

ಚಿಕ್ಕಮಗಳೂರು: ವಾರ್ಷಿಕವಾಗಿ ಅದ್ದೂರಿ ವೆಚ್ಚದಲ್ಲಿ ಆಚರಿಸುವ ಹಬ್ಬಗಳನ್ನು ತಾತ್ಕಾಲಿಕವಾಗಿ ಮುಂದೂಡುವ ಮೂಲಕ ಗ್ರಾಮಕ್ಕೊಂದು ಸುಂದರ ದೇವಾಲಯ ನಿರ್ಮಾಣ ಮಾಡಿದರೆ ಗ್ರಾಮಸ್ಥರಲ್ಲಿ ಧಾರ್ಮಿಕ ಭಾವನೆ ಬೆಳೆಯಲು ಸಹಕಾರಿಯಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಅಭಿಪ್ರಾಯಪಟ್ಟರು.
ತಾಲೂಕಿನ ಸಿರಬಡಿಗೆ ಗ್ರಾಮದಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಲಕ್ಷಿö್ಮÃ ದೇವಿ ದೇವಸ್ಥಾನಕ್ಕೆ ಗುರುವಾರ ಬಾಗಿಲು ಪೂಜೆ ನೆರವೇರಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಭಾವನೆಗಳಿಂದ ಯುವ ಜನಾಂಗ ದೂರ ಇರುತ್ತಿರುವುದು ಆಂತಕದ ಸಂಗತಿ. ಗ್ರಾಮದ ಹಿರಿಯರು ದೇವಾಲಯ ನಿರ್ಮಾಣ ಮಾಡಲು ಭದ್ರ ಬುನಾದಿ ಹಾಕಿದಾಗ ಧಾರ್ಮಿಕತೆ, ಸಂಸ್ಕೃತಿ, ಪರಂಪರೆ ಬೆಳೆಯುತ್ತದೆ ಎಂದು ಹೇಳಿದರು.
ಶಾಸಕ ಎಚ್.ಡಿ.ತಮ್ಮಯ್ಯ ಅವರ ಅನುದಾನದಲ್ಲಿ ೧೦ ಲಕ್ಷ ರೂ. ಹಾಗೂ ವಿಧಾನ ಪರಿಷತ್ ಸದಸ್ಯರ ಅನುದಾನದಲ್ಲಿ ೫ ಲಕ್ಷ ರೂ. ಮಂಜೂರು ಮಾಡಿಸುವುದಾಗಿ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
ಅನಗತ್ಯ ಖರ್ಚುವೆಚ್ಚಗಳಿಗೆ ಕಡಿವಾಣ ಹಾಕಿ ಅದೇ ಹಣವನ್ನು ಸುಂದರ ದೇವಾಲಯಗಳ ನಿರ್ಮಾಣಕ್ಕೆ ಬಳಸಲು ಮುಂದಾಗಬೇಕು ಎಂದು ಕರೆ ನೀಡಿದರು.
ಸಿರಬಡಿಗೆ ಗ್ರಾಮಕ್ಕೆ ಭೇಟಿ ನೀಡಿದ ಗಾಯತ್ರಿ ಶಾಂತೇಗೌಡ ಅವರನ್ನು ಗ್ರಾಮದ ಜನತೆ ಆತ್ಮೀಯವಾಗಿ ಸ್ವಾಗತಿಸಿ ಗೌರವ ಸಮರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಕಿಸಾನ್ ಸೆಲ್ ಬ್ಲಾಕ್ ಅಧ್ಯಕ್ಷ ಸಿ.ಸಿ.ಮಧು, ಗ್ರಾಪಂ ಸದಸ್ಯ ಎಚ್.ಎಸ್.ಚಂದ್ರಶೇಖರ್, ಗ್ರಾಮಸ್ಥರಾದ ಎಸ್.ಕೆ.ನಾಗಪ್ಪ, ತಿಮ್ಮೇಗೌಡ, ಲೋಕೇಶ್, ಜಯಣ್ಣ, ಯುವರಾಜ, ತೇಜಮೂರ್ತಿ ಮತ್ತಿತರರಿದ್ದರು.