

ಚಿತ್ರದುರ್ಗ: ಹಿಂದು ಮಹಾಗಣಪತಿ ಶೋಭಾಯಾತ್ರೆಗೆ ದಿನಗಣನೆ ಆರಂಭವಾಗಿದ್ದು, ಅದರ ಅಂಗವಾಗಿ ಕೋಟೆನಗರಿಯಾದ್ಯಂತ ಗುರುವಾರ ನಡೆದ ಬೃಹತ್ ಬೈಕ್ ರ್ಯಾಲಿ ಸದ್ದು ಮಾಡಿತು.
ರ್ಯಾಲಿಯ ಮುಂಭಾಗವಿದ್ದ ತೆರೆದ ವಾಹನದೊಳಗೆ ಭಾರತಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಹೊಳಲ್ಕೆರೆ ರಸ್ತೆಯ ಕನಕ ವೃತ್ತ ಮುಂಭಾಗದಿಂದ ಆರಂಭವಾದ ರ್ಯಾಲಿಗೆ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಬಜರಂಗದಳ ದಕ್ಷಿಣ ಪ್ರಾಂತ ಸಹ ಸಂಯೋಜಕ ಪ್ರಭಂಜನ್ ಚಾಲನೆ ನೀಡಿದರು.
ಸಾವಿರಾರು ದ್ವಿಚಕ್ರ ವಾಹನ ಸವಾರರು ರ್ಯಾಲಿಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಹಿಂಬದಿ ಕೂತವರು ‘ಓಂ’ ಚಿಹ್ನೆಯ ಬೃಹದಾಕಾರದ ಕೇಸರಿ ಬಾವುಟಗಳನ್ನು ಮಾರ್ಗದುದ್ದಕ್ಕೂ ಹಾರಿಸುತ್ತ ಸಾಗಿದರು. ಈ ವೇಳೆ ‘ಭಾರತ್ ಮಾತಾ ಕೀ ಜೈಯ್’, ‘ವಂದೇ ಮಾತರಂ’, ‘ಜೈ ಶ್ರೀರಾಮ್’, ‘ಜೈ ಭಜರಂಗಿ’, ‘ಹಿಂದು ಮಹಾಗಣಪತಿಗೆ ಜೈ’ ಎಂದು ಜಯಘೋಷ ಮೊಳಗಿಸಿ ಹರ್ಷ ವ್ಯಕ್ತಪಡಿಸಿದರು.
ಹೊಳಲ್ಕೆರೆ ರಸ್ತೆಯಿಂದ ಹೊರಟ ರ್ಯಾಲಿ ಬುರುಜನಹಟ್ಟಿ, ಸಂಗೊಳ್ಳಿರಾಯಣ್ಣ ವೃತ್ತ, ಆನೆಬಾಗಿಲು, ಚಿಕ್ಕಪೇಟೆ, ಉಚ್ಚಂಗಿಯಲ್ಲಮ್ಮ ದೇಗುಲದ ರಸ್ತೆ, ದೊಡ್ಡಪೇಟೆ, ರಂಗಯ್ಯನಬಾಗಿಲು, ಕ್ರೀಡಾಂಗಣ ರಸ್ತೆ, ಬುದ್ಧ ಸರ್ಕಲ್, ಜೋಗಿಮಟ್ಟಿ ರಸ್ತೆ, ಚೈತನ್ಯ, ವಾಸವಿ, ಅಂಬೇಡ್ಕರ್, ಗಾಂಧಿ ವೃತ್ತ, ಬಿ.ಡಿ.ರಸ್ತೆ, ಮೆದೇಹಳ್ಳಿ ರಸ್ತೆ, ರಾಷ್ಟ್ರೀಯ ಹೆದ್ದಾರಿ ಸೇರಿ ವಿವಿಧೆಡೆ ಸಂಚರಿಸಿ ಹಳೆ ಮಾಧ್ಯಮಿಕ ಶಾಲಾ ಮೈದಾನದಲ್ಲಿ ಮುಕ್ತಾಯಗೊಂಡಿತು.
ಪ್ರಭಂಜನ್ ಮಾತನಾಡಿ, ಹಿಂದು ಮಹಾಗಣಪತಿ ಶೋಭಾಯಾತ್ರೆ ಮೂಲಕ ಸಮಸ್ತ ಹಿಂದುಗಳನ್ನು ಸಂಘಟಿಸಿ, ಒಗ್ಗಟ್ಟು ಪ್ರದರ್ಶಿಸಬೇಕು ಎಂಬುದು ಉತ್ಸವದ ಮುಖ್ಯ ಉದ್ದೇಶ. ಕಳೆದ ವರ್ಷಕ್ಕಿಂತ ಈ ಬಾರಿ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಲ್ಲಿದ್ದೇವೆ ಎಂದರು.
ಹಿಂದು ಮಹಾಗಣಪತಿ ಉತ್ಸವ ಸಮಿತಿ ಅಧ್ಯಕ್ಷ ಜಿ.ಎಂ.ಸುರೇಶ್, ಮಾರ್ಗದರ್ಶಕ ಟಿ.ಬದ್ರಿನಾಥ್, ವಿಎಚ್‌ಪಿ ಮತ್ತು ಬಜರಂಗದಳ ಮುಖಂಡರಾದ ಪಿ.ರುದ್ರೇಶ್, ಕೇಶವ್, ಸಂದೀಪ್, ಅಶೋಕ್, ರಾಜೇಶ್, ರಂಗಸ್ವಾಮಿ, ಶಶಿಧರ್, ಸಮಿತಿ ಸದಸ್ಯರಾದ ವಿಫುಲ್ ಜೈನ್, ಕಾರ್ತಿಕ್, ಅಜಿತ್, ರಂಗಸ್ವಾಮಿ ಇತರರಿದ್ದರು.