

ಹಲಗೂರು: ಕಾರುಗಳನ್ನು ಬಾಡಿಗೆ ಪಡೆದುಕೊಂಡು ಮಾಲೀಕರ ಅನುಮತಿ ಇಲ್ಲದೆ ನಂಬರ್ ಪ್ಲೇಟ್ ಬದಲಾಯಿಸಿ ಬೇರೆಯವರಿಗೆ ಮಾರಾಟ ಮಾಡಿ ವಂಚಿಸಿದ್ದ ಆರೋಪಿಯನ್ನು ಬಂಧಿಸಿ ಆತನಿಂದ 1 ಕೋಟಿ ರೂ. ಮೌಲ್ಯದ ವಿವಿಧ ಕಂಪನಿಗೆ ಸೇರಿದ 19 ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಾರುಗಳನ್ನು ಅಡಮಾನ ಇಟ್ಟು ಮಾಲೀಕರಿಗೆ ವಂಚಿಸುತ್ತಿದ್ದ ತಿ.ನರಸೀಪುರ ಮೂಲದ ಎಂ.ಕುಮಾರಸ್ವಾಮಿ ಬಂಧಿತ. ಈತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬಾಡಿಗೆ ಆಸೆಗೆ ಕಾರುಗಳನ್ನು ನೀಡಿ ವಂಚನೆಗೊಳಾಗಿದ್ದ ಮಾಲೀಕರು ಹಲಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಹಲಗೂರು ಠಾಣೆ ಎಸ್‌ಐ ರವಿಕುಮಾರ್ ಮತ್ತು ಸಿಬ್ಬಂದಿ ಆರೋಪಿಯನ್ನು ಬಂಧಿಸುವ ಮೂಲಕ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಂಡ್ಯ, ಮೈಸೂರು, ಚಾಮನಾಜನಗರ ಜಿಲ್ಲೆಗಳಲ್ಲಿ ಕಾರುಗಳ ಮಾಲೀಕರಿಂದ ಕರಾರು ಒಪ್ಪಂದ ಮೂಲಕ ಆರೋಪಿ ವಾಹನಗಳನ್ನು ಬಾಡಿಗೆಗೆ ಪಡೆದು ವಂಚಿಸಿರುವುದು ತನಿಖೆಯಿಂದ ಗೊತ್ತಾಗಿದೆ.
ಮಂಡ್ಯ ಎಸ್ಪಿ ಎನ್.ಯತೀಶ್ ಎಎಸ್ಪಿ ಎಂ.ವೇಣುಗೋಪಾಲ್, ಡಿವೈಎಸ್ಪಿ ನವೀನ್‌ಕುಮಾರ್, ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀಧರ್ ಅವರ ಮಾರ್ಗದರ್ಶನದಲ್ಲಿ ಎಸ್‌ಐ ರವಿಕುಮಾರ್ ನೇತೃತ್ವದಲ್ಲಿ ಸಿಬ್ಬಂದಿ ಪ್ರಭುಸ್ವಾಮಿ, ರಿಯಾಜ್, ಪ್ರಸನ್ನ, ಉಮೇಶ್, ನಾಗೇಂದ್ರ, ಜಯಕುಮಾರ್, ರಫೀಕ್ ನದಾಫ್, ಮಲ್ಲಿಕಾರ್ಜುನ್ ಚುಳಕಿ, ಸಿದ್ದರಾಜು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.