ಕೋಟೆನಗರಿಯಲ್ಲಿ ಅಯ್ಯಪ್ಪಸ್ವಾಮಿಯ ಅದ್ದೂರಿ ಮಹಾ ಕುಂಭಾಭಿಷೇಕ

Ayyappaswamy
Published on

ಚಿತ್ರದುರ್ಗ: ಕೋಟೆನಗರಿ ಮೆದೇಹಳ್ಳಿ ರಸ್ತೆಯ ಶ್ರೀ ಅಯ್ಯಪ್ಪಸ್ವಾಮಿ ಸನ್ನಿಧಾನದ ರಜತ ಮಹೋತ್ಸವದ ಅಂಗವಾಗಿ ನಡೆದ ದ್ವಿತೀಯ ಮಹಾ ಕುಂಭಾಭಿಷೇಕ ಬುಧವಾರ ಸಾವಿರಾರು ಭಕ್ತರ ಮಧ್ಯೆ ಅದ್ದೂರಿಯಾಗಿ ಜರುಗಿತು.

ಸಂಕಲ್ಪದ ಬೆಳ್ಳಿ ಹಾಗೂ ಪಂಚಲೋಹದ ಪೂರ್ಣಕುಂಭ ಕೈಯಲ್ಲಿಡಿದ ಅನೇಕ ಭಕ್ತರು ಶ್ರದ್ಧಾ ಭಕ್ತಿಯಿಂದ ಮಹಾಗಣಪತಿ, ಅಯ್ಯಪ್ಪಸ್ವಾಮಿ, ಸುಬ್ರಹ್ಮಣ್ಯ ಸ್ವಾಮಿ ದೇಗುಲ ಮೇಲ್ಭಾಗದ ಕಳಶ, ದೀಪಸ್ತಂಭ, ಗರುಡ ಕಂಬಕ್ಕೆ ಗಂಗಾಭಿಷೇಕ ಸಮರ್ಪಿಸಿ ಭಕ್ತಿಯ ಪರಾಕಾಷ್ಠೆಯಲ್ಲಿ ಮಿಂದೆದ್ದರು.

ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕೇರಳದ ಶಬರಿಮಲೆ ಮಾದರಿಯಲ್ಲೇ ನಿರ್ಮಿಸಿರುವ ಕೋಟೆನಾಡಿನ ಅಯ್ಯಪ್ಪಸ್ವಾಮಿ ಸನ್ನಿಧಾನ ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರವಾಗಿಯೂ ಹೊರಹೊಮ್ಮಿದ್ದು, ಭಕ್ತರನ್ನು ಆಕರ್ಷಿಸುವಲ್ಲಿ ಸಫಲವಾಗಿದೆ.

ಹನ್ನೆರೆಡು ವರ್ಷಕೊಮ್ಮೆ ಜರುಗುವ ಮಹಾ ಕುಂಭಾಭಿಷೇಕದಲ್ಲಿ ಮಾಲೆ ಧರಿಸದೆ, 18 ಮೆಟ್ಟಿಲೇರುವ ಅವಕಾಶವೂ ಸಾವಿರಾರು ಭಕ್ತರಿಗೆ ದೊರೆಯಿತು. ವಯಸ್ಸಿನ ಭೇದವಿಲ್ಲದೆ, ಸರ್ವ ಮಹಿಳಾ ಭಕ್ತರು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ದೇಗುಲದಲ್ಲಿ ಇಡೀ ದಿನ ಸಡಗರ, ಸಂಭ್ರಮ ಮನೆಮಾಡಿತ್ತು.

ಮಣಿಕಂಠನ ದೇಗುಲ ಆವರಣದ ದೇವರ ಮೂರ್ತಿಗಳಿಗೆ ಮುಂಜಾನೆ ಕರ್ಕಾಟಕ ಲಗ್ನದ ಶುಭ ಮುಹೂರ್ತದಲ್ಲಿ ಪ್ರತಿಷ್ಠಾಪನೆ, ಬ್ರಹ್ಮ, ಕುಂಭೇಷ ಮತ್ತು ನಿದ್ರಾ ಕಳಶಾಭಿಷೇಕ, ಪ್ರತಿಷ್ಠಾ ಬಲಿ, ನಿತ್ಯನೈಮಿತ್ತಿಕ ನಿರ್ಧಾರ, ಪ್ರತಿಷ್ಟಾದಕ್ಷಿಣ ಬಳಿಕ ಚಂಡಿಕಾ ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ ನೆರವೇರಿತು.

ನಂತರ ನೆರೆದಿದ್ದ ಭಕ್ತರಿಂದ ಶಬರಿಗಿರೀಶನ ನಾಮಸ್ಮರಣೆಯೊಂದಿಗೆ ಮಹಾ ಕುಂಭಾಭಿಷೇಕದ ವೇಳೆ ಜಯಘೋಷ ಮೊಳಗಿದವು. ಮೆಟ್ಟಿಲೇರುವಾಗಲೂ ಸ್ವಾಮಿಯೇ ಶರಣಂ ಅಯ್ಯಪ್ಪ ಎಂಬ ಹರ್ಷೋದ್ಗಾರ ಮೊಳಗಿಸಿದರು. ಸ್ವಾಮಿಯ ದರ್ಶನ ಪಡೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.

ವಯಸ್ಸಾದ ಹಿರಿಯರು ಸುಲಭವಾಗಿ ಮೆಟ್ಟಿಲೇರಲು ಕಬ್ಬಿಣದ ಬ್ಯಾರಿಕೇಡ್ ಮೂಲಕ ವ್ಯವಸ್ಥೆ ಕಲ್ಪಿಸಲಾಗಿತ್ತು.

ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್‌ನ ಅಧ್ಯಕ್ಷರು, ಪದಾಧಿಕಾರಿಗಳು, ನೂರಾರು ಸ್ವಯಂ ಸೇವಕರು ಇಡೀ ದಿನ ದೇಗುಲದಲ್ಲಿದ್ದು, ಎಲ್ಲ ಕಾರ್ಯಕ್ರಮಗಳು ವ್ಯವಸ್ಥಿತ ಹಾಗೂ ಸುಗಮವಾಗಿ ನಡೆಯುವಂತೆ ಕಾರ್ಯನಿರ್ವಹಿಸಿದರು.

ಮಹಾ ಅನ್ನದಾನ: ಬೃಹತ್ ಪೆಂಡಾಲ್‌ನಲ್ಲಿ ಮಹಾ ಅನ್ನದಾನದ ವ್ಯವಸ್ಥೆ ಮಾಡಲಾಗಿತ್ತು. 20ಸಾವಿರಕ್ಕೂ ಹೆಚ್ಚು ಭಕ್ತರು ಭಕ್ತರು ಗೋದಿ ಪಾಯಸ, ಪಲ್ಯ, ಅನ್ನ ಸಾಂಬಾರು ಪ್ರಸಾದ ಸವಿದರು.

ಮಹಾ ಕುಂಭಾಭಿಷೇಕ ಅಲಂಕಾರ: ಭಕ್ತರ ಕಣ್ಮನ ಸೆಳೆಯುವಂತೆ ಅಯ್ಯಪ್ಪಸ್ವಾಮಿಯ ಆಕರ್ಷಕ ಮೂರ್ತಿಗೆ ಮಹಾ ಕುಂಭಾಭಿಷೇಕದ ಮಾದರಿಯಲ್ಲೇ ಅಲಂಕರಿಸಲಾಗಿತ್ತು. ಇದಕ್ಕಾಗಿ ಹಳದಿ, ಕೆಂಪು, ನೀಲಿ, ಬಿಳಿ ವರ್ಣದ ಸೇವಂತಿ, ದುಂಡು ಮಲ್ಲಿಗೆ, ಸುಗಂಧರಾಜ, ಕನಕಾಂಬರ, ಬಟನ್ಸ್, ಗುಲಾಬಿ ಸೇರಿ ಇನ್ನಿತರೆ ಪುಷ್ಪ ಬಳಸಲಾಗಿತ್ತು. ಭೀಮಾಶಂಕರ, ಭೀಮಾಂಜನೇಯ, ಮಹಾಗಣಪತಿ, ಸುಬ್ರಹ್ಮಣ್ಯ ಸ್ವಾಮಿ ಮೂರ್ತಿಗಳಿಗೂ ಪುಷ್ಪಾಲಂಕಾರ ಸೇವೆ ನೆರವೇರಿತು.

ಅಭಿಷೇಕಕ್ಕಾಗಿ ವಿಶೇಷ ವ್ಯವಸ್ಥೆ: ಮೊದಲ ಮಹಡಿಯಲ್ಲಿನ ಗಣೇಶ, ಸುಬ್ರಹ್ಮಣ್ಯ, ಅಯ್ಯಪ್ಪಸ್ವಾಮಿ ದೇವಸ್ಥಾನಗಳ ಗೋಪುರ ಹಾಗೂ ಮೊದಲ ಮಹಡಿಯಿಂದ ಸುಮಾರು 20 ಅಡಿ ಎತ್ತರದ ಗರುಡಗಂಬದ ಮೇಲಿನವರೆಗೂ ಸುಸಜ್ಜಿತವಾಗಿ ಕೃತಕ ಮೆಟ್ಟಿಲುಗಳನ್ನು ನಿರ್ಮಾಣ ಮಾಡಲಾಗಿತ್ತು. ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್‌ನ ಪದಾಧಿಕಾರಿಗಳ ಮಾರ್ಗದರ್ಶನದಲ್ಲಿ ಭಕ್ತರು ಸಾವಧಾನದಿಂದ ಕಲಶಾಭಿಷೇಕ ನೆರವೇರಿಸಲು ಅನುವು ಮಾಡಿಕೊಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net