

ಚಿತ್ರದುರ್ಗ: ಸದಾ ಸಮವಸ್ತ್ರದಲ್ಲಿ ಖಡಕ್ ಆಗಿರುತ್ತಿದ್ದ ಪೊಲೀಸ್ ಅಧಿಕಾರಿಗಳು-ಸಿಬ್ಬಂದಿ ಶ್ವೇತವರ್ಣದ ಟಿಶರ್ಟ್, ಕ್ಯಾಪ್ ಧರಿಸಿ ಜನಸಾಮಾನ್ಯರಂತೆ ಕೆಲ ತಾಸು ಕಳೆದರು. ಅವರೊಂದಿಗೆ ಯುವಕ-ಯುವತಿಯರು, ಕೆಲ ಸಂಘಟನೆಗಳ ಕಾರ್ಯಕರ್ತರು ಓಟದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಕರ್ನಾಟಕ ಪೊಲೀಸ್ ಪಡೆ ಸುವರ್ಣ ವರ್ಷ ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಾದಕ ದ್ರವ್ಯ ವಸ್ತುಗಳ ದುಷ್ಪರಿಣಾಮದ ಕುರಿತು ಜಾಗೃತಿ ಮೂಡಿಸುವ ಸದಾಶಯದೊಂದಿಗೆ ಕೋಟೆನಗರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮ್ಯಾರಥಾನ್ ವೇಳೆ ಗಮನಸೆಳೆದ ದೃಶ್ಯವಿದು.
5 ಕಿ.ಮೀ ಹಾಗೂ 10 ಕಿ.ಮೀ ದೂರ ಕ್ರಮಿಸುವ ಓಟದಲ್ಲಿ 800ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು. ಪ್ರಮುಖ ವೃತ್ತಗಳಲ್ಲಿ ಇರಿಸಿದ್ದ ನೀರು-ಜ್ಯೂಸ್ ಬಾಟಲುಗಳನ್ನು ಪಡೆಯುತ್ತಲೇ ಓಟಗಾರರು ಓಟದ ವೇಗ ಹೆಚ್ಚಿಸಿಕೊಳ್ಳುತ್ತಿದ್ದರು. ಮ್ಯಾರಥಾನ್ ಸಂಚರಿಸುವ ಮಾರ್ಗಗಳಲ್ಲಿ ಕೆಲಕಾಲ ಸಂಚಾರ ನಿರ್ಬಂಧಿಸಲಾಗಿತ್ತು.
ಜಿಲ್ಲಾ ಕ್ರೀಡಾಂಗಣ ಮುಂಭಾಗದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್‌ಕುಮಾರ್ ಮೀನಾ ಹಸಿರುನಿಶಾನೆ ತೋರುವ ಮೂಲಕ ಮ್ಯಾರಥಾನ್‌ಗೆ ಚಾಲನೆ ನೀಡಿದರು. ಅಲ್ಲಿಂದ ಆರಂಭವಾಗಿ ಜಿ.ಜಿ.ಸಮುದಾಯ ಭವನ, ಪ್ರಶಾಂತನಗರ, ಜೋಗಿಮಟ್ಟಿ ರಸ್ತೆ, ಮದಕರಿ ನಾಯಕ, ಅಂಬೇಡ್ಕರ್, ಗಾಂಧಿ ವೃತ್ತ, ಮೆದೇಹಳ್ಳಿ, ಸಂತೆಹೊಂಡ, ಜಿಲ್ಲಾಧಿಕಾರಿ ಮನೆ ರಸ್ತೆ, ಜಿಲ್ಲಾಸ್ಪತ್ರೆ ಮಾರ್ಗವಾಗಿ ಸಂಚರಿಸಿ ಕ್ರೀಡಾಂಗಣ ತಲುಪಿತು.
ವರ್ಷವಿಡಿ ಕಾರ್ಯಕ್ರಮ: ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಪೊಲೀಸ್ ಸಿಬ್ಬಂದಿಗೂ ರಾಜ್ಯವ್ಯಾಪಿ ಮ್ಯಾರಥಾನ್ ಆಯೋಜಿಸಲಾಗಿದೆ. ಜನಸಾಮಾನ್ಯರು ಲಿಂಕ್ ಮೂಲಕ ಹಾಗೂ ಸ್ಥಳದಲ್ಲೇ ನೋಂದಾಯಿಸಿಕೊಂಡು ಭಾಗಿಯಾಗಿದ್ದಾರೆ ಎಂದು ಎಸ್ಪಿ ಧರ್ಮೇಂದರ್‌ಕುಮಾರ್ ಮೀನಾ ತಿಳಿಸಿದರು.
ಪೊಲೀಸ್ ಇಲಾಖೆ ಹಾಗೂ ಪೊಲೀಸರು ರಾಜ್ಯಕ್ಕೆ ನೀಡುತ್ತಿರುವ ಕೊಡುಗೆ ಹಾಗೂ ಮಾದಕ ವಸ್ತುಗಳ ದುಷ್ಪಾರಿಣಾಮ ಕುರಿತಂತೆ ಜನರಲ್ಲಿ ತಿಳಿವಳಿಕೆ ಮೂಡಿಸಲು ಸ್ಪರ್ಧೆ ಆಯೋಜಿಸಲಾಗಿದೆ. ಕಾಲೇಜು ಹಾಗೂ ಎನ್ನೆಸ್ಸೆಸ್ ವಿವಿಧ ಘಟಕಗಳ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಅಲ್ಲದೆ, ಸೈಬರ್ ಅಪರಾಧ ಮತ್ತು ಡ್ರಗ್ಸ್ ಮುಕ್ತ ಸಮಾಜ ಶೀರ್ಷಿಕೆಯಡಿ ವರ್ಷವಿಡಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.
ಎಎಸ್ಪಿ ಕುಮಾರಸ್ವಾಮಿ, ಡಿವೈಎಸ್‌ಪಿಗಳಾದ ರಾಜಣ್ಣ, ಚೈತ್ರಾ, ಎಸ್.ಎಸ್.ಗಣೇಶ್, ದಿನಾಕರ್, ಇನ್ಸ್‌ಪೆಕ್ಟರ್ ಯುವರಾಜ್ ಇತರೆ ಅಧಿಕಾರಿಗಳಿದ್ದರು. ಸ್ಪರ್ಧೆಯಲ್ಲಿ ವಿಜೇತರಾದ ತಲಾ ಆರು ಮಂದಿ ಮಹಿಳಾ-ಪುರುಷರಿಗೆ ಪ್ರಶಸ್ತಿ, ಫಲಕ ನೀಡಿ ಸನ್ಮಾನಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮವೂ ನಡೆಯಿತು.