ಕೋಟೆನಾಡಲ್ಲಿ ಯುಗಾದಿ ಸಂಭ್ರಮ

bkt-31-1
ಬಾಗಲಕೋಟೆ ನಗರದ ಬಿವಿವಿ ಸಂಘದ ಕಣವಿ ವೀರಭದ್ರೇಶ್ವರ ರಥೋತ್ಸವ ಯುಗಾದಿ ದಿನ ಭಾನುವಾರ ಸಹಸ್ರಾರರು ಭಕ್ತರ ಹರ್ಷೋದ್ಘಾರ ನಡುವೆ ಜರುಗಿತು.
Published on

ಬಾಗಲಕೋಟೆ: ಯುಗಾದಿ ಹಿಂದು ಪಂಚಾAಗದ ಪ್ರಕಾರ ಹೊಸ ವರ್ಷದ ಆರಂಭ. ಹೀಗಾಗಿ ಕೋಟೆನಾಡಲ್ಲಿ ಶ್ರೀವಿಶ್ವಾವಸು ನಾಮ ಸಂವತ್ಸರ ಸಂಭ್ರಮ ಭಾನುವಾರ ಮನೆ ಮಾಡಿತ್ತು.

ಯುಗಾದಿ ಅಂಗವಾಗಿ ಬಾಗಲಕೋಟೆ ಕಣವಿ ವೀರಭದ್ರೇಶ್ವರ, ಮೋಟಗಿ ಬಸವೇಶ್ವರ ದೇವಸ್ಥಾನ, ಮುಚಖಂಡಿ ವೀರಭದ್ರೇಶ್ವರ ದೇವಸ್ಥಾನ, ಶಕ್ತಿ ಪೀಠ ಬಾದಾಮಿ ಬನಶಂಕರಿ, ಕೂಡಲಸಂಗಮದ ಸಂಗಮೇಶ್ವರ ದೇವಸ್ಥಾನ, ಚಿಕ್ಕಮ ಸಂಗಮದ ಸಂಗಮೇಶ್ವರ ದೇವಸ್ಥಾನ, ಮಹಾಕೂಟದ ಮಹಾಕೂಟೇಶ್ವರ ದೇವಸ್ಥಾನ ಸೇರಿದಂತೆ ನಗರ ಹಾಗೂ ಗ್ರಾಮೀಣ ಪ್ರದೇಶದ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆದವು.

ಅಲ್ಲದೆ ಜಿಲ್ಲಾದ್ಯಂತ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಅಲಂಕಾರಗಳು ಜರುಗಿದವು. ನಸುಕಿನ ಜಾವದಿಂದಲೇ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ, ಅಲಂಕಾರ ಮಾಡಲಾಯಿತು. ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿವಿಧೆಡೆ ರಥೋತ್ಸವ ನಡೆದವು. ಉತ್ತಮ ಮಳೆ-ಬೆಳೆ ನೀಡುವಂತೆ ಕೃಷಿಕರು ಪ್ರಾರ್ಥಿಸಿದರು. ಸಾಂಪ್ರದಾಯಕವಾಗಿ ನಡೆದು ಬಂದಿರುವ ಯುಗಾದಿ ಹಬ್ಬವನ್ನು ಮುಳುಗಡೆ ನಾಡಿನ ಜನರು ಸಂಭ್ರಮದಿAದ ಆಚರಿಸಿದರು. ಬೆಲೆ ಏರಿಕೆಯ ಬಿಸಿ ನಡುವೆಯೂ ಮಾರುಕಟ್ಟೆಯಲ್ಲಿ ವಿವಿಧ ವಸ್ತುಗಳನ್ನು ಖರೀದಿಸಲು ಮುಗಿ ಬಿದ್ದರು. ಬೇಸಿಗೆಯ ಸುಡು ಬಿಸಿಲು ಸಹ ಜನರನ್ನು ಮನೆಯಿಂದ ಆಚೆ ಬರಲು ಹಿಂದೇಟು ಹಾಕುವಂತೆ ಮಾಡಿತು.

ಹೊಸ ಸಂವತ್ಸರ ಹಿನ್ನಲೆಯಲ್ಲಿ ಪ್ರಕೃತಿಯಲ್ಲಿನ ಗಿಡ-ಮರ-ಬಳ್ಳಿಗಳು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ. ವಿಶೇಷವಾಗಿ ಬೇವಿನ ಮರಗಳು ಹೂವು ತುಂಬಿಕೊ0ಡು ನಳನಳಿಸುತ್ತಿವೆ. ಯುಗಾದಿ ಪಾಡ್ಯದ ದಿನದಂದು ನೀರಿನಲ್ಲಿ ಬೇವಿನ ಹೂವು, ಎಲೆ ಬೆರೆಸಿ ಸ್ನಾನ ಮಾಡುವುದು ವಾಡಿಕೆ. ಹೀಗಾಗಿ ಜನರು ಬೇವಿನ ಗಿಡದಲ್ಲಿ ಹೂವು, ಎಲೆಗಳನ್ನು ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಕಂಡು ಬಂದಿತು. ಮಾರುಕಟ್ಟೆಯಲ್ಲಿ ಬೇವು-ಬೆಲ್ಲದ ಮಿಶ್ರಣ ಖರೀದಿಗೂ ಅನೇಕರು ತೊಡಗಿದ್ದರು. ಕೃಷಿ ಚಟುವಟಿಕೆಗಳಿಗೂ ರೈತರು ಚಾಲನೆ ನೀಡಿದ್ದು, ಹೊಲಕ್ಕೆ ಕೊಟ್ಟಿಗೆ ಗೊಬ್ಬರ, ಗಳೆ ಹೊಡೆಯುವುದು, ಬೀಜಗಳನ್ನು ಸಂಗ್ರಹಿಸಿ ಪೂಜೆ ಸಲ್ಲಿಸಿದರು. ಪ್ರಸಕ್ತ ವರ್ಷ ಉತ್ತಮ ಮಳೆ, ಬೆಳೆ ಬರುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net