

ಚಿತ್ರದುರ್ಗ: ಮಧ್ಯ ಕರ್ನಾಟಕ ಭಾಗದಲ್ಲಿರುವ ಐತಿಹಾಸಿಕ ಕಲ್ಲಿನಕೋಟೆಯನ್ನು ಪ್ರಸಿದ್ಧ ಪ್ರವಾಸೋದ್ಯಮ ಕೇಂದ್ರವಾಗಿಸುವ ನಿಟ್ಟಿನಲ್ಲಿ ಅಂದಾಜು 40 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಭರವಸೆ ನೀಡಿದರು.
ಜಿಪಂ ಮಿನಿ ಸಭಾಂಗಣದಲ್ಲಿ ಭಾರತೀಯ ಪುರಾತತ್ವ ಮತ್ತು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳೊಂದಿಗೆ ಶನಿವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.
ಕೋಟೆಯೊಳಗೆ ಕಾಮಗಾರಿ ನಡೆಸಲು ಎಎಂಇಆರ್‌ಸಿಯಿಂದ 30 ಕೋಟಿ ರೂ. ಅನುದಾನ ಬಂದಿದ್ದು, ಬಾಕಿ ಇರುವ 10 ಕೋಟಿ ರೂ. ಬಳಸಿಕೊಂಡು ಮಾದರಿಯಾಗುವ ನಿಟ್ಟಿನಲ್ಲಿ ಪ್ರಗತಿ ಸಾಧಿಸಲಾಗುವುದು ಎಂದರು.
ಕೋಟೆಯೊಳಗೆ ಶಬ್ಧ ಸಮೇತ ತ್ರಿಡಿ ಮಾದರಿಯಲ್ಲಿ ವರ್ಣಮಯ ಲೇಸರ್ ಶೋ, ಪುರಾತನ ದೇಗುಲಗಳ ಜೀರ್ಣೋದ್ಧಾರ, ಗೋಪಾಲಸ್ವಾಮಿ ಹೊಂಡದಿಂದ ಕೋಟೆ ದ್ವಾರದವರೆಗೂ ನೀರಿನ ಪೈಪ್‌ಲೈನ್ ಅಳವಡಿಕೆ, ಪ್ರವಾಸಿಗರ ಅನುಕೂಲಕ್ಕಾಗಿ 81 ಲಕ್ಷ ರೂ. ವೆಚ್ಚದಲ್ಲಿ ಶೌಚಗೃಹ, 3.98 ಕೋಟಿ ರೂ. ವೆಚ್ಚದಲ್ಲಿ ಇಡೀ ಕೋಟೆಯಲ್ಲಿ ಪಾತ್‌ವೇ, ಉದ್ಯಾನ, ಮಕ್ಕಳ ಆಟಿಕೆ ಸಾಮಗ್ರಿ ಸೇರಿ ಪ್ರಾಚೀನತೆಗೆ ಯಾವುದೇ ರೀತಿಯಲ್ಲೂ ಧಕ್ಕೆ ಉಂಟಾಗದಂತೆ ಅಭಿ ವೃದ್ಧಿಪಡಿಸಲು ನೀಲ ನಕ್ಷೆ ಸಿದ್ಧಪಡಿಸಲಾಗುವುದು ಎಂದು ಹೇಳಿದರು.
ಕೋಟೆಯಲ್ಲಿ ಶಬ್ಧ ಮತ್ತು ಲೇಸರ್ ಬೆಳಕಿನ ಪ್ರದರ್ಶನ ಅಳವಡಿಸಲು ಈ ಮುಂಚೆ ಕಾಮಗಾರಿ ನಡೆಸಿದವರು ಲೇಟ್ ಆ್ಯಂಡ್ ಶೋ ಮಾಡಿ ಹೋಗಿದ್ದಾರೆ. ಹೀಗಾಗಿ ಅದೆಲ್ಲವನ್ನೂ ತೆರವುಗೊಳಿಸಲು ಸೂಚಿಸಿದ್ದೇನೆ ಎಂದರು.
9 ಕಾಮಗಾರಿಗಳಿಗಾಗಿ 9 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದೇವೆ. ಆದರೆ, ಅದು ಕೂಡ ಮಂದಗತಿಯಲ್ಲಿ ಸಾಗಿದೆ. ಈ ಪೈಕಿ ಒಂದೆರಡು ಹೊರತುಪಡಿಸಿ ಉಳಿದೆಲ್ಲವಕ್ಕೂ ಮಾರ್ಪಾಡು ಮಾಡಿ 15 ದಿನದೊಳಗೆ ನೀಲ ನಕ್ಷೆಯೊಂದಿಗೆ, ಮತ್ತೊಮ್ಮೆ ಅನುಮೋದನೆ ಪಡೆದು ಒಂದೂವರೆ ತಿಂಗಳೊಳಗೆ ಕಾಮಗಾರಿ ಆರಂಭಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಅಭಿವೃದ್ಧಿಗೆ ಪದೇ ಪದೆ ತೊಡಕು ಉಂಟಾಗುತ್ತಿದ್ದ ಕಾರಣ ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳು ಅಡ್ಡಿಯಾಗಿದ್ದಾರಾ ಎಂದು ನಾನೇ ಬೆಂಗಳೂರು ಮತ್ತು ದೆಹಲಿಯಲ್ಲಿ ಈ ಹಿಂದೆ ಕರೆದಿದ್ದ ಸಭೆಯಲ್ಲಿ ಪ್ರಸ್ತಾಪಿಸಿದ್ದೆ. ಏನೆಲ್ಲ ಪ್ರಗತಿಯಾಗಬೇಕು ಎಂಬುದಾಗಿ ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಸಲ್ಲಿಸಿದರೆ, ಎನ್‌ಒಸಿ ನೀಡುವುದರ ಜತೆಗೆ ಅಭಿವೃದ್ಧಿಗೂ ಸಹಕರಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ. ಹೀಗಾಗಿ ಕೋಟೆಯಲ್ಲಿ ಪರಿಶೀಲನೆ ನಡೆಸಿದ್ದಾರೆ ಎಂದು ಮಾಹಿತಿ ನೀಡಿದರು.
ಚಂದ್ರವಳ್ಳಿಯ ಕೆರೆ ಅಭಿವೃದ್ಧಿಗೆ ಹಣದ ಕೊರತೆ ಇಲ್ಲ. ಇಲ್ಲಿಯೂ ವಾಯುವಿಹಾರಿಗಳು, ಪ್ರವಾಸಿಗರ ಅನುಕೂಲಕ್ಕಾಗಿ ವಾಹನಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆ, ಸುಂದರ ಉದ್ಯಾನ, ಲ್ಯಾಂಡ್ ಸ್ಕೇಪಿಂಗ್, ಮಕ್ಕಳ ಆಟಿಕೆ ಸಾಮಗ್ರಿಗಳ ಅಳವಡಿಕೆ ಸೇರಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಲಾಗುವುದು ಎಂದರು.
ಮದಕರಿನಾಯಕರ ಇತಿಹಾಸ ಒಳಗೊಂಡಂತೆ ಈ ಜಿಲ್ಲೆಯ ಹಲವರ ಅಪೇಕ್ಷೆ ಅನುಸಾರ ಕೋಟೆ ಮತ್ತು ಚಂದ್ರವಳ್ಳಿಯನ್ನು ಸರ್ವಾಂಗೀಣ ಅಭಿವೃದ್ಧಿ ಪಡಿಸಲಾಗುವುದು. ಏನೆಲ್ಲ ಪ್ರಗತಿ ಮಾಡಲು ಸಾಧ್ಯವಿದೆ ಎಂಬುದನ್ನು ಈ ತಿಂಗಳ ಅಂತ್ಯದೊಳಗೆ ನೂತನ ನೀಲನಕ್ಷೆ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಎಂದು ಸಚಿವರು ಸಲಹೆ ನೀಡಿದರು.
ಭಾರತೀಯ ಪುರಾತತ್ವ ಇಲಾಖೆಯ ಹೆಚ್ಚುವರಿ ಮಹಾನಿರ್ದೇಶಕ ಜಾನವಿ ಶರ್ಮಾ ಮಾತನಾಡಿ, ಭೋಗ ನಂದೀಶ್ವರ ಸ್ವಾಮಿ ದೇಗುಲ ಅಭಿವೃದ್ಧಿ ಮಾದರಿಯಲ್ಲಿ ಕೋಟೆಯೊಳಗೆ ಒಂದಿಷ್ಟು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬಹುದು ಎಂದು ಸಲಹೆ ನೀಡಿದರು. ಇಲಾಖೆಯ ಪ್ರಾದೇಶಿಕ ನಿರ್ದೇಶಕ ಎನ್.ಕೆ.ಪಾಟಕ್, ಸೂಪರಿಂಟೆಂಡೆಂಟ್ ಪುರಾತತ್ವಾಧಿಕಾರಿ ಬಿಪಿನ್ ಚಂದ್ರ, ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಾಪ್ರಭು, ಜಿಪಂ ಸಿಇಒ ಎಂ.ಎಸ್.ದಿವಾಕರ್, ಕಿರಣ್‌ರೆಡ್ಡಿ ಇತರರಿದ್ದರು.
*ಕೋಟ್
ಚಂದ್ರವಳ್ಳಿಯ ಅಭಿವೃದ್ಧಿ ದೃಷ್ಟಿಯಿಂದ ಜು. 18ರಂದು ಜಿಲ್ಲಾಡಳಿತ, ಭಾರತೀಯ ಪುರಾತತ್ವ ಮತ್ತು ಪ್ರವಾಸೋದ್ಯಮ ಇಲಾಖೆಯಿಂದ ಜಂಟಿ ಸಮೀಕ್ಷೆ ನಡೆಯಲಿದೆ. 25ರೊಳಗೆ ವರದಿ ಸಲ್ಲಿಸಲು ಸೂಚಿಸಿದ್ದು, ಆನಂತರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.
ಡಾ.ರಾಮ್‌ಪ್ರಸಾತ್ ಮನೋಹರ್, ಪ್ರವಾಸೋದ್ಯಮ ಇಲಾಖೆ ಆಯುಕ್ತ