

ಚಿತ್ರದುರ್ಗ: ಕೋಟೆನಗರಿ ಸೇರಿ ಜಿಲ್ಲೆಯ ಕೆಲವೆಡೆ ಸೋಮವಾರ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗಿದ್ದು, ಕೆಲಕಾಲ ಜನಜೀವನ ಅಸ್ತವ್ಯಸ್ತಗೊಂಡಿತು. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು, ಜನ ಪರದಾಡುವಂತಾಯಿತು.
ಬೆಳಗ್ಗೆಯೇ ಮೋಡಕವಿದ ವಾತಾವರಣ ನಿರ್ಮಾಣವಾಗಿತ್ತು. 6.30ಕ್ಕೆ ಆರಂಭವಾಗಿ 7.30ರವರೆಗೂ ಬಿರುಸಿನ ಮಳೆಯಾಯಿತು. ಇದೇ ರೀತಿ ಮಧ್ಯಾಹ್ನ 3ರಿಂದ ಸಂಜೆ 4.30ರವರೆಗೂ ಸುರಿಯಿತು.
ಗುಡುಗು-ಮಿಂಚಿನ ಆರ್ಭಟ ಜೋರಾಗಿದ್ದ ಪರಿಣಾಮ ಹೊಲ, ತೋಟಗಳಲ್ಲಿ ಕೆಲಸ ಮಾಡಲು ಹೋದವರು ಗೂಡು ಸೇರಲು ಹರಸಾಹಸ ಪಟ್ಟರು.
ಮನೆಗಳಿಗೆ ನುಗ್ಗಿದ ನೀರು: ಇದ್ದಕ್ಕಿದ್ದಂತೆ ರಭಸವಾಗಿ ಸುರಿದ ಮಳೆಯಿಂದಾಗಿ ಕೋಟೆ ರಸ್ತೆಯ ಕೆಳಭಾಗ, ಅಗಳೇರಿ, ಕೆಳಗೋಟೆ, ನೆಹರು ನಗರ, ಚೇಳುಗುಡ್ಡ, ಬುದ್ಧನಗರ, ಸಂತೆಹೊಂಡ ಸೇರಿ ವಿವಿಧ ಬಡಾವಣೆಗಳ ತಗ್ಗು ಪ್ರದೇಶದ ಮನೆಗಳಿಗೂ, ಅಂಗಡಿಗಳಿಗೂ ನೀರು ನುಗ್ಗಿತು. ಹೊರಹಾಕಲು ನಾಗರಿಕರು ಹೈರಾಣಾದರು.
ಕೆಲವೇ ನಿಮಿಷಗಳಲ್ಲಿ ತುರುವನೂರು ರಸ್ತೆ, ಜೆಸಿಆರ್ ರಸ್ತೆ ಒಳಗೊಂಡು ಹಲವೆಡೆಗಳ ಕೆಳ ಸೇತುವೆಗಳ ಬಳಿ ಜಲಾವೃತ ನಿರ್ಮಾಣವಾಯಿತು. ಕೆಲಕಾಲ ವಾಹನ ಸವಾರರು ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ಉಂಟಾಯಿತು. ಚರಂಡಿಗಳು ತುಂಬಿ ಕೊಳಚೆ ನೀರು ರಸ್ತೆಗೆ ಹರಿಯಿತು.
ವಿದ್ಯುತ್ ಸಂಪರ್ಕಿಸುವ ಕೆಲ ಮಾರ್ಗಗಳಲ್ಲಿ ಸಮಸ್ಯೆಯಾದ ಪರಿಣಾಮ ಸಂಜೆಯ ನಂತರ ಕೆಲ ಭಾಗಗಳಲ್ಲಿ ಸಾಕಷ್ಟು ಹೊತ್ತು ವಿದ್ಯುತ್ ವ್ಯತ್ಯಯವಾಯಿತು.
ಹೊಳಲ್ಕೆರೆಯಲ್ಲಿ 86.8 ಮಿ.ಮೀ ಮಳೆ: ಮಳೆಯ ವಿವರದನ್ವಯ ಜಿಲ್ಲೆಯ ಹೊಳಲ್ಕೆರೆಯಲ್ಲಿ 86.8 ಮಿ.ಮೀ ಮಳೆಯಾಗಿದ್ದು, ಇದು ಸೋಮವಾರ ಅತ್ಯಧಿಕ ಮಳೆಯಾದ ಪ್ರದೇಶವಾಗಿದೆ. ರಾಮಗಿರಿಯಲ್ಲಿ 49.4, ಚಿಕ್ಕಜಾಜೂರು 18.5, ಬಿ.ದುರ್ಗ 22 ಮಿ.ಮೀ, ಎಚ್‌ಡಿ ಪುರ 36, ಚಿತ್ರದುರ್ಗ 21.6, ಐನಹಳ್ಳಿ 31.4, ಸಿರಿಗೆರೆ 78, ಹೊಸದುರ್ಗ 24.9, ಮತ್ತೋಡು 13.4, ಶ್ರೀರಾಂಪುರ 50, ಮಾಡದಕೆರೆ 26, ಮೊಳಕಾಲ್ಮುರಿನಲ್ಲಿ 39.2, ರಾಯಾಪುರ 23, ರಾಂಪುರ 27, ದೇವಸಮುದ್ರ 51.2, ನಾಯಕನಹಟ್ಟಿ 16.2 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ತಿಳಿಸಿದೆ.