ಕೋಟೆನಾಡಲ್ಲಿ ಲಯಕರ್ತನ ಆರಾಧನೆ !

bkt-26-1
ಮಹಾಶಿವರಾತ್ರಿ ಅಂಗವಾಗಿ ಬಾಗಲಕೋಟೆಯ ಸತ್ಯಂ ಶಿವಂ ಸುದರಂ ಶಿವಾಲಯದಲ್ಲಿ ವಿಶೇಷ ಪೂಜೆ ನಡೆಯಿತು.
Published on

ಬಾಗಲಕೋಟೆ: ಲಯಕರ್ತನಾದ ಶಿವನ ಆರಾಧನೆಯ ಮಹಾಶಿವರಾತ್ರಿ ಹಬ್ಬವನ್ನು ಜಿಲ್ಲಾದ್ಯಂತ ಸಾರ್ವಜನಿಕರು ಭಕ್ತಿ, ನಿಷ್ಠೆಯಿಂದ ಆಚರಿಸಿದರು. ಬುಧವಾರ ಕೋಟೆನಾಡಲ್ಲಿ ಶಿವ ಭಕ್ತರ ಭಕ್ತಿ ಇಮ್ಮಡಿಗೊಂಡಿತ್ತು. ಪ್ರತಿ ಕ್ಷಣವು ಲಯಕರ್ತನೆ ನೆನೆದು ಪುಣಿತರಾದರು.

ಜಿಲ್ಲೆಯ ಪ್ರಸಿದ್ದ ಧಾರ್ಮಿಕ ಕೇಂದ್ರಗಳಾದ ಶಿವಯೋಗ ಮಂದಿರ, ಕೂಡಲಸಂಗಮ, ಚಿಕ್ಕಸಂಗಮ, ಬನಶಂಕರಿ, ಮಹಾಕೂಟ, ಮುಚಖಂಡಿ ವೀರಭದ್ರೇಶ್ವರ ಸೇರಿದಂತೆ ವಿವಿಧ ಶಿವ ಕ್ಷೇತ್ರ ಮತ್ತು ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದಲೇ ರುದ್ರಾಭಿಷೇಕ, ಶಿವಭಜನೆ, ರುದ್ರ ಪುರಾಣ ಮತ್ತು ವಿವಿಧ ಧಾರ್ಮಿಕ ಕೈಂಕರ್ಯಗಳು ಸಂಭ್ರಮ ಸಡಗರದಿಂದ ಜರುಗಿದವು.

ಗಂಧ, ಕುಂಕುಮ, ಭಸ್ಮ, ವಿಭೂತಿ ಸಮರ್ಪಿಸಿ ಆರಾಽಸಲಾಯಿತು. ವಿವಿಧಡೆ ಸಂಗೀತ ಕಾರ್ಯಕ್ರಮ, ನೂರಾರು ಜನ ಒಂದೇಡೆ ಸೇರಿ ಶಿವ ನಾಮಸ್ಮರಣೆ ಮಾಡಿದರು. ಶಿವನಿಗೆ ಇಷ್ಟವಾಗಿರುವ ಹಣ್ಣು-ಹಂಪಲು, ಬಿಲ್ವಪತ್ರೆ ನೈವೇದ್ಯ ಮಾಡಲಾಯಿತು. ಬೆಳಗಿನ ಜಾವದಿಂದಲೆ ಮನೆ, ಮಠ, ಮಂದಿರ ಮತ್ತು ಶಿವನ ದೇವಾಲಯಗಳಲ್ಲಿ ಶಿವನಿಗೆ ಪೂಜಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಶಿವನಿಗೆ ಇಷ್ಟವಾಗಿರುವ ಬಿಲ್ವಾರ್ಚನೆ, ಕ್ಷೀರಾಭಿಷೇಕ, ಗಂಗಾಜಲ ಅರ್ಪಿಸಲಾಯಿತು. ಬಗೆ ಬಗೆಯ ಹೂ ಗಳಿಂದ ಅಲಂಕರಿಸಿ ಶೃಂಗರಿಸಲಾಯಿತು. `ಶಿವ ಶಂಭೋ ಶಂಕರ.. ಹರ ಹರ ಮಾಹಾದೇವ..' ಶಿವ ಶಿವ.. ಹರ ಹರ ..ಮಾಹಾ ಶಂಕರ' ಎನ್ನುವ ಘೋಷಣೆಗಳು ಪ್ರತಿಧ್ವನಿಸಿದವು.

ಇನ್ನು ಜಿಲ್ಲಾ ಕೇಂದ್ರವಾಗಿರುವ ಬಾಗಲಕೋಟೆ ನಗರದಲ್ಲೂ ಎಲ್ಲೆಲ್ಲೂ ಮಹಾಶಿವರಾತ್ರಿಯ ಸಂಭ್ರಮ ಮನೆ ಮಾಡಿತ್ತು. ಬೆಳಗ್ಗೆಯಿಂದಲೇ ಜನರು ದೇವಸ್ಥಾನಗಳ ಕಡೆಗೆ ಹೆಜ್ಜೆ ಹಾಕಿದರು. ಮಕ್ಕಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಶಿವ ದೇವಸ್ಥಾನಕ್ಕೆ ಭೇಟಿ ನೀಡಿ ಶಿವ ದರ್ಶನ ಮಾಡಿದರು.

ಜಿಲ್ಲೆಯಾದ್ಯಂತ ಶಿವನ ದೇಗುಲದಲ್ಲಿ ಶಿವನಾಮ ಜಪ ಮಾಡಲಾಯಿತು. ನಗರದ ಕೌಲಪೇಟ ಓಣಿಯಲ್ಲಿರುವ ವಿಷ್ಣು ಆನಂದೇಶ್ವರ ದೇವಸ್ಥಾನ, ಕಿಲ್ಲಾದಲ್ಲಿರುವ ಕೇದಾರನಾಥ ಮಂದಿರದಲ್ಲಿ, ಕಲಾದಗಿ ರಸ್ತೆಯಲ್ಲಿರುವ ಸತ್ಯ ಶಿವಂ ಸುಂದರA ಗುಡಿಯಲ್ಲಿ, ಕುಮಾರೇಶ್ವರ ಆಸ್ಪತ್ರೆಯ ಆವರಣದ ಶಿವ ಮಂದಿರ, ನವನಗರದ ಸೆಕ್ಟರ ನಂ ೨೫ ರಲ್ಲಿರುವ ಸೌರಾಷ್ಟç ಸೋಮೇಶ್ವರ ದೇವಸ್ಥಾನ, ಎಂ.ಜಿ ರಸ್ತೆಯಲ್ಲಿರುವ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ವಿಶೇಷ ಪೂಜೆ ಜರುಗಿದವು.

ಸಹಸ್ರಾರು ಜನ ದರ್ಶನ ಪಡೆದು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸಿದರು. ಅನೇಕ ಭಕ್ತರು ಉಪವಾಸ ವೃತಾಚರಣೆ ಮಾಡಿದರು.ನಾಡಿಗೆ ಉತ್ತಮ ಮಳೆ, ಬೆಳೆ ಚನ್ನಾಗಿ ಬರಲಿ ಎಂದು ದೇವರನ್ನು ಪ್ರಾರ್ಥಿಸಿದರು. ಚಿಕ್ಕಮಕ್ಕಳು, ವೃದ್ಧರು ಮನೆಯಲ್ಲಿಯೇ ಶಿವ ನಾಮ ಜಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net