ ದೇಗುಲ ಸಮಿತಿ, ಸಿಹಿನೀರು ಹೊಂಡದ ಆಂಜನೇಯ ದೇಗುಲದಲ್ಲಿ ಮುಂಜಾನೆಯಿಂದಲೂ ವಿಶೇಷ ಪೂಜೆ ನೆರವೇರಿದವು.
ಬೆಟ್ಟದ ಆಂಜನೇಯ, ತಮಟಕಲ್ಲು ಆಂಜನೇಯ, ಮದಕರಿ ಗಣಪತಿ ದೇಗುಲ, ಆನೆಬಾಗಿಲು ಬಳಿಯ ಆಂಜನೇಯ, ಮದಕರಿನಾಯಕ ವೃತ್ತ ಸಮೀಪದ ರಕ್ಷಾಂಜನೇಯ, ಜಿಲ್ಲಾ ಕ್ರೀಡಾಂಗಣ ರಸ್ತೆಯ ಆಂಜನೇಯ, ಬರಗೇರಿ ಆಂಜನೇಯ ಸ್ವಾಮಿ, ನಗರ ಪೊಲೀಸ್ ಠಾಣೆ ಆವರಣದ ಕಣಿವೆಮಾರಮ್ಮ ದೇವಿ ಸೇರಿ ಹಲವು ದೇಗುಲಗಳಲ್ಲಿ ಮುಂಜಾನೆಯಿಂದ ರಾತ್ರಿ 9ರವರೆಗೂ ಪೂಜಾ ಕೈಂಕರ್ಯಗಳು ಜರುಗಿದವು.
ಧರ್ಮಗ್ರಂಥಗಳ ಪ್ರಕಾರ, ಭಗವಾನ್ ಶ್ರೀರಾಮನ ಜನ್ಮದಿನವನ್ನು ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನದಂದು ಆಚರಿಸಲಾಗುತ್ತದೆ. ಈ ಬಾರಿಯ ರಾಮನವಮಿ ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಆತನ ಆರಾಧನೆಯಿಂದ ಬದುಕಿಗೆ ಹೊಸ ಚೈತನ್ಯ ದೊರೆಯಲಿದೆ. ಶ್ರದ್ಧಾಭಕ್ತಿಯ ಪೂಜೆಯಿಂದ ಇಷ್ಟಾರ್ಥಗಳೂ ಸಿದ್ಧಿಯಾಗಲಿವೆ ಎಂದು ರಾಮ ದೇಗುಲಗಳ ಅರ್ಚಕರು ತಿಳಿಸಿದರು.
ತುರುವನೂರು ರಸ್ತೆಯ ವೆಂಕಟೇಶ್ವರ ಸ್ವಾಮಿ ದೇಗುಲ ಆವರಣದಲ್ಲಿ ಬ್ಯಾಂಕ್ ಕಾಲನಿಯ ಸ್ಥಳೀಯರು, ಭಾರತೀಯ ಯೋಗ ಶಿಕ್ಷಣ ಸಂಸ್ಥೆಯಿಂದ ಶ್ರೀರಾಮನವಮಿ ಪೂಜಾ ಕಾರ್ಯಕ್ರಮ ನಡೆಯಿತು.