

ಚಿತ್ರದುರ್ಗ: ಕೋಟೆನಾಡಿನ ಹಲವೆಡೆ ಸೋಮವಾರ ಶ್ರದ್ಧಾ-ಭಕ್ತಿಯಿಂದ ನಾಗರ ಪಂಚಮಿ ಹಬ್ಬವನ್ನು ಆಚರಿಸಲಾಯಿತು. ಚತುರ್ಥಿಯಷ್ಟೇ ಸಂಭ್ರಮ ಪಂಚಮಿಯಲ್ಲೂ ಮನೆಮಾಡಿತ್ತು.
ಹಬ್ಬದ ಅಂಗವಾಗಿ ಭಕ್ತರು ನಾಗದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸಿ ಅರಳು ಬೀರಿ, ಹಾಲೆರೆದು ಭಕ್ತಿ ಸಮರ್ಪಿಸಿದರು. ವಿವಿಧ ಬಡಾವಣೆಗಳಲ್ಲಿ ನಾಗರಕಟ್ಟೆಗಳಿಗೆ ಪೂಜೆ ಸಲ್ಲಿಸುತ್ತಿರುವ ದೃಶ್ಯ ಕಂಡು ಬಂದವು.
ಹಿರಿಯರು, ಕಿರಿಯರು, ಮಹಿಳೆಯರು ಪೂಜಾ ಸಾಮಗ್ರಿ ಜತೆ ನಾಗರಕಟ್ಟೆಗಳಿಗೆ ತೆರಳಿ ಪೂಜೆ ಸಲ್ಲಿಸುವುದರಲ್ಲಿ ನಿರತರಾಗಿದ್ದರು. ಇಷ್ಟಾರ್ಥ ಈಡೇರಿಸುವಂತೆ ನಾಗದೇವರನ್ನು ಪ್ರಾರ್ಥಿಸಿದರು.
ಉಂಡೆಗಳು ಕಣ್ಮರೆ: ಅತ್ಯಂತ ಶ್ರೇಷ್ಠ ಹಬ್ಬಗಳಲ್ಲೊಂದಾದ ನಾಗರ ಪಂಚಮಿಯಲ್ಲಿ ಪ್ರತಿ ವರ್ಷ ಸಾಮಾನ್ಯವಾಗಿ ಬಹುತೇಕರ ಮನೆಗಳಲ್ಲಿ ಶೇಂಗಾ, ಕಡಲೆ, ಎಳ್ಳು, ಮಂಡಕ್ಕಿ, ಸಿರಿಧಾನ್ಯದ ಉಂಡೆಗಳನ್ನು ಹಬ್ಬಕ್ಕೂ ಒಂದೆರಡು ದಿನ ಮುಂಚಿತವಾಗಿ ತಯಾರಿಸಿ ಇಟ್ಟುಕೊಳ್ಳುತ್ತಿದ್ದರು. ಸ್ನೇಹಿತರು, ಸಂಬಂಧಿಕರಿಗೆ ಹಂಚುತ್ತಿದ್ದರು. ಆದರೆ, ಕಳೆದೆರಡು ವರ್ಷಗಳಿಂದ ಈ ಆಚರಣೆ ನಗರ ಪ್ರದೇಶಗಳಲ್ಲಿ ಕಡಿಮೆಯಾಗುತ್ತಿದೆ.