

ಕಿಕ್ಕೇರಿ: ಪಟ್ಟಣದ ಕೋಟೆ ಮಾರಿಕಾಂಬ ದೇವಿ ಹಬ್ಬ ಸಂಭ್ರಮ ಸಡಗರದಿಂದ ಭಾನುವಾರ ಜರುಗಿತು.
ವಿಜಯನಗರದ ಸಾಮಂತ ದೊರೆಗಳ ಆಳ್ವಿಕೆಯ ಪಾಳೇಗಾರರ ಕಾಲದಲ್ಲಿ ನಿರ್ಮಿತವಾದ ಕೋಟೆ ಗಣಪತಿ, ಆಂಜನೇಯ ಗುಡಿಗೆ ಹೊಂದಿಕೊಂಡಿರುವ ಪುರಾತನ ಮಾರಮ್ಮ ಗುಡಿ ತನ್ನದೆ ಆದ ಶಕ್ತಿ, ಮಹಿಮೆಯನ್ನು ಹೊಂದಿರುವ ಸಲುವಾಗಿ ಹೋಬಳಿಯ ವಿವಿಧೆಡೆಯಿಂದ ಅಧಿಕವಾಗಿ ಭಕ್ತರು ಆಗಮಿಸಿದ್ದರು.
ದೇವಿಗೆ ಎಣ್ಣೆ ಮಜ್ಜನ, ಎಳನೀರು ಅಭಿಷೇಕ ನೆರವೇರಿಸಿ, ಬೇವಿನ ಸೊಪ್ಪಿನಿಂದ ತಂಪು ಮಾಡಿದರು. ಬೆಳಗ್ಗಿನಿಂದಲೂ ಮಹಿಳೆಯರು, ಮಕ್ಕಳು ಗುಡಿಗೆ ಆಗಮಿಸಿ ಸಾಲು ನಿಂತು ದೇವಿಯ ತಲೆ ಮೇಲೆ ಗಂಗಾಜಲ ಸುರಿಯುವ ಮೂಲಕ ತಂಪು ಮಾಡಿದರು. ಜತೆಗೆ ಎಣ್ಣೆ ಮಜ್ಜನ, ಅರಿಶಿಣ ಹಾಕುತ್ತ, ಬೇವಿನ ಸೊಪ್ಪನ್ನು ಮುಡಿಗೆ ಅರ್ಪಿಸಿ ಭಕ್ತಿ ಮೆರೆದರು.
ಕರೊನಾ ಕಾರಣದಿಂದ ಸತತ ಎರಡು ವರ್ಷದಿಂದ ಹಬ್ಬ ನಡೆದಿರಲಿಲ್ಲ. ಈ ಬಾರಿ ಉಪಶಮನವಾಗಿರುವುದರಿಂದ ಪಟ್ಟಣದಲ್ಲಿ ಹಬ್ಬದ ಸಂಭ್ರಮ ಆಚರಣೆಗೆ ಮಕ್ಕಳು, ಮಹಿಳೆಯರು ಬಲು ಖುಷಿಯಾಗಿದ್ದರು. ರೋಗರುಜಿನ ರಕ್ಷಕಿ ದೇವಿ ಎಂದೇ ಕರೆಯುವ ಕೋಟೆ ಮಾರಮ್ಮನಿಗೆ ಹೋಬಳಿಯ ಸುತ್ತಮುತ್ತಲಿನಿಂದ ನೂರಾರು ಭಕ್ತರು ಆಗಮಿಸಿದ್ದರು. ಗಣಪತಿ ದೇವರಿಗೆ ಮೊದಲ ಪೂಜೆ ಸಲ್ಲಿಸಿ ನಂತರ ದೇವಿಗೆ ಜಲಾಭಿಷೇಕ ಮಾಡಲು ಕಾದು ನಿಂತಿದ್ದರು.
ಊರ ಮಾರಮ್ಮ ಗ್ರಾಮ ರಕ್ಷಕಿಯಾಗಿದ್ದು ಮಕ್ಕಳಿಗೆ ಸಿಡುಬು, ದಡಾರ, ಕರೊನಾದಂಥ ವೈರಾಣು, ಸಾಂಕ್ರಾಮಿಕ ರೋಗಗಳು ಬಾರದಂತೆ ಮಕ್ಕಳನ್ನು ತಾಯಂದಿರು ಹೆಚ್ಚಿನ ಸಂಖ್ಯೆಯಲ್ಲಿ ಗುಡಿಗೆ ಕರೆದುಕೊಂಡು ಬಂದು ಪ್ರಾರ್ಥಿಸಿದರು.
ದೇವಿಗೆ ತಂಬಿಟ್ಟಿನ ಆರತಿ, ಹೂವಿನ ಆರತಿ ಬೆಳಗಿದ ಮಹಿಳೆಯರು ಹಣ್ಣು ಕಾಯಿ ಅರ್ಪಿಸಿ ದೀಪ, ಧೂಪದಾರತಿ ಬೆಳಗಿದರು.
ಅವರೆಕಾಳು ಸಾರು, ಮುದ್ದೆ, ಅನ್ನದ ತಳಿಗೆಯನ್ನು ದೇವಿಗೆ ತಯಾರಿಸಿ ನೈವೇದ್ಯವಾಗಿ ಸಮರ್ಪಿಸಿದರು.