ಕೋಟೆನಾಡಲ್ಲಿ ಹಿಂಗಾರು ಬಿತ್ತನೆ ಚುರುಕು…!

bkt-6-3 (1)
ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಕೋಟೆಕಲ್ಲ ಗ್ರಾಮದಲ್ಲಿ ಹಿಂಗಾರು ಬಿತ್ತನೆ ಕಾರ್ಯ.
Published on

ಬಾಗಲಕೋಟೆ: ಕಳೆದ ಮೂರು ನಾಲ್ಕ ವರ್ಷಗಳಿಂದ ಅತಿವೃಷ್ಠಿ, ಅನಾವೃಷ್ಠಿಯಿಂದ ರೈತರು ಕಂಗಲಾಗಿದ್ದರು. ಪ್ರಸಕ್ತ ಮುಂಗಾರು ಹಂಗಾಮು ರೈತರದಲ್ಲಿ ಮಂದಹಾಸ ಮೂಡಿಸಿತು. ಇದೀಗ ಹಿಂಗಾರು ಹಂಗಾಮು ಕೈ ಹಿಡಿವು ನಿರೀಕ್ಷೆ ಗರಿಗೆದ್ದು, ಅನ್ನದಾತರು ಖುಷಿಯಿಂದ ಬಿತ್ತನೆಯಲ್ಲಿ ತೊಡಗಿದ್ದಾರೆ. ಕೋಟೆನಾಡಲ್ಲಿ ಬಿತ್ತನೆ ಕಾರ್ಯ ಚುರುಕುಗೊಂಡಿದೆ…!!

ಜಿಲ್ಲಾ ಕೇಂದ್ರ ಸ್ಥಾನ ಬಾಗಲಕೋಟೆ, ಮುಧೋಳ, ಜಮಖಂಡಿ, ತೇರದಾಳ, ರಬಕವಿ-ಬನಹಟ್ಟಿ, ಬಾದಾಮಿ, ಹುನಗುಂದ, ಇಳಕಲ್ಲ ಹಾಗೂ ಗುಳೇದಗುಡ್ಡ ಸೇರಿದಂತೆ ಎಲ್ಲೆಡೆ ಅಗತ್ಯವಾದ ಸಿದ್ಧತೆ ಪೂರ್ಣಗೊಂಡಿದೆ. ವರುಣ ದೇವನ ಕೃಪೆಗೆ ಸಂತಸಗೊಂಡಿದ್ದು, ಭೂಮಿ ಹದಗೊಳಿಸಿ ಬಿತ್ತನೆ ಮಾಡುತ್ತಿದ್ದಾರೆ.

ವಾಡಿಕೆಯಂತೆ ಸಪ್ಟೆಂಬರ್ ಕೊನೆವಾರದಿಂದ ಹಿಂಗಾರು ಬಿತ್ತನೆ ಸಿದ್ಧತೆ ಆರಂಭಗೊಳ್ಳುತ್ತದೆ. ಒಂದು ವಾರ ತಡವಾದರು ಅಕ್ಟೋಬರ್ ಮೊದಲ ವಾರದಿಂದ ಬಿತ್ತನೆ ಚುರುಕುಗೊಂಡಿದೆ. ಹಿಂಗಾರಿ ಜೋಳ ೯೮೦೦೦ ಹೆಕ್ಟೇರ್, ಗೋವಿನ ಜೋಳ ೨೫೪೦೦ ಹೆಕ್ಟೇರ್, ಗೋಽ ೨೮೦೦೦ ಹೆಕ್ಟೇರ್. ದ್ವಿದಳ ಧಾನ್ಯಗಳು: ಕಡಲೆ ೧೦೯೦೦೦ ಹೆಕ್ಟೇರ್, ಹುರುಳಿ ೧೦೦೦ ಹೆಕ್ಟೇರ್, ಅಲಸಂದಿ ೬೦೦ ಹೆಕ್ಟೇರ್. ಏಣೆ ಕಾಳು ಬೆಳೆಗಳು: ಸೂರ್ಯಕಾಂತಿ ೨೧೦೦೦ ಹೆಕ್ಟೇರ್, ಕುಸುಬಿ ೧೫೦೦ ಹೆಕ್ಟೇರ್, ಅಗಸಿ ೨೦೦೦ ಹೆಕ್ಟೇರ್ ಹಾಗೂ ವಾಣಿಜ್ಯ ಬೆಳೆಗಳು: ಹತ್ತಿ ೪೦೦ ಹೆಕ್ಟೇರ್, ಕಬ್ಬು ಪಿ ೨೩೫೦೦ ಹೆಕ್ಟೇರ್ ಸೇರಿ ಒಟ್ಟು ೩೧೦೦೦೦ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ.

ಕಳೆದ ವರ್ಷ ಮಳೆ ಕೊರತೆಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ನದಿ, ಬ್ಯಾರೇಜ್, ಕಾಲುವೆಗಳಲ್ಲಿ ನೀರು ಇಲ್ಲದೆ ಪರಿತಪಿಸಿದ್ದರು. ಹಿಂಗಾರು ಹಂಗಾಮಿಗೆ ಭೂಮಿ ಹದಗೊಳಿಸಿ ಬಿತ್ತನೆಗೆ ಸಜ್ಜಾಗಿದ್ದ ರೈತರು ಖಾಲಿ ಕೈಗಳಲ್ಲಿ ಕುಳಿತುಕೊಳ್ಳುವಂತಾಗಿತ್ತು. ಪ್ರಸಕ್ತ ವರ್ಷ ಅಗತ್ಯವಾದಷ್ಟು ಮಳೆಯಾಗಿದೆ. ಇದರಿಂದ ಹಿಂಗಾರು ಹಂಗಾಮು ಭರ್ಜರಿ ಫಸಲು ನಿರೀಕ್ಷೆಯಲ್ಲಿದ್ದಾರೆ. ಮಳೆಯ ಕೃಪೆ ಹೀಗೆ ಮುಂದು ವರೆದಲ್ಲಿ ಉತ್ತಮವಾದ ಬೆಳೆ ಬರಲಿದೆ.

ಹಿಂಗಾರು ಹಂಗಾಮಿನ ಸೆಪ್ಟಂಬರ್ ಮಾಹೆಯಲ್ಲಿ ಸ್ವಲ್ಪ ಮಳೆಯಾಗಿತ್ತು. ಅಕ್ಟೋಬರ್ ಮೊದಲ ಉತ್ತಮವಾಗಿ ಮಳೆ ಸುರಿದಿದೆ. ಇದರಿಂದ ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಹಿಂಗಾರಿ ಹಂಗಾಮಿನಲ್ಲಿ ಒಟ್ಟು ೩,೧೦,೦೦೦ ಹೆಕ್ಟೇರ್ ಕ್ಷೇತ್ರದಲ್ಲಿ ಬಿತ್ತನೆ ಗುರಿಯನ್ನು ಹೊಂದಲಾಗಿದೆ. ಜಿಲ್ಲೆಯ ಎಲ್ಲ ೧೮ ರೈತ ಸಂಪರ್ಕ ಕೇಂದ್ರಗಳ ಹಾಗೂ ಒಟ್ಟು ೮ ಹೆಚ್ಚುವರಿ ಮಾರಾಟ ಕೇಂದ್ರಗಳ ಮುಖಾಂತರ ರೈತರಿಗೆ ರಿಯಾಯತಿ ದರದಲ್ಲಿ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದೆ. ಜಿಲ್ಲೆಗೆ ಹಿಂಗಾರು ಹಂಗಾಮಿಗೆ ಅವಶ್ಯವಿರುವ ರಸಗೊಬ್ಬರಗಳನ್ನು ಖಾಸಗಿ ಹಾಗೂ ಸಹಕಾರಿ ಸಂಘಗಳ ಮೂಲಕ ವಿತರಣೆಯನ್ನು ಮಾಡಲಾಗುತ್ತಿದೆ. ಬೀಜೋಚಾರ ಮಾಡಿದ ಬೀಜಗಳನ್ನು ಮಾತ್ರ ರೈತರು ಬಿತ್ತನೆ ಮಾಡಬೇಕು. ಇಳಿಜಾರು ಅಡ್ಡಲಾಗಿ ಬಿತ್ತನೆ ಮಾಡಬೇಕು. ನಕಲಿ ಬೀಜ, ಗೊಬ್ಬರ ಕಂಡು ಬಂದಲ್ಲಿ ದೂರು ನೀಡಬೇಕು. ಪ್ರತಿಯೊಂದಕ್ಕೂ ರಸೀದಿ ಪಡೆದು ಕಾಪಿಟ್ಟುಕೊಳ್ಳಬೇಕು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಲಕ್ಷ್ಮಣ ಕಳ್ಳೆನ್ನವರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net