

ವಿಜಯಪುರ: ಮಹಾಮಾರಿ ಕರೊನಾಗೆ ಬಲಿಯಾದ ವ್ಯಕ್ತಿ ಶವ ನೀಡಲು ಸತಾಯಿಸಿದ ಖಾಸಗಿ ಆಸ್ಪತ್ರೆ ಎದುರು ಸಂಬಂಧಿಗಳ ಆಕ್ರಂದನ ಕಂಡು ಕಣ್ಣೀರಾದ ಸಾರ್ವಜನಿಕರು, ಶುಲ್ಕಕ್ಕಾಗಿ ಕರವಸ್ತ್ರ ಹಾಸಿ ಭಿಕ್ಷೆ ಬೇಡಿ ಆಸ್ಪತ್ರೆ ವೈಖರಿ ವಿರುದ್ಧ ಆಕ್ರೋಶ ಹೊರಹಾಕಿದರು.
ನಗರದ ಡಿಸಿಸಿ ಬ್ಯಾಂಕ್ ಹತ್ತಿರದ ಕೋಟಿ ಆಸ್ಪತ್ರೆ ಬುಧವಾರ ಎದುರು ಬೆಳ್ಳಂಬೆಳಗ್ಗೆ ಇಂಥದ್ದೊಂದು ಘಟನೆ ನಡೆದಿದ್ದು, ಕುಟುಂಬಸ್ಥರ ಗೋಳು ಕೇಳಿ ಸಾರ್ವಜನಿಕರು ಹಾಗೂ ಸಾಮಾಜಿಕ ಸಂಘಟನೆಗಳು ನೆರವಿಗೆ ನಿಂತವು. ಅಲ್ಲದೆ, ಕೂಡಲೇ ಶವ ಹಸ್ತಾಂತರಿಸಲು ಮನವಿ ಮಾಡಿದರು. ಆಸ್ಪತ್ರೆ ಆಡಳಿತ ಮಂಡಳಿ ಒಪ್ಪದ ಕಾರಣ ತಮಟೆ ಬಾರಿಸಿ ಹೋರಾಟ ಆರಂಭಿಸಿದರು. ಮಾತ್ರವಲ್ಲ, ನೆರೆದವರಿಂದ ಹಣ ಸಂಗ್ರಹಿಸಿ ಶುಲ್ಕ ಪಾವತಿಸುವ ಪ್ರಕ್ರಿಯೆಗೆ ಮುನ್ನುಡಿ ಬರೆದರು.
ಬೆಳಗಾವಿ ಜಿಲ್ಲೆಯ ಸಂಕೇಶ್ವರದ ನಿವಾಸಿಯೊಬ್ಬರು ಕರೊನಾ ಪೀಡಿತರಾಗಿದ್ದರು. ಆರಂಭದಲ್ಲಿ ಅಥಣಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸಿದ್ದರು. ಆ ಆಸ್ಪತ್ರೆಯವರು ಕೋಟಿ ಆಸ್ಪತ್ರೆಗೆ ಶಿಫಾರಸು ಮಾಡಿದ್ದರು. ಬಳಿಕ ಕುಟುಂಬಸ್ಥರು ಕೋಟಿ ಆಸ್ಪತ್ರೆಗೆ ದಾಖಲು ಮಾಡಿದ್ದರಿಂದ 13 ದಿನ ಚಿಕಿತ್ಸೆಗೆ ಆ ಆಸ್ಪತ್ರೆಯವರು 7ಲಕ್ಷಕ್ಕೂ ಅಧಿಕ ಶುಲ್ಕ ನಿಗದಿಪಡಿಸಿದ್ದಾರೆ. ಈಗಾಗಲೇ 4 ಲಕ್ಷಕ್ಕೂ ಅಧಿಕ ಶುಲ್ಕ ಪಾವತಿಸಲಾಗಿದೆ. ಆದರೂ ರೋಗಿ ಆರೋಗ್ಯ ವಿಚಾರಿಸಲು ಆಸ್ಪತ್ರೆಯವರು ಕುಟುಂಬಸ್ಥರಿಗೆ ಆಸ್ಪದ ನೀಡಿಲ್ಲ. ಮಂಗಳವಾರವೇ ರೋಗಿ ಮೃತಪಟ್ಟಿದ್ದು, ಆತನ ಪತ್ನಿಯನ್ನೂ ಹತ್ತಿರಕ್ಕೆ ಬಿಟ್ಟುಕೊಟ್ಟಿಲ್ಲ. ಬಾಕಿ 3 ಲಕ್ಷ ರೂ.ಶುಲ್ಕ ಪಾವತಿಸಿಯೇ ಶವ ತೆಗೆದುಕೊಂಡು ಹೋಗುವಂತೆ ಒತ್ತಾಯಿಸಿದ್ದಾರೆಂಬುದು ಕುಟುಂಬಸ್ಥರ ಆರೋಪ.
ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಿದರು. ಪೊಲೀಸರ ಮನವೊಲಿಕೆಗೆ ಮಣಿಯದ ಪ್ರತಿಭಟನಾಕಾರರು ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿಗಳು ಬರಬೇಕೆಂದು ಪಟ್ಟು ಹಿಡಿದರು. ಬಳಿಕ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಹೇಂದ್ರ ಕಾಪ್ಸೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರಲ್ಲದೆ, ಸೂಕ್ತ ದಾಖಲೆಗಳನ್ನು ಕೊಟ್ಟರೆ ಪ್ರಕರಣದ ತನಿಖೆ ಮಾಡಿ ತಪ್ಪು ಕಂಡು ಬಂದಲ್ಲಿ ಆಸ್ಪತ್ರೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಆಸ್ಪತ್ರೆಯಿಂದ ಮೊದಲು ಶವ ಬಿಡುಗಡೆಗೊಳಿಸಿ ಪಾಲಿಕೆ ವಾಹನದಲ್ಲಿ ಅಂತಿಮ ಸಂಸ್ಕಾರಕ್ಕೆ ಬೀಳ್ಕೊಟ್ಟರು.
ಪ್ರತಿಭಟನೆಯಲ್ಲಿ ಮುಖಂಡರಾದ ಉಮೇಶ ವಂದಾಲ, ಶಿವಾನಂದ ಭುಂಯಾರ, ಶರಣು ಸಬರದ, ಬಸವರಾಜ ಬೈಚಬಾಳ, ಸಂತೋಷ ಕಳಲೆ, ಅಮಿತ್ ಅವಜಿ, ಸಚಿನ್ ಸವನಳ್ಳಿ, ಪ್ರಲ್ಹಾದ ಕಾಂಬಳೆ ಮತ್ತಿತರರಿದ್ದರು.
ಕರೊನಾ ರೋಗಿಯ ಕಡೆಯವರಿಂದ ಹೆಚ್ಚುವರಿ ಶುಲ್ಕ ಆಪಾದನೆ ಹಿನ್ನೆಲೆ ಕೋಟಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದವರ ವಿರುದ್ಧ ದೂರು ದಾಖಲಿಸಲಾಗಿದೆ. ಮುಖಂಡರಾದ ಉಮೇಶ ವಂದಾಲ, ಮಹೇಶ ಬೋವಿ, ಬಿ.ಎ. ಬಿರಾದಾರ, ರವಿ, ಶ್ರೀಶೈಲ ವಡ್ಡೋಡಗಿ ಮುಂತಾದವರ ಮೇಲೆ ಪ್ರಕರಣ ದಾಖಲಾಗಿದೆ. ಆಸ್ಪತ್ರೆ ಶುಲ್ಕ ಪಾವತಿಸುವಂತೆ ಹೇಳಿದಾಗ ಗಲಾಟೆ ಮಾಡಿದ್ದಾಗಿ ಆಸ್ಪತ್ರೆ ಆಡಳಿತ ಮಂಡಳಿ ಆದರ್ಶ ನಗರಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಪಿಎಸ್‌ಐ ಎಸ್.ಸಿ. ಗುರುಬಟ್ಟಿ ತಿಳಿಸಿದ್ದಾರೆ.
ಸಂಬಂಧಿತ ರೋಗಿ ನಮ್ಮ ಆಸ್ಪತ್ರೆಗೆ ದಿ. 6ರಂದು ಕೋವಿಡ್ ಚಿಕಿತ್ಸೆಗಾಗಿ ದಾಖಲಾದರು. ಅವರ ಸ್ಥಿತಿ ತೀರಾ ಚಿಂತಾಜನಕವಾಗಿದ್ದರಿಂದ ದಿನಾಂಕ 8ರಂದು ವೆಂಟಿಲೇಟರ್ ಚಿಕಿತ್ಸೆಗೆ ಒಳಪಡಿಸಿ, ಸೂಕ್ತ ಕೋವಿಡ್ ಚಿಕಿತ್ಸೆ ನೀಡಲಾಗುತ್ತಿತ್ತು. ರೋಗಿಯ ಸಂಬಂಧಿಕರಿಗೆ ನಿತ್ಯ ಅವರ ಸ್ಥಿತಿ ತಿಳಿಸಲಾಗುತ್ತಿತ್ತು. ರೋಗಿಯ ಕಡೆಯವರಲ್ಲಿ ಹಣ ಇಲ್ಲದಿದ್ದರೂ ವೆಂಟಿಲೇಟರ್ ಹಾಗೂ ಔಷಧಿಯನ್ನು ಆಸ್ಪತ್ರೆಯ ಕಡೆಯಿಂದಲೇ ನೀಡಲಾಗುತ್ತಿತ್ತು. ದುರಾದೃಷ್ಟವಶಾತ್ ದಿ. 22ರಂದು ಸಂಜೆ 7 ಗಂಟೆ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ರೋಗಿ ನಿಧನರಾದರು. ರೋಗಿಯ ಒಟ್ಟು ಹದಿನೇಳು ದಿನದ ಆಸ್ಪತ್ರೆ ವೆಚ್ಚ 4,13,200 ರೂ.ಗಳಾಗಿತ್ತು. ಇದರಲ್ಲಿ 1,82,000 ರೂ.ಗಳನ್ನು ಸಂಬಂಧಿಕರು ಪಾವತಿಸಿದ್ದರು. ಬಾಕಿ ಉಳಿದ ಹಣ 2,31,200 ರೂ. ಗಳನ್ನು ಪಾವತಿಸಬೇಕಿತ್ತು. ಜೊತೆಗೆ ಔಷಧಗಳ ವೆಚ್ಚ 25,000 ರೂ.ಗಳನ್ನೂ ಭರಿಸಬೇಕಿತ್ತು. ಅವರ ಪರಿಸ್ಥಿತಿ ನೋಡಿ 56 ಸಾವಿರ ರೂ. ಕಡಿಮೆಮಾಡಿ, ಉಳಿದ 2 ಲಕ್ಷ ರೂ.ಗಳನ್ನು ಕಟ್ಟಲು ಸೂಚಿಸಲಾಯಿತು. ಆದರೆ ಸಂಬಂಧಿಕರು ಹಣ ಇಲ್ಲ ಎಂದಿದ್ದರಿಂದ, ಮಾನವೀಯತೆ ದೃಷ್ಟಿಯಿಂದ ಮೊದಲು ಶವ ಸಂಸ್ಕಾರ ಮುಗಿಸಿ ಬನ್ನಿ. ನಂತರ ಮಾತನಾಡೋಣ ಎಂದು ಹೇಳಿದೆವು. ಶವ ಸಾಗಾಟ ಹಾಗೂ ಅಂತ್ಯಸಂಸ್ಕಾರಕ್ಕೆ ಬೇಕಾದ ವೆಚ್ಚ ಸೇರಿದಂತೆ ಅಂದಾಜು ಹತ್ತು ಸಾವಿರ ಆಗುತ್ತದೆ ಎಂದು ವಾಹನ ಸಿಬ್ಬಂದಿ ಹೇಳಿದರೂ, ಅದನ್ನೂ ಆಸ್ಪತ್ರೆಯವರೇ ಕೊಡಲಿ ಎಂದು ಮೃತ ವ್ಯಕ್ತಿಯ ಸಂಬಂಧಿಕರು ಆಸ್ಪತ್ರೆಯ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾದರು. ಅಂತಿಮವಾಗಿ ಸ್ವಲ್ಪವಾದರೂ ಹಣ ಪಾವತಿಸಿ ಶವವನ್ನು ಸಾಗಿಸಲು ಹೇಳಿದರೂ ಸಂಬಂಧಿಕರು ಕೇಳದೆ ಮರುದಿನ ಶವವನ್ನು ಹಣ ಕೊಡದೆ ತೆಗೆದುಕೊಂಡು ಹೋಗುವುದು ಹೇಗೆ ಎಂಬುದು ತಿಳಿದಿದೆ? ಎಂದು ಅವಾಚ್ಯ ಶಬ್ದ ಬಳಸಿ ಮಾತನಾಡಿದ್ದಲ್ಲದೇ, ಮಾರನೇ ದಿನ ಬೆಳಗ್ಗೆ ನೂರಕ್ಕೂ ಅಧಿಕ ಜನರು ಬಂದು ಆಸ್ಪತ್ರೆಯ ಎದುರು ಗಲಾಟೆ ಮಾಡಿ ಆಸ್ಪತೆಯ ಘನತೆಗೆ ಕುಂದು ತಂದಿದ್ದಾರೆ. ಇದರಲ್ಲಿ ನಮ್ಮ ತಪ್ಪು ಏನೂ ಇಲ್ಲ ಎಂದು ಆಸ್ಪತ್ರೆಯ ಮಾಲೀಕರಾದ ಡಾ. ಪರೀಕ್ಷಿತ್ ಕೋಟಿ ‘ವಿಜಯವಾಣಿ’ಗೆ ಮಾಹಿತಿ ನೀಡಿದ್ದಾರೆ.
ಆಸ್ಪತ್ರೆಯವರು ಹಣ ಸುಲಿಗೆ ಮಾಡುವುದೊಂದೇ ಮಾಡಿದ್ದಾರೆ. ನನ್ನ ಅಳಿಯನ ಮುಖ ನೋಡಲು ಸಹ ಬಿಟ್ಟಿಲ್ಲ. ಕೇಳಿದಾಗೊಮ್ಮೆ ಹಣ ಕಟ್ಟಿದ್ದೇವೆ. ಆದರೂ ಆತನ ಜೀವ ಉಳಿಸಲಿಲ್ಲ. ಸತ್ತ ಮೇಲೂ ಹಣ ಕಟ್ಟಿದರೆ ಶವ ಕೊಡುವುದಾಗಿ ಹೇಳಿದ ವೈದ್ಯರು ನಮಗೆ ಹತ್ತಿರಕ್ಕೂ ಬಿಟ್ಟುಕೊಳ್ಳಲಿಲ್ಲ.
ಶಾಂತಾಬಾಯಿ, ಮೃತನ ಸಂಬಂಧಿ
ಕರೊನಾ ಹೆಸರಲ್ಲಿ ಆಸ್ಪತ್ರೆಯವರು ಸುಲಿಗೆಗೆ ಇಳಿದಿದ್ದಾರೆ. 10 ದಿನದಲ್ಲಿ 4 ಲಕ್ಷ ಬಿಲ್ ಮಾಡಿದ್ದಾರೆ. ಇನ್ನೂ 3 ಲಕ್ಷ ರೂ. ಬಿಲ್ ಕಟ್ಟುವಂತೆ ಸತಾಯಿಸುತ್ತಿದ್ದಾರೆ. ಇಷ್ಟೆಲ್ಲ ಕಟ್ಟಿದರೂ ರೋಗಿ ಬದುಕಿಲ್ಲ. ಸಾರ್ವಜನಿಕರ ಶವದ ಮೇಲೆ ಆಸ್ಪತ್ರೆ ಕಟ್ಟುತ್ತಿದ್ದಾರೆ. ಇವರಿಗೆಲ್ಲ ಮಾನವೀಯತೆ ಇದೆಯಾ? ಕೂಡಲೇ ಈ ಆಸ್ಪತ್ರೆ ಮೇಲೆ ಕ್ರಮವಾಗಬೇಕು.
ಉಮೇಶ ವಂದಾಲ, ಹೋರಾಟಗಾರ
ಸ್ಥಳಕ್ಕೆ ಹೋಗುವಷ್ಟರಲ್ಲಿ ಕುಟುಂಬಸ್ಥರಿಗೆ ಶವ ಕೊಟ್ಟಿದ್ದರು. ಕುಟುಂಬಸ್ಥರು ದೂರು ಕೊಟ್ಟಿಲ್ಲ. ಕೊಟ್ಟ ನಂತರ ಆ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಪೊಲೀಸರ ಮಧ್ಯಸ್ಥಿಕೆಯಲ್ಲಿ ಸಮಸ್ಯೆ ಬಗೆ ಹರಿದಿತ್ತು. ಆದರೂ, ಲಿಖಿತವಾಗಿ ದೂರು ಕೊಟ್ಟರೆ ಕ್ರಮತೆಗೆದುಕೊಳ್ಳಲಾಗುವುದು.
ಡಾ. ಮಹೇಂದ್ರ ಕಾಪ್ಸೆ, ಜಿಲ್ಲಾ ಆರೋಗ್ಯ ಅಧಿಕಾರಿ