

ಚಿತ್ರದುರ್ಗ: ದೇಶದ ಗಮನ ಸೆಳೆಯುತ್ತಿರುವ ಐತಿಹಾಸಿಕ ಕೋಟೆನಾಡಿನ ಹಿಂದು ಮಹಾಗಣಪತಿ ಶೋಭಾಯಾತ್ರೆಗೆ ದಿನಗಣನೆ ಆರಂಭವಾಗಿದ್ದು, ಅದರ ಅಂಗವಾಗಿ ನಗರಾದ್ಯಂತ ಗುರುವಾರ ಸದ್ದು ಮಾಡಿದ ಬೃಹತ್ ಬೈಕ್ ರ್ಯಾಲಿ ಸುಸಂಪನ್ನಗೊಂಡಿತು.
ರ್ಯಾಲಿಯ ಮುಂಭಾಗ ತೆರೆದ ವಾಹನದೊಳಗಿದ್ದ ಭಾರತಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಹೊಳಲ್ಕೆರೆ ರಸ್ತೆಯ ಕನಕ ವೃತ್ತದಿಂದ ಆರಂಭವಾದ ರ್ಯಾಲಿಗೆ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀ, ಬಸವ ಮಾಚಿದೇವ ಶ್ರೀ, ವಿಎಚ್‌ಪಿ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿ ಜಗನ್ನಾಥ್ ಶಾಸ್ತ್ರಿ, ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಚಾಲನೆ ನೀಡಿದರು.
ಸಾವಿರಾರು ದ್ವಿಚಕ್ರ ವಾಹನ ಸವಾರರು ರ‌್ಯಾಲಿಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಹಿಂಬದಿ ಕೂತವರು ‘ಓಂ’ ಚಿಹ್ನೆಯ ಬೃಹದಾಕಾರದ ಕೇಸರಿ ಬಾವುಟಗಳನ್ನು ಮಾರ್ಗದುದ್ದಕ್ಕೂ ಹಾರಿಸುತ್ತ ಸಾಗಿದರು. ಈ ವೇಳೆ ‘ಭಾರತ್ ಮಾತಾ ಕೀ ಜೈಯ್’, ‘ವಂದೇ ಮಾತರಂ’, ‘ಜೈ ಶ್ರೀರಾಮ್’, ‘ಜೈ ಭಜರಂಗಿ’, ‘ಹಿಂದು ಮಹಾಗಣಪತಿಗೆ ಜೈ’ ಎಂದು ಜಯಘೋಷ ಮೊಳಗಿಸಿ ಹರ್ಷ ವ್ಯಕ್ತಪಡಿಸಿದರು.
ಹೊಳಲ್ಕೆರೆ ರಸ್ತೆಯಿಂದ ಹೊರಟ ರ್ಯಾಲಿ ಬುರುಜನಹಟ್ಟಿ, ಸಂಗೊಳ್ಳಿರಾಯಣ್ಣ ವೃತ್ತ, ಆನೆಬಾಗಿಲು, ಉಚ್ಚಂಗಿಯಲ್ಲಮ್ಮ ದೇಗುಲದ ರಸ್ತೆ, ದೊಡ್ಡಪೇಟೆ, ರಂಗಯ್ಯನಬಾಗಿಲು, ಕ್ರೀಡಾಂಗಣ ರಸ್ತೆ, ಬುದ್ಧ ಸರ್ಕಲ್, ಜೋಗಿಮಟ್ಟಿ ರಸ್ತೆ, ಚೈತನ್ಯ, ವಾಸವಿ, ಅಂಬೇಡ್ಕರ್, ಗಾಂಧಿ ವೃತ್ತ, ಬಿ.ಡಿ.ರಸ್ತೆ ಸೇರಿ ವಿವಿಧೆಡೆ ಸಂಚರಿಸಿ ಹಳೆ ಮಾಧ್ಯಮಿಕ ಶಾಲಾ ಮೈದಾನದಲ್ಲಿ ಮುಕ್ತಾಯಗೊಂಡಿತು.
ಹಿಂದು ಮಹಾಗಣಪತಿ ಉತ್ಸವ ಸಮಿತಿ ಅಧ್ಯಕ್ಷ ನಯನ್, ಮಾಜಿ ಅಧ್ಯಕ್ಷ ಜಿ.ಎಂ.ಸುರೇಶ್, ಮಾರ್ಗದರ್ಶಕ ಟಿ.ಬದರಿನಾಥ್, ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕ ಪ್ರಭಂಜನ್, ಬಿಜೆಪಿ ಮುಖಂಡರಾದ ಉಮೇಶ್ ಕಾರಜೋಳ, ಜಿ.ಎಸ್.ಅನಿತ್‌ಕುಮಾರ್, ವಿಎಚ್‌ಪಿ ಮತ್ತು ಬಜರಂಗದಳ ಮುಖಂಡರಾದ ಕೇಶವ್, ಅಶೋಕ್, ಶಶಿಧರ್, ಕಾರ್ತಿಕ್, ಅಜಿತ್, ರಂಗಸ್ವಾಮಿ, ವಿಫುಲ್ ಜೈನ್, ಭಾನು ಇತರರಿದ್ದರು.