ಕೋಟಿ ರೂ.ಮೌಲ್ಯದ 100 ಕೆಜಿ ಗಾಂಜಾ ಜಪ್ತಿ

sp
Published on

ಬೀದರ್: ಅಕ್ರಮವಾಗಿ ಮಹಾರಾಷ್ಟ್ರ ಕಡೆಗೆ ಸಾಗಿಸುತ್ತಿದ್ದ ಒಂದು ಕೋಟಿ ರೂ.ಮೌಲ್ಯದ 100 ಕೆಜಿ ಗಾಂಜಾವನ್ನು ರಾಷ್ಟ್ರೀಯ ಹೆದ್ದಾರಿ-65ರ ನಿಂಬೂರ ಕ್ರಾಸ್ ಬಳಿ ವಶಪಡಿಸಿಕೊಂಡು ನಾಲ್ವರನ್ನು ಬಂಧಿಸಲಾಗಿದೆ.

ತೆಲಂಗಾಣದ ಜಹೀರಾಬಾದ್ ಕಡೆಯಿಂದ ಟಾಟಾ ಸುಮೋ ವಾಹನದಲ್ಲಿ ಗಾಂಜಾ ಸಾಗಣೆ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಎರಡು ತಂಡಗಳು ಈ ಕಾರ್ಯಾಚರಣೆ ನಡೆಸಿವೆ ಎಂದು ಶನಿವಾರ ಸುದ್ದಿಗಾರರಿಗೆ ಎಸ್ಪಿ ಚನ್ನಬಸವಣ್ಣ ಲಂಗೋಟಿ ವಿವರಣೆ ನೀಡಿದರು.

ತಲಾ 2 ಕೆಜಿ ತೂಕದ 50 ಪ್ಯಾಕೆಟ್ ನಲ್ಲಿ ಸಾಗಿಸುತ್ತಿದ್ದ ಒಟ್ಟು 100 ಕೆಜಿ ಗಾಂಜಾ ದೊರೆತಿದೆ. ತೆಲಂಗಾಣದಿಂದ ಮಹಾರಾಷ್ಟ್ರಕ್ಕೆ ಇದು ಸಾಗಿಸಲಾಗುತ್ತಿದೆ ಎಂದು ವಿಚಾರಣೆ ವೇಳೆ ಎಂದು ತಿಳಿದುಬಂದಿದೆ. ಬಂಧಿತರಿಂದ ನಾಲ್ಕು ಮೊಬೈಲ್, 800 ರೂ. ನಗದು, 3 ಲಕ್ಷ ರೂ. ಮೌಲ್ಯದ ವಾಹನ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಬಂಧಿತರೆಲ್ಲ ಮಹಾರಾಷ್ಟ್ರದ ಉಸ್ಮಾನಾಬಾದ್ ಜಿಲ್ಲೆಯವರು. ಈ ಹಿಂದೆ ಬಂಧಿತರ ವಿರುದ್ಧ ರಾಜ್ಯದಲ್ಲಿ ಯಾವ ಪ್ರಕಣಗಳು ಸಹ ದಾಖಲಾಗಿಲ್ಲ. ಆದರೆ ಗಡಿಗೆ ಹೊಂದಿಕೊಂಡ ಬೇರೆ ರಾಜ್ಯಗಳಲ್ಲಿ ಪ್ರಕರಣ ದಾಖಲಾದ ಶಂಕೆ ಇದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಮನ್ನಾಎಖೇಳ್ಳಿ ಠಾಣೆಯಲ್ಲಿ ಪ್ರಕಣ ದಾಖಲಾಗಿದೆ ಎಂದು ಹೇಳಿದರು.

ಮನ್ನಾಎಖೇಳ್ಳಿ ಪಿಎಸ್ಐ ಬಸವರಾಜ, ಚಿಟಗುಪ್ಪ ಪಿಎಸ್ಐ ಮಹೇಂದ್ರಕುಮಾರ, ಎಸ್ಎಸ್ಟಿ ತಂಡದ ಅಧಿಕಾರಿ ಧೂಳಪ್ಪ ಹೊಸಳ್ಳಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಎರಡೂ ತಂಡಕ್ಕೆ ತಲಾ ಒಂದು ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ ಎಂದು ಹೇಳಿದರು.

ಮೇ 10ರಂದು ನಡೆಯುವ ವಿಧಾನಸಭೆ ಚುನಾವಣೆ ಶಾಂತಿಯುತವಾಗಿ ಮತ್ತು ಯಾವ ಅಕ್ರಮ ನಡೆಯದಂತೆ ನೆರೆಯ ರಾಜ್ಯಗಳ ಪೊಲೀಸ್ ಇಲಾಖೆ ಸಹಕಾರ ಪಡೆಯಲಾಗುವುದು.ಅಕ್ರಮ ಚಟುವಟಿಕೆ ಕಂಡುಬಂದರೆ ಸಾರ್ವಜನಿಕರು ಸಮೀಪದ ಠಾಣೆಗೆ ಮಾಹಿತಿ ನೀಡಿ ಸಹಕರಿಸಬೇಕು ಎಂದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣನವರ್, ಹುಮನಾಬಾದ್ ಎಎಸ್ಪಿ ಶಿವಾಂಶು ರಜಪುತ, ಭಾಲ್ಕಿ ಎಎಸ್ಪಿ ಪೃಥ್ವಿಕ್ ಶಂಕರ, ಚಿಟಗುಪ್ಪ ಸಿಪಿಐ ಮಹೇಶಗೌಡ ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net