ಕೋಟೆ ಪ್ರವಾಸಿಗರಿಗೆ ಮೂಲಭೂತ ಸೌಕರ್ಯ ಕಲ್ಪಿಸಿ

ctd---00004
Published on

ಚಿತ್ರದುರ್ಗ: ಐತಿಹಾಸಿಕ ಕೋಟೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಕುಡಿಯುವ ನೀರು, ಶೌಚಗೃಹ ಸೇರಿ ವಿವಿಧ ಮೂಲ ಸೌಕರ್ಯ ಒದಗಿಸುವಂತೆ ಕೋಟೆ ವಾಯುವಿಹಾರಿಗಳ ಸಂಘದ ಸದಸ್ಯರು ಹಾಗೂ ನಾಗರಿಕರು ಗುರುವಾರ ಸಂಸದ ಗೋವಿಂದ ಕಾರಜೋಳ ಅವರಿಗೆ ಮನವಿ ಸಲ್ಲಿಸಿದರು.

ಕೋಟೆ ವಾಯು ವಿಹಾರಗಳ ಸಂಘದ ಅಧ್ಯಕ್ಷ ಆರ್. ಸತ್ಯಣ್ಣ ಮಾತನಾಡಿ, ಕೋಟೆ ಪ್ರವೇಶದ್ವಾರಕ್ಕೆ ಬರುವಷ್ಟರಲ್ಲಿ ಸುಸ್ತಾಗುವ ಪ್ರವಾಸಿಗರಿಗೆ ಶೌಚಗೃಹ, ಕುಡಿಯುವ ನೀರಿನದೆ ಪ್ರಮುಖ ಸಮಸ್ಯೆಯಾಗಿದೆ ಎಂದು ತಿಳಿಸಿದರು.

ಕೋಟೆ ವೀಕ್ಷಿಸಲು ಕನಿಷ್ಠ ಎರಡು ಗಂಟೆಯಾದರೂ ಬೇಕು. ಪ್ರವಾಸಿಗರಿಗೆ ಜಲಬಾಧೆ ಕಾಡಿದರೆ ಸಮರ್ಪಕ ಶೌಚಗೃಹಗಳಿಲ್ಲ. ಕೋಟೆಯ ಕೆಳಭಾಗ ಹಾಗೂ ಮೇಲುದುರ್ಗದ ಎರಡು ಶೌಚಗೃಹ ದುರಸ್ತಿಯಲ್ಲಿವೆ. ಹೀಗಾಗಿ, ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬಯಲು ಪ್ರದೇಶದಲ್ಲಿಯೇ ಮಲಮೂತ್ರ ವಿಸರ್ಜನೆ ಮಾಡುವಂತಾಗಿದೆ ಎಂದರು.

ವರ್ಷಾಂತ್ಯ ಹಿನ್ನೆಲೆಯಲ್ಲಿ ಶಾಲಾ ಮಕ್ಕಳು ಸೇರಿ ದಿನಕ್ಕೆ ಸಾವಿರಾರು ಪ್ರವಾಸಿಗರು ಕೋಟೆ ವೀಕ್ಷಣೆಗೆ ಬರುತ್ತಿದ್ದಾರೆ. ಬೇಸಿಗೆಕಾಲ ಆರಂಭವಾಗುವುದರಲ್ಲಿದೆ. ಅಷ್ಟರೊಳಗೆ ಪ್ರವಾಸಿಗರು ಮತ್ತು ಕೋಟೆ ಕಾವಲು ಸಿಬ್ಬಂದಿಗೆ ಮೂಲಭೂತ ಸೌಕರ್ಯ ಒದಗಿಸಬೇಕು ಎಂದು ಮನವಿ ಮಾಡಿದರು.

ಹಿರಿಯ ನಾಗರಿಕರಿಗೆ ಹಿಂದಿನಂತೆ ಕೋಟೆಯೊಳಗೆ ಉಚಿತ ಪ್ರವೇಶ ಕಲ್ಪಿಸಬೇಕು. ನಗರದ ಜನತೆಗೆ ಕೋಟೆಯ ಪ್ರವೇಶ ಶುಲ್ಕದಲ್ಲಿ ವಿನಾಯಿತಿ ನೀಡಬೇಕು. ಕೋಟೆಯ ಬನಶಂಕರಿ, ಏಕನಾಥೇಶ್ವರಿ, ಸಂಪಿಗೆ ಸಿದ್ದೇಶ್ವರ, ಗಣಪತಿ ದೇವಸ್ಥಾನಗಳ ಪೂಜಾ ಕಾರ್ಯಕ್ರಮ ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಭಕ್ತರಿಗೆ ಕೋಟೆ ಪ್ರವೇಶಕ್ಕೆ ಅನುಕೂಲ ಕಲ್ಲಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಹಿರಿಯ ನಾಗರೀಕರಾದ ಶಾಂತಪ್ಪ, ಮಲ್ಲಿಕಾರ್ಜುನಪ್ಪ, ಕೂಬನಾಯಕ್, ನಿವೃತ್ತ ಶಿಕ್ಷಣಾಧಿಕಾರಿ ನಾಗರಾಜ್, ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಕೋಟೆ ಶಾಖೆಯ ಯೋಗ ಶಿಕ್ಷಕ ರವಿ ಕೆ. ಅಂಬೇಕರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net